ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀವ್ ಹಂತಕಿ ನಳಿನಿ ಬಿಡುಗಡೆಗೆ ತಮಿಳುನಾಡು ನಕಾರ (Tamil Nadu govt | Rajiv Gandhi | Nalini Sriharan | Prison Advisory Board)
Bookmark and Share Feedback Print
 
ವೆಲ್ಲೋರ್ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹಂತಕಿ ನಳಿನಿ ಶ್ರೀಹರನ್‌ಳನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡಲು ತಮಿಳುನಾಡು ಸರಕಾರ ನಿರಾಕರಿಸಿದೆ.

ಈಗಾಗಲೇ 19 ವರ್ಷ ಜೈಲಿನಲ್ಲಿ ಕಳೆದಿರುವ ನಳಿನಿ, ತನ್ನ ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಸಾಯುವ ಮೊದಲು ತನ್ನ ಮಗಳೊಂದಿಗೆ ಕೆಲ ಕಾಲ ಕಳೆಯಲು ಬಯಸುತ್ತಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಳು.

ಈ ಮನವಿ ಸಂಬಂಧ ಕಾರಾಗೃಹ ಸಲಹಾ ಸಮಿತಿಯನ್ನು ರಚಿಸುವಂತೆ ನ್ಯಾಯಾಲಯವು ಸರಕಾರಕ್ಕೆ ನಿರ್ದೇಶನ ನೀಡಿತ್ತು. ಕೆಲ ಸಮಯದ ಹಿಂದೆಯೇ ತನ್ನ ವರದಿ ಸಲ್ಲಿಸಿದ್ದ ಸಮಿತಿಯು, ನಳಿನಿಯನ್ನು ಯಾಕೆ ಬಿಡುಗಡೆ ಮಾಡಬಾರದು ಎಂದು ಎಂಟು ಕಾರಣಗಳನ್ನು ನೀಡಿದೆ ಎಂದು ಮೂಲಗಳು ಹೇಳಿವೆ.

ನಳಿನಿಯನ್ನು ಬಿಡುಗಡೆ ಮಾಡಬೇಕೆಂಬ ಯಾವುದೇ ಒತ್ತಡವೂ ಸರಕಾರದ ಮೇಲಿಲ್ಲ ಎಂದು ನ್ಯಾಯಾಲಯಕ್ಕೆ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಸರಕಾರ ತಿಳಿಸಿದ್ದು, ಕೈದಿಗಳ ಸಲಹಾ ಸಮಿತಿಯು ನೀಡಿರುವ ವರದಿಯಂತೆ ಅವಧಿಗೆ ಮೊದಲು ನಳಿನಿಯನ್ನು ಬಿಡುಗಡೆ ಮಾಡಲು ತಾನು ಸಿದ್ಧನಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಜೈಲಿನಲ್ಲಿ ನಳಿನಿ ಸಭ್ಯ ನಡತೆ ಹೊಂದಿದ್ದು, ಈ ಅಂಶವನ್ನೂ ಕೈದಿಗಳ ಸಲಹಾ ಸಮಿತಿಯು ಗಣನೆಗೆ ತೆಗೆದುಕೊಂಡಿದೆ. ಹೆಣ್ಣು ಮಗುವೊಂದನ್ನು ಹೊಂದಿರುವ ನಳಿನಿ ಗಂಡ ಮುರುಗನ್ ಇದೇ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿರುವ ಕಾರಣ ಅನುಕಂಪವನ್ನೂ ಪರಿಗಣಿಸಲಾಗುತ್ತದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು.

1991ರ ಜೂನ್ 14ರಂದು ಬಂಧನಕ್ಕೊಳಗಾಗಿದ್ದ ನಳಿನಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಇತರ 25 ಮಂದಿ ಜತೆಗೆ 1998ರ ಜನವರಿಯಲ್ಲಿ ಮರಣದಂಡನೆ ವಿಧಿಸಿತ್ತು. ಬಳಿಕ 1999ರ ಮೇ ತಿಂಗಳಲ್ಲಿ ನಳಿನಿ ಮತ್ತು ಇತರ ಮೂವರಿಗೆ ಮಾತ್ರ ಮರಣದಂಡನೆಯನ್ನು ಖಾಯಂಗೊಳಿಸಿ ಆದೇಶ ನೀಡಿತ್ತು.

ಆದರೆ 2000 ಇಸವಿಯ ಏಪ್ರಿಲ್ 24ರಂದು ರಾಜ್ಯ ಸರಕಾರವು ಆಕೆಯ ಶಿಕ್ಷೆಯನ್ನು ಜೀವಾವಧಿಗೆ ಸೀಮಿತಗೊಳಿಸಿತ್ತು. ಆದರೆ 2007ರಲ್ಲಿ ತನ್ನನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡಬೇಕು ಎಂದು ಆಕೆ ಸಲ್ಲಿಸಿದ್ದ ಅರ್ಜಿಯನ್ನು ಸರಕಾರ ತಳ್ಳಿ ಹಾಕಿತ್ತು. ಬಳಿಕ ಆಕೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಳು.

ಪ್ರಧಾನಿಯಾಗಿದ್ದ ರಾಜೀವ್ ಅವರನ್ನು ತಮಿಳುನಾಡಿನ ಶ್ರೀಪೆರಂಬೂರ್ ಎಂಬಲ್ಲಿ 1991ರ ಮೇ 21ರಂದು ಆತ್ಮಹತ್ಯಾ ಬಾಂಬರ್ ಮೂಲಕ ಹತ್ಯೆ ಮಾಡಲಾಗಿತ್ತು. ಶ್ರೀಲಂಕಾ ತಮಿಳರಿಗೆ ರಾಜೀವ್ ಅಡ್ಡಗಾಲಾಗಿದ್ದರು ಎಂದು ಆರೋಪಿಸಿ ಎಲ್‌ಟಿಟಿಇ ಈ ಕೃತ್ಯ ನಡೆಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ