166 ಅಮಾಯಕರ ಸಾವಿಗೆ ಸಾಕ್ಷಿಯಾದ ಮುಂಬೈ ದಾಳಿಯಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಬ್ ವಿಚಾರಣೆ ಮುಗಿಸಿರುವ ವಿಶೇಷ ನ್ಯಾಯಾಲಯವು, ಮಹತ್ವದ ತೀರ್ಪನ್ನು ಮೇ 3ಕ್ಕೆ ಕಾಯ್ದಿರಿಸಿದೆ.
ಕರಾಚಿಯಿಂದ 10 ಮಂದಿ ಜಿಹಾದಿ ಭಯೋತ್ಪಾದಕರನ್ನು ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಸಂಘಟನೆಯು ಮುಂಬೈ ದಾಳಿಗಾಗಿ ಕಳುಹಿಸಿತ್ತು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಈ ಸಂದರ್ಭಲ್ಲಿ 653 ಸಾಕ್ಷಿಗಳನ್ನು ಪರಿಶೀಲನೆ ನಡೆಸಿತ್ತು.
ಈ ಕುರಿತ ಎಲ್ಲಾ ವಿಚಾರಣೆಗಳನ್ನು ಮುಗಿಸಿರುವ ನ್ಯಾಯಾಲಯವು ಮೇ 3ರಂದು ಪ್ರಕರಣದ ತೀರ್ಪು ನೀಡುವುದಾಗಿ ಹೇಳಿದ್ದು, ಈ ಸಂದರ್ಭದಲ್ಲಿ ಉಗ್ರ ಕಸಬ್ ಮತ್ತು ದಾಳಿಗೆ ಸಹಕರಿಸಿರುವ ಇಬ್ಬರು ಭಾರತೀಯ ಪ್ರಜೆಗಳ ಕುರಿತು ಅಂತಿಮ ನಿರ್ಣಯ ಪ್ರಕಟಿಸಲಿದೆ.
ವಿಚಾರಣೆ ಸಂದರ್ಭದಲ್ಲಿ ಎನ್‌ಎಸ್‌ಜಿ ಕಮಾಂಡೋಗಳು, ಪೊಲೀಸರು ಮತ್ತು ಸಾರ್ವಜನಿಕರು ಸೇರಿದಂತೆ ಒಟ್ಟು 30 ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಕೂಡ ಪಡೆದುಕೊಳ್ಳಲಾಗಿದೆ. ಒಟ್ಟಾರೆ 653 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿತ್ತು.
ವಿಚಾರಣಾ ನ್ಯಾಯಾಲಯದಲ್ಲಿ ಸರಕಾರಿ ಪರ ವಕೀಲ ಉಜ್ವಲ್ ನಿಕ್ಕಂ 13 ದಿನಗಳ ಕಾಲ ವಾದ ಮಂಡಿಸಿದ್ದು, 675 ಪುಟಗಳ ಲಿಖಿತ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕಸಬ್ ಪರ ವಕೀಲ ಕೆ.ಪಿ. ಪವಾರ್ ಮೂರು ದಿನ ವಾದಿಸಿದ್ದರು.
ಫಹೀಮ್ ಅನ್ಸಾರಿ ಪರ ವಕೀಲ ಆರ್.ಬಿ. ಮೊಕಾಶಿ ಇಂದು ತನ್ನ ವಾದವನ್ನು ಮಂಡಿಸಿದರೆ, ಮತ್ತೊಬ್ಬ ಆರೋಪಿ ಸಬಾವುದ್ದೀನ್ ಅಹ್ಮದ್ ವಕೀಲ ಇಜಾಜ್ ನಖ್ವಿ ನಾಳೆ ತನ್ನ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸಲಿದ್ದಾರೆ.
ಕಸಬ್‌ಗೆ ಶಿಕ್ಷೆಯಾಗಲಿದೆ... ಪಾಕಿಸ್ತಾನಿ ಭಯೋತ್ಪಾದಕರ ಕಸಬ್ ವಿಚಾರಣೆಯನ್ನು ಮುಗಿಸಿದ ನ್ಯಾಯಾಲಯವು ಮೇ 3ಕ್ಕೆ ತೀರ್ಪು ಕಾಯ್ದಿರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸರಕಾರಿ ವಿಶೇಷ ವಕೀಲ ಉಜ್ವಲ್ ನಿಕ್ಕಂ, 'ಪಾಕ್ ಉಗ್ರ ಅಜ್ಮಲ್ ಕಸಬ್ ವಿರುದ್ಧದ ವಿಚಾರಣೆಯನ್ನು ಕೊನೆಗೂ ಮುಗಿಸಿರುವುದಕ್ಕೆ ನನಗೆ ಇಂದು ತೀವ್ರ ಸಂತೋಷವಾಗಿದೆ' ಎಂದರು.
ನಾವು 650ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಇದರ ಕುರಿತು ನ್ಯಾಯಾಲಯವು ಮೇ 3ರಂದು ತೀರ್ಪು ನೀಡಲಿದೆ. ಕಸಬ್ ತಪ್ಪಿತಸ್ಥ ಎಂಬುದು ನ್ಯಾಯಾಲಯ ಒಪ್ಪಿಕೊಂಡರೆ, ಬಳಿಕ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
2008ರ ನವೆಂಬರ್ 26ರಂದು ನಡೆದಿದ್ದ ದಾಳಿ ವಿಚಾರಣೆಯು ಇದೀಗ ಮುಕ್ತಾಯಗೊಂಡಿರುವುದು ವಿಶ್ವ ದಾಖಲೆ ಎಂದಿರುವ ನಿಕ್ಕಂ, ಇಷ್ಟು ದೊಡ್ಡ ಪ್ರಕರಣ ಕೇವಲ ಏಳೇ ತಿಂಗಳುಗಳ ಅವಧಿಯಲ್ಲಿ ಮುಕ್ತಾಯ ಕಂಡಿರುವುದು ಇದೇ ಮೊದಲು ಎಂದರು.