ಜಾತಿ ಗೌರವ ರಕ್ಷಣೆಗೆ ಜೋಡಿ ಹತ್ಯೆ; ಐವರು ಪಾತಕಿಗಳಿಗೆ ಗಲ್ಲು
ಕರ್ನಾಲ್, ಮಂಗಳವಾರ, 30 ಮಾರ್ಚ್ 2010( 19:54 IST )
ಸಾಮಾಜಿಕ ಕಟ್ಟಳೆಗಳನ್ನು ವಿರೋಧಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಜೋಡಿಯನ್ನು ಹತ್ಯೆಗೈದಿದ್ದ ಐವರು ಪಾತಕಿಗಳಿಗೆ ಹರ್ಯಾಣದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ.
ಸ್ವಗೋತ್ರದ ಗಂಡು-ಹೆಣ್ಣು ಮದುವೆಯಾಗಿದ್ದಾರೆ ಎಂದು ತೀರ್ಪು ನೀಡಿದ್ದ ಸಮುದಾಯವೊಂದರ ಪಂಚಾಯತ್ ಕಟ್ಟೆಯು ಅವರಿಬ್ಬರನ್ನು ಕೊಂದು ಹಾಕಿರುವುದು ರುಜುವಾತಾಗಿರುವ ಹಿನ್ನೆಲೆಯಲ್ಲಿ ಗರಿಷ್ಠ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ.
2007ರ ಮೇ 18ರಂದು ಕೈಥಾಲ್ ಜಿಲ್ಲೆಯ ಕರೋರಾ ಗ್ರಾಮದ ಮನೋಜ್ (23) ಮತ್ತು ಬಬ್ಲಿ (19) ಎಂಬ ಜೋಡಿಯನ್ನು ಸಮುದಾಯದ ಗೌರವ ಕಾಪಾಡಲು ಕೊಂದು ಹಾಕಲಾಗಿರುವ ಕೃತ್ಯ ಸಾಬೀತಾಗಿದ್ದು, ಇದು ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಬಣ್ಣಿಸಿದ ನ್ಯಾಯಾಲಯವು ಆರು ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿತು.
ಒಂದೇ ಗೋತ್ರದ ಇವರಿಬ್ಬರು ಮದುವೆಯಾಗಿದ್ದನ್ನು ವಿರೋಧಿಸಿ ಕೊಂದು ಹಾಕಿದ ಪ್ರಕರಣದಲ್ಲಿ ಆರೋಪಿಗಳ ಕೃತ್ಯ ರುಜುವಾತಾಗಿದೆ ಎಂದು ಜಿಲ್ಲಾ ನ್ಯಾಯಾಲಯವು ಕಳೆದ ಗುರುವಾರವೇ ತೀರ್ಪು ನೀಡಿತ್ತು. ಆದರೆ ಶಿಕ್ಷೆಯನ್ನು ಪ್ರಕಟಿಸಿರಲಿಲ್ಲ.
ಜಾತಿ ಆಧರಿತ ಸಮಿತಿಯನ್ನು ಇಲ್ಲಿ 'ಖಾಪ್ ಪಂಚಾಯತ್' ಎಂದು ಕರೆಯಲಾಗುತ್ತದೆ. ಹುಡುಗಿಯ ಸಹೋದರ ಸುರೇಶ್, ಚಿಕ್ಕಪ್ಪ ರಾಜೇಂದ್ರ ಮತ್ತು ಬರೂ ರಾಮ್ ಮತ್ತು ರಕ್ತಸಂಬಂಧಿಗಳಾದ ಗುರುದೇವ್ ಮತ್ತು ಸತೀಶ್ ಅವರಿಗೆ ಮರಣ ದಂಡನೆಯನ್ನು ನ್ಯಾಯಾಲಯ ವಿಧಿಸಿದ್ದರೆ, ಪಂಚಾಯತ್ ಮುಖ್ಯಸ್ಥ ಗಂಗಾ ರಾಜ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಅಪಹರಣಕ್ಕೆ ಸಹಕರಿಸಿದ್ದ ಚಾಲಕ ಮನದೀಪ್ ಸಿಂಗ್ ಎಂಬಾತನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಖಾಪ್ ಪಂಚಾಯತ್‌ಗಳು ಕಾನೂನು ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎನ್ನುವುದನ್ನು ಈ ತೀರ್ಪು ಬಲವಾಗಿ ಸಮರ್ಥಿಸಿಕೊಳ್ಳುತ್ತದೆ ಎಂದು ಸರಕಾರಿ ವಕೀಲ ಸುನಿಲ್ ರಾಣಾ ಬಣ್ಣಿಸಿದ್ದಾರೆ.
ನ್ಯಾಯಾಲಯಗಳ ರಕ್ಷಣೆಯ ಹೊರತಾಯಿಗೂ ಅವರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ ಮತ್ತು ಮುಗ್ದ ಜೋಡಿಗಳನ್ನು ಕೊಂದು ಹಾಕುತ್ತಾರೆ ಎಂದು ವಕೀಲರು ತಿಳಿಸಿದ್ದಾರೆ.