ವಿವಾದಿತ ಕಲಾಕೃತಿಗಳ ಕರ್ತೃ ಎಂ.ಎಫ್. ಹುಸೇನ್‌ರನ್ನು ಸಂಪೂರ್ಣವಾಗಿ ಬೆಂಬಲಿಸಿರುವ ಮುಂಬೈಯ ಮಾಜಿ ಶರೀಫರೊಬ್ಬರು, ಇದೀಗ ಕತಾರ್ ಪೌರತ್ವ ಸ್ವೀಕರಿಸಿರುವ ಶ್ರೇಷ್ಠ ಕಲಾವಿದನಿಗೆ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಆಗ್ರಹಿಸಿದ್ದಾರೆ.
ಮರೀನ್ ಡ್ರೈವ್ ಪ್ರದೇಶದ ಜನಪ್ರಿಯ ಸ್ಥಳವೊಂದರಲ್ಲಿ ಈ ಸಂಬಂಧ ಭಿತ್ತಿಪತ್ರವೊಂದನ್ನು ಹಾಕಿರುವ ಮುಂಬೈಯ ಮಾಜಿ ಶರೀಫ್ ನಾನಾ ಚುಡಾಸಮಾ, 'ಎಂ.ಎಫ್. ಹುಸೇನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ನೀಡಬೇಕು' ಎಂದು ಬರೆದಿದ್ದಾರೆ.
ಆದರೆ ಈ ಬರಹವನ್ನು ಹುಸೇನ್ ವಿರೋಧಿಗಳು ಕಪ್ಪು ಬಣ್ಣ ಹಚ್ಚುವ ಮೂಲಕ ಕೆಡಿಸಿದ್ದಾರೆ. ಹುಸೇನ್ ಬಗ್ಗೆ ಬರೆದಿರುವ ಅಕ್ಷರಗಳ ಮೇಲೆ ಕಪ್ಪು ಬಣ್ಣ ಬಳಿದಿದ್ದರೆ, ಸಚಿನ್ ಬರಹವನ್ನು ಹಾಗೆ ಉಳಿಸಲಾಗಿದೆ.
ಎರಡು ದಿನಗಳ ಹಿಂದೆಯೇ ಕೆಲವು ಹುಡುಗರು ಈ ಬ್ಯಾನರ್ ಅನ್ನು ಕೆಡಿಸಲು ಯತ್ನಿಸಿದ್ದರು ಎಂದು ಚೂಡಾಸಮಾ ಹೇಳಿಕೊಂಡಿದ್ದಾರೆ. ನೀವು ಯಾಕೆ ಆ ರೀತಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನಾವೆಲ್ಲ ಹಿಂದೂಸ್ತಾನಿಗಳು ಎಂದರು. ಆಗ ನಾನು ಕೂಡ ಹಿಂದೂಸ್ತಾನಿ ಎಂದಾಗ ಅವರು ದೂರ ಓಡಿದರು ಎಂದು ವಿವರಣೆ ನೀಡಿದ್ದಾರೆ.
ಹುಸೇನ್ ನಮ್ಮ ಆಸ್ತಿ. ನಾವು ಜಾತ್ಯತೀತ ರಾಷ್ಟ್ರದವರು ಎಂದು ಹೇಳುತ್ತೇವೆ. ಹಾಗಾಗಿ ಅವರ ವಾಪಸಾತಿಗೆ ಅವಕಾಶ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಹಿಂದೂ ದೇವತೆಗಳನ್ನು ಚಿತ್ರಿಸಿದಂತೆ ಇಸ್ಲಾಮಿಕ್ ದೇವರ ಚಿತ್ರವನ್ನು ಯಾಕೆ ಹುಸೇನ್ ಬಿಡಿಸಿಲ್ಲ ಎಂದು ಚೂಡಾಸಮಾ ಅವರನ್ನು ಪ್ರಶ್ನಿಸಿದಾಗ, 'ಅದು ಹುಸೇನ್ ಅವರ ಹಳೆ ಕಲಾಕೃತಿಯಾಗಿತ್ತು. ಅದನ್ನು ಈಗ ಯಾಕೆ ಕೆದಕುತ್ತಿದ್ದೀರಿ? ಇದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ನಾವು ಖುಜರಾಹೋ ಕಲಾಕೃತಿಗಳನ್ನು ಕೂಡ ಆಕ್ಷೇಪಿಸಬೇಕಾಗುತ್ತದೆ' ಎಂದರು.
ಹಿಂದೂ ದೇವತೆಗಳ ವಿಕೃತ ಚಿತ್ರಗಳನ್ನು ಹುಸೇನ್ ಬಿಡಿಸಿದ್ದಾರೆ ಎಂದು ಆರೋಪಿಸಿದ್ದ ಹಿಂದೂ ಸಂಘಟನೆಗಳು 900ಕ್ಕೂ ಹೆಚ್ಚು ಪ್ರಕರಣಗಳನ್ನು ದೇಶದ ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿದ್ದವು. ಇದೇ ಹಿನ್ನೆಲೆಯಲ್ಲಿ ದೇಶ ತೊರೆದಿದ್ದ ಹುಸೇನ್, ಇತ್ತೀಚೆಗಷ್ಟೇ ಭಾರತೀಯ ಪೌರತ್ವವನ್ನು ತೊರೆದು ಕತಾರ್ ರಾಷ್ಟ್ರೀಯತೆ ಸ್ವೀಕರಿಸಿದ್ದರು.