ಇಡೀ ಜಗತ್ತಿನ ಗಮನ ಸೆಳೆದಿದ್ದ ಕಾಂಡೋಮ್ ಬಾರ್ ಇನ್ನಿಲ್ಲ..!
ಚಂಡೀಗಢ, ಬುಧವಾರ, 31 ಮಾರ್ಚ್ 2010( 11:18 IST )
ಬಾರ್‌ನಲ್ಲಿಯೇ ಕಾಂಡೋಮ್ ವಿತರಿಸುವ ಮೂಲಕ ವಿಶಿಷ್ಟ ಪ್ರಯೋಗಕ್ಕೊಳಗಾಗಿ ವಿಶ್ವದಾದ್ಯಂತದ ಗಮನವನ್ನು ಸೆಳೆದಿದ್ದ, ಬಾಟಲಿಗಳ ನಡುವೆ ಕಾಂಡೋಮ್‌ಗಳಿಂದಲೇ ಸಿಂಗರಿಸಲ್ಪಟ್ಟು ಹೆಸರು ಮಾಡಿದ್ದ 'ಕಾಂಡೋಮ್ ಬಾರ್' ತನ್ನ ಕಾರ್ಯಾಚರಣೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದೆ.
ಇದಕ್ಕೆ ಸಿಗುವ ತಕ್ಷಣದ ಕಾರಣ ಶಿಷ್ಟಾಚಾರ ಎನ್ನುವುದನ್ನು ಬಿಟ್ಟರೆ ಅಧಿಕಾರಿಯೊಬ್ಬರು ವರ್ಗಾವಣೆಗೊಂಡಿರುವುದು. 2007ರ ಮೇ ತಿಂಗಳಲ್ಲಿ ಮಹಿಳಾ ಏಡ್ಸ್ ರೋಗಿಯೊಬ್ಬರಿಂದ ಚಂಡೀಗಢ - ಪಂಚಕುಲಾ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಈ ಬಾರ್ ಉದ್ಘಾಟನೆಯಾಗಿತ್ತು. ಅದೂ ಅರೆ ಸರಕಾರಿ ಸಂಸ್ಥೆಯ ಸಹಕಾರದೊಂದಿಗೆ.
ಭಾರೀ ವಾಹನ ಸಂಚಾರವಿರುವ ಹೆದ್ದಾರಿ ಬದಿಯ ಕಲಾಗ್ರಾಮ್ ಕಾಂಪ್ಲೆಕ್ಸ್‌ನಲ್ಲಿದ್ದ ಈ ಕಾಂಡೋಮ್ ಬಾರ್ ಉದ್ಘಾಟನೆಯಾಗುತ್ತಿದ್ದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಈ ವಿಶಿಷ್ಟ ಕಲ್ಪನೆಯನ್ನು ಸರಕಾರ ಮತ್ತು ಸಂಘ ಸಂಸ್ಥೆಗಳು ಕೂಡ ಶ್ಲಾಘಿಸಿದ್ದವು.
ಈ ಬಾರಿನಲ್ಲಿ ಕಾಂಡೋಮ್‌ಗಳಲ್ಲದೆ ಸುರಕ್ಷಿತ ಲೈಂಗಿಕತೆಯನ್ನು ಪ್ರೋತ್ಸಾಹಿಸುವ ಕಪ್‌ಗಳು, ಟಿ-ಶರ್ಟ್‌ಗಳು ಮತ್ತು ಟೋಪಿಗಳನ್ನು ಕೂಡ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿತ್ತು. ಕೆಲವು ಬಗೆಯ ಕಾಂಡೋಮ್‌ಗಳನ್ನು ಇಲ್ಲಿ ಉಚಿತವಾಗಿ ವಿತರಿಸಲಾಗುತ್ತಿತ್ತು. ಮಹಿಳೆಯರ ಕಾಂಡೋಮ್‌ಗಳನ್ನು ಕೂಡ ಇದೇ ರೀತಿ ಒದಗಿಸಲಾಗುತ್ತಿತ್ತು.
ಆದರೆ ಇದೀಗ ಈ ಕಲ್ಪನೆಯನ್ನು ಬದಲಾಯಿಸಲಾಗುತ್ತಿದೆ. ಕಾಂಡೋಮ್ ಬಾರ್ ಬದಲಿಗೆ ಗ್ರಾಮ ಕಲ್ಪನೆಯನ್ನು ಬಾರ್‌ನಲ್ಲಿ ತರಲಾಗುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ನಾವು ಕಾಂಡೋಮ್ ಬಾರನ್ನು ವಿಲೀಜ್ ಥೀಮ್‌ಗೆ ಬದಲಾಯಿಸುತ್ತಿದ್ದೇವೆ. ಬಾರ್ ಅದೇ ಕಟ್ಟಡದಲ್ಲಿ ಅದೇ ರೀತಿಯಲ್ಲಿ ಮುಂದುವರಿಯುತ್ತದೆ. ಆದರೆ ಅಲ್ಲಿ ಕಾಂಡೋಮ್ ಮಾರಾಟ ಅಥವಾ ವಿತರಣೆ ಅಥವಾ ಪ್ರದರ್ಶನ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ಸರಕಾರಗಳು ಕಾಂಡೋಮ್ ಕಲ್ಪನೆಯ ಕುರಿತು ತೀರಾ ಮುಜುಗರ ವ್ಯಕ್ತಪಡಿಸಿದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.