ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಸರಿ-ಹಸಿರು ಧ್ವಜ ವಿವಾದ; ಹಳೆ ಹೈದರಾಬಾದ್ ಉದ್ವಿಗ್ನ (Hyderabad tense | communal clashes | Andhra Pradesh | K Rosaiah)
Bookmark and Share Feedback Print
 
ಆಂಧ್ರಪ್ರದೇಶ ರಾಜಧಾನಿ ಹೈದರಾಬಾದ್‌ ಹಳೆ ನಗರದ ಎರಡು ಭಿನ್ನ ಕೋಮಿನ ನಡುವೆ ಕಾಣಿಸಿಕೊಂಡ ಧ್ವಜ ವಿವಾದವು ಕೋಮುಗಲಭೆಯಾಗಿ ಮಾರ್ಪಟ್ಟಿದ್ದು, ಶನಿವಾರ ರಾತ್ರಿ ಆರಂಭಗೊಂಡಿರುವ ಘರ್ಷಣೆ ಸೋಮವಾರವೂ ಮುಂದುವರಿದಿದೆ ಎಂದು ವರದಿಗಳು ಹೇಳಿವೆ.

ಭಾರೀ ಹಿಂಸಾಚಾರಗಳ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿವೆ. ಸಾವಿರಕ್ಕೂ ಹೆಚ್ಚು ಪ್ಯಾರಾಮಿಲಿಟರಿ ಸಿಬ್ಬಂದಿ ಹಾಗೂ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಸೋಮವಾರ ಆಂಧ್ರಪ್ರದೇಶ ತಿಳಿಸಿದೆ.

ಇದರ ಹೊರತಾಗಿಯೂ ನಗರದಲ್ಲಿ ಉದ್ನಿಗ್ನತೆ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಕೆ. ರೋಸಯ್ಯ ವಿಧಾನಸಭೆಗೆ ತಿಳಿಸಿದ್ದಾರೆ.

ಕನಿಷ್ಠ 70 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಹಲವೆಡೆ ಪೊಲೀಸರ ಮೇಲೆ ಕಲ್ಲೆಸೆಯಲಾಗಿದೆ. ಹತ್ತಾರು ವಾಹನಗಳು, ಕೆಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಜನತೆ ಬೀದಿಗಿಳಿದು ಪರಸ್ಪರ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಪ್ರಾರ್ಥನಾ ಮಂದಿರಗಳಿಗೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಓಲ್ಡ್ ಸಿಟಿಯಲ್ಲಿ ನಡೆದಿರುವ ಹಿಂಸಾಚಾರದಿಂದ ಕನಿಷ್ಠ 36 ಮಂದಿ ಗಾಯಗೊಂಡಿದ್ದಾರೆ. ನಗರದ ದಕ್ಷಿಣ ವಲಯದ 18 ಹಾಗೂ ಪಶ್ಚಿಮ ವಲಯದ ನಾಲ್ಕು ಪೊಲೀಸ್ ಠಾಣಾ ಪ್ರದೇಶಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಗಲಭೆಗೆ ಧ್ವಜ ಕಾರಣ...
ಹೈದರಾಬಾದ್ ಹಳೆ ನಗರದ ಮೂಸಾ ಬೊವ್ಲಿ ಪ್ರದೇಶದಲ್ಲಿದ್ದ ಮುಸ್ಲಿಮರ ಹಸಿರು ಧ್ವಜಗಳನ್ನು ಕಿತ್ತು ಅಲ್ಲಿ ಕೇಸರಿ ಧ್ವಜಗಳನ್ನು ಸ್ಥಾಪಿಸಲು ಹಿಂದೂ ಸಂಘಟನೆಗಳ ಕೆಲವು ಕಾರ್ಯಕರ್ತರು ಯತ್ನಿಸಿದಾಗ ಎರಡು ಕೋಮುಗಳ ನಡುವೆ ಘರ್ಷಣೆ ಹುಟ್ಟಿಕೊಂಡಿತ್ತು.

ಇದು ರಾತೋರಾತ್ರಿ ನಗರದಾದ್ಯಂತ ಹರಡಿ ಭಾನುವಾರ ಮುಂಜಾನೆ ಹೊತ್ತಿಗೆ ಭಾರೀ ಅನಾಹುತಕ್ಕೆ ಕಾರಣವಾಗಿತ್ತು. ಭಾನುವಾರ ಮುಗ್ಧ ಜನರನ್ನು ಗುರಿ ಮಾಡಿದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುವುದು, ಹಲ್ಲೆ ನಡೆಸುವುದರಲ್ಲಿ ನಿರತರಾಗಿದ್ದರು.

ಜತೆಗೆ ಎಸ್‌ಎಂಎಸ್‌ನಿಂದಾಗಿ ಗಲಭೆ ಹೆಚ್ಚಾಗಲು ಕಾರಣವಾಗಿತ್ತು. ಪ್ರಾರ್ಥನಾ ಮಂದಿರಕ್ಕೆ ದಾಳಿ ನಡೆಸಲಾಗಿದೆ ಎಂದು ಕಿಡಿಗೇಡಿಗಳು ಮೊಬೈಲ್ ಸಂದೇಶದ ಮೂಲಕ ಗಲಭೆ ಹೆಚ್ಚಿಸಲು ಯತ್ನಿಸುತ್ತಿದ್ದ ಬಗ್ಗೆಯೂ ವರದಿಗಳು ಬಂದಿವೆ.
ಸಂಬಂಧಿತ ಮಾಹಿತಿ ಹುಡುಕಿ