ಹೈದರಾಬಾದ್‌ನ ತನ್ನ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾನಿಯಾ ಮಿರ್ಜಾ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ತಾನು ಭಾರತವನ್ನೇ ಬೆಂಬಲಿಸುತ್ತೇನೆ; ಜತೆಗೆ ನನ್ನ ಗಂಡನನ್ನೂ ಬೆಂಬಲಿಸುತ್ತೇನೆ ಎಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಜತೆಗಿನ ತನ್ನ ಮದುವೆಯನ್ನು ಅಧಿಕೃತವಾಗಿ ಸುದ್ದಿ ಮಾಧ್ಯಮಗಳಿಗೆ ತಿಳಿಸುವ ನಿಟ್ಟಿನಲ್ಲಿ ತಂದೆ ಇಮ್ರಾನ್ ಮಿರ್ಜಾ ಜತೆ ಹಾಜರಾದ ಸಾನಿಯಾರಿಗೆ 'ಭಾರತ - ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದರೆ ಆಗ ನೀವು ಯಾರನ್ನು ಬೆಂಬಲಿಸುತ್ತೀರಿ?' ಎಂಬ ಪ್ರಶ್ನೆ ಪತ್ರಕರ್ತರಿಂದ ಬಂದಿತ್ತು.
PTI
ತಕ್ಷಣ ಉತ್ತರಿಸಿದ ಸಾನಿಯಾ, 'ಖಂಡಿತಾ ನಾನು ಭಾರತವನ್ನೇ ಬೆಂಬಲಿಸುತ್ತೇನೆ. ಆದರೆ ನಾನು ನನ್ನ ಗಂಡನನ್ನು ಕೂಡ ಬೆಂಬಲಿಸುತ್ತೇನೆ' ಎಂದರು.
ಮದುವೆಯ ನಂತರವೂ ನಾನು ಟೆನಿಸ್ ಆಡುವುದನ್ನು ಮುಂದುವರಿಸುತ್ತೇನೆ. ನನ್ನ ಭಾವಿ ಗಂಡ ಕೂಡ ಅವರ ದೇಶಕ್ಕಾಗಿ ಆಡಲಿದ್ದಾರೆ. ಮದುವೆಯನ್ನು ಹೊರತುಪಡಿಸಿ ಉಳಿದ ಎಲ್ಲವೂ ಈಗ ಇರುವಂತೆಯೇ ಮುಂದುವರಿಯುತ್ತದೆ ಎಂದರು.
ಮದುವೆ ಹೈದರಾಬಾದ್‌ನಲ್ಲಿ... ಶೋಯಿಬ್ ಮಲಿಕ್ ಜತೆ ಏಪ್ರಿಲ್ 15ರಂದು ಹೈದರಾಬಾದ್‌ನಲ್ಲಿ ನನ್ನ ಮದುವೆ ನಡೆಯಲಿದೆ. ಮದುವೆಯ ನಂತರ ನಾನು ಪಕ್ಕದ ಮನೆಯಂತಿರುವ ಕೇವಲ ಮೂರು ಗಂಟೆಯ ವಿಮಾನ ಪ್ರಯಾಣ ದೂರದಲ್ಲಿರುವ ದುಬೈಯಲ್ಲಿ ಗಂಡನೊಂದಿಗೆ ವಾಸಿಸುತ್ತೇನೆ. ಆದರೆ ಭಾರತದ ಪೌರತ್ವವನ್ನು ತ್ಯಜಿಸುವುದಿಲ್ಲ ಎಂದು ಸಾನಿಯಾ ತಿಳಿಸಿದ್ದಾರೆ.
ಭಾರತದ ಪರವಾಗಿ ನಾನು 2012ರ ಒಲಿಂಪಿಕ್ಸ್ ಆಡುತ್ತೇನೆ. ಭಾರತದ ಪಾಸ್‌ಪೋರ್ಟನ್ನೂ ಹಿಂತಿರುಗಿಸುವುದಿಲ್ಲ ಎಂದು ದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯಿಂದ ತನ್ನ ತಂದೆ-ತಾಯಿ, ಸಹೋದರಿ ಮತ್ತು ತನಗೆ ವಿಸಾ ಪಡೆದುಕೊಂಡು ಹೈದರಾಬಾದ್‌ಗೆ ಮರಳಿದ ನಂತರ ಸಾನಿಯಾ ವಿವರಣೆ ನೀಡಿದ್ದಾರೆ.
ಪತ್ರಕರ್ತರಿಗೆ ಸಿಹಿ ಹಂಚಿದರು... ರಾತ್ರಿ ತನ್ನದೇ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮದುವೆಯಾಗುತ್ತಿರುವುದನ್ನು ತಿಳಿಸಿದ ನಂತರ ತಂದೆ ಇಮ್ರಾನ್ ಮತ್ತು ಸಾನಿಯಾ ಪತ್ರಕರ್ತರಿಗೆ ಸಿಹಿ ಹಂಚಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಇತರ ಕೆಲವು ಬಲಪಂಥೀಯ ಸಂಘಟನೆಗಳು ನೀವು ಪಾಕಿಸ್ತಾನಿಯನ್ನು ಮದುವೆಯಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿವೆಯಲ್ಲ ಎಂಬ ಪ್ರಶ್ನೆ ಬಂದಾಗ, 'ನಾವೀಗ ಸಂತೋಷದಲ್ಲಿದ್ದೇವೆ. ಮೀಠಾಯಿ ಕೈಯಲ್ಲಿ ಹಿಡಿದುಕೊಂಡಿರುವ ನೀವು ಇಂತಹ ವಿಚಾರಗಳನ್ನು ಈಗ ಮಾತನಾಡಬಾರದು' ಎಂದು ಸಾನಿಯಾ ಹಾರಿಕೆಯ ಉತ್ತರ ನೀಡಿದರು.
ಖಾಸಗಿ ಪ್ರಶ್ನೆಗಳಿಗೆ ಉತ್ತರಿಸಲ್ಲ... ನೀವಿಬ್ಬರು ಮೊದಲು ಭೇಟಿ ಮಾಡಿದ್ದು ಎಲ್ಲಿ? ನಿಮ್ಮದು ಪ್ರೇಮ ವಿವಾಹವೇ? ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡದ್ದು ಹೇಗೆ ಎಂದೆಲ್ಲಾ ಸುದ್ದಿಗಾರರು ಪ್ರಶ್ನಿಸಲು ಮುಂದಾದಾಗ ಸಾನಿಯಾ ಹೇಳಿದ್ದು ಹೀಗೆ.
ನಾನು ಅಥವಾ ಶೋಯಿಬ್ ಯಾವುದೇ ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗುವುದಿಲ್ಲ. ದಯವಿಟ್ಟು ಉಳಿದ ವಿಚಾರಗಳನ್ನು ಮಾತ್ರ ಮಾತನಾಡಿ ಎಂದು ಇದೇ ಸಂದರ್ಭದಲ್ಲಿ ಸಾನಿಯಾ ಮನವಿ ಮಾಡಿಕೊಂಡರು.