ಬಂಗಾಳ ಕೊಲ್ಲಿಯಿಂದ ಸುತ್ತುವರಿಯಲ್ಪಟ್ಟ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಪ್ರದೇಶದ ಸೇರಿದಂತೆ ದೇಶದ ವಿವಿಧೆಡೆ ಮಂಗಳವಾರ ರಾತ್ರಿ ಲಘು ಭೂಕಂಪವಾಗಿದ್ದು, ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿರುವುದಾಗಿ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ಪ್ರಕಾರ 6.4ರಷ್ಟು ಎಂದು ಹೇಳಿದೆ.
ದ್ವೀಪಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದ್ದು,ಯಾವುದೇ ಹಾನಿ ಉಂಟಾಗಿಲ್ಲ ಎಂದು ಪೋರ್ಟ್‌ಬ್ಲೇರ್‌ನ ಸ್ಥಳೀಯ ಪೊಲೀಸ್ ಅಧಿಕಾರಿ ಶಾಬ್ಬಿರ್ ಅಹ್ಮದ್ ತಿಳಿಸಿದ್ದಾರೆ.
ಇದು ಲಘು ಭೂಕಂಪವಾಗಿದ್ದು, ಯಾವುದೇ ತ್ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಿಲ್ಲ ಎಂದು ಹಿರಿಯ ಅಧಿಕಾರಿ ವಿವೇಕ್ ರಾಯ್ ತಿಳಿಸಿದ್ದು, ಯಾವುದೇ ಜೀವಹಾನಿಯಾಗಲಿ, ಆಸ್ತಿ ನಷ್ಟ ಸಂಭವಿಸಿಲ್ಲ. ಲಘುವಾಗಿ ಭೂಮಿ ಕಂಪಿಸಿದ್ದರಿಂದ ಹೆದರಿ ಮಹಡಿಯಿಂದ ಜಿಗಿದಿದ್ದ ಇಬ್ಬರು ಗಾಯಗೊಂಡಿರುವುದಾಗಿ ಅವರು ವಿವರಿಸಿದ್ದಾರೆ.
ಅಲ್ಲದೇ ಇದರ ಪರಿಣಾಮ ಎಂಬಂತೆ ದೇಶದ ವಿವಿಧೆಡೆ ಭುವನೇಶ್ವರ್, ಒರಿಸ್ಸಾ, ಕಟ್ಟಕ್, ಜಗತ್‌ಸಿಂಗ್‌ಪುರ್ ಮತ್ತು ಜೈಪುರಗಳಲ್ಲಿಯೂ ಲಘು ಭೂಕಂಪವಾಗಿತ್ತು. ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರಗೋಡಿದ ಘಟನೆಯೂ ನಡೆದಿತ್ತು. ಇದರಿಂದ ಹೆದರಿ ಕಂಗಾಲಾದ ಕಟ್ಟಕ್ ಮತ್ತು ಜಗತ್‌ಸಿಂಗ್‌ಪುರದ ಜನರು ರಾತ್ರಿಯೆಲ್ಲ ನಿದ್ದೆಯಿಲ್ಲದೆ ಜಾಗರಣೆ ಮಾಡಿದ್ದರು.