ಇತ್ತೀಚೆಗಷ್ಟೇ ದುಡ್ಡಿನ ಹಾರದಿಂದಲೇ ಸುದ್ದಿ ಮಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರನ್ನು 'ಮಾಲಾ'ವತಿ ಎಂದು ಜರೆದಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವರುಣ್ ಗಾಂಧಿ, ಅವರ 'ಮಮತೆ'ಯನ್ನು ನಾನು ಮರೆತಿಲ್ಲ; ನಮಗೂ ಒಂದು ಕಾಲವಿದೆ. ಆಗ ಅದನ್ನು ವಾಪಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ತನ್ನ ದೊಡ್ಡಪ್ಪನ ಮಗ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯ ಪ್ರಭಾವವನ್ನು ಕುಗ್ಗಿಸುವ ಯತ್ನವಾಗಿ ಆರೆಸ್ಸೆಸ್ ಬೆಂಬಲದಿಂದ ಪಕ್ಷದ ಪ್ರಮುಖ ಹುದ್ದೇಗೇರಿದ ನಂತರ ಮೊತ್ತ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ವರುಣ್, ಉತ್ತರ ಪ್ರದೇಶದಲ್ಲಿ ಗಾಂಧಿ-ಗಾಂಧಿ ನಡುವಿನ ಕದನಕ್ಕೆ ತಂತ್ರ ರೂಪಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಯಾವತಿಯವರನ್ನು ತರಾಟೆಗೆ ತೆಗೆದುಕೊಂಡಿರುವ ವರುಣ್, 'ಬಡವರಿಗೆ ನೀಡಲು ಹಣವಿಲ್ಲದ ಸರಕಾರ ಐದು ಕೋಟಿ ರೂಪಾಯಿ ಮೌಲ್ಯದ ಹಾರವನ್ನು ಹಾಕಿಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ' ಎಂದಿದ್ದಾರೆ.
ಅವರನ್ನು 'ಮಾಯಾ' ಎನ್ನಲೋ ಅಥವಾ 'ಮಾಲಾವತಿ' ಎನ್ನಲೋ ಎಂಬುದು ನನಗೆ ತಿಳಿಯುತ್ತಿಲ್ಲ. ಅವರ ಬಗ್ಗೆ ನನಗೆ ಶ್ರೇಷ್ಠ ಗೌರವವಿದೆ. ಚುನಾವಣೆ ಸಂದರ್ಭದಲ್ಲಿ ಆಕೆ ನನಗೆ ಅಗಾಧ ಪ್ರೀತಿಯ ಹೊಳೆಯನ್ನೇ ಹರಿಸಿದ್ದಾರೆ. ನಮ್ಮ ಕಾಲ ಬರಲಿ, ಆಗ ಆಕೆ ನೀಡಿದ್ದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ನಾನು ನೀಡುತ್ತೇನೆ ಎಂದಷ್ಟೇ ಈಗ ನಾನು ಹೇಳಬಲ್ಲೆ ಎಂದು ಕಳೆದ ವರ್ಷ ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿದ್ದ ವರುಣ್ ತಿಳಿಸಿದರು.
ಪಕ್ಷದ ಪ್ರಮುಖ ಹುದ್ದೆಗೇರಿದ ಬಳಿಕ ವರುಣ್ ಬಾಯಿಯಿಂದ ಯಾವ ಮಾತುಗಳು ಹೊರಗೆ ಬರಬಹುದು ಮತ್ತು ವರ್ತನೆ ಹೇಗಿರಬಹುದು ಎಂಬ ಕುರಿತು ಎಲ್ಲರ ಕಣ್ಣುಗಳೂ ಗಾಂಧಿ ಕುಟುಂಬದ ಕುಡಿಯ ಮೇಲಿದ್ದವು. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಅದೇ ನಾಣ್ಯವನ್ನು ಎಸೆಯುವ ತಂತ್ರಕ್ಕೆ ಬಿಜೆಪಿ ಬಂದಿರುವುದರ ಜತೆಗೆ ಹಿಂದುತ್ವ ಸಿದ್ಧಾಂತಕ್ಕೆ ಪಕ್ಷ ಅಂಟಿಕೊಂಡಿರುವುದು ಸ್ಪಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ವರುಣ್, ಗಾಂಧಿ ಎಂಬ ಹೆಸರು ತನಗೆ ಲಾಭವಾಗಿ ಪರಿಣಮಿಸಿರುವುದನ್ನು ಒಪ್ಪಿಕೊಂಡಿದ್ದಾರೆ.
ನಾವೆಲ್ಲರೂ ಕೆಲಸ ಮಾಡಲು ಬಯಸುತ್ತೇವೆ. ಆದರೆ ನನ್ನ ಹೆಸರು ವರುಣ್ ಗಂಗೂಲಿ ಎಂದಿರುತ್ತಿದ್ದರೆ ನಾನು ಇಂದು ಈ ವೇದಿಕೆಯಲ್ಲಿ ಜಾಗ ಪಡೆಯುತ್ತಿರಲಿಲ್ಲ ಎಂಬುದು ಮಾತ್ರ ಸತ್ಯ. ಅದೇ ಹೊತ್ತಿಗೆ ಸಾಮಾನ್ಯ ಜನರೂ ಕೂಡ ರಾಜಕೀಯದಲ್ಲಿ ಪಾಲು ತೆಗೆದುಕೊಳ್ಳುವುದು ಕೂಡ ಅಷ್ಟೇ ಅಗತ್ಯವಿದೆ ಎಂದರು.