ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಆಸ್ತಿ ಪ್ರಕರಣದಲ್ಲಿ ಸರಕಾರಕ್ಕೆ ನಿರಾಸೆ; ಲಾಲೂ ನಿರಾಳ (Supreme Court | Lalu Prasad Yadav | Rabri Devi | Bihar)
Bookmark and Share Feedback Print
 
ಸಾವಿರಾರು ಕೋಟಿ ರೂಪಾಯಿಗಳ ಮೇವು ಹಗರಣದಲ್ಲಿ ದೋಷಮುಕ್ತರಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಇದೀಗ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಾಶ್ವತ ನಿರಾಳತೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಬಿಹಾರ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್, ಸರಕಾರಕ್ಕೆ ಈ ಅಧಿಕಾರವಿಲ್ಲ ಎಂದು ಹೇಳಿದೆ.

ತೀರ್ಪಿಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ರಾಷ್ಟ್ರೀಯ ಜನತಾದಳ ವರಿಷ್ಠ ಲಾಲೂ, ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ; ನನ್ನ ಪ್ರಾಮಾಣಿಕತೆಗೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಬಿಹಾರದ ಮುಖ್ಯಮಂತ್ರಿಗಳಾಗಿದ್ದ ಲಾಲೂ ಮತ್ತು ಅವರ ಪತ್ನಿ ರಾಬ್ರಿ ದೇವಿ ಇಬ್ಬರ ವಿರುದ್ಧವೂ ಅಕ್ರಮ ಆಸ್ತಿ ಗಳಿಕೆ ಆರೋಪ ಹೊರಿಸಲಾಗಿತ್ತು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಅವರಿಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿತ್ತು.

ಆದಾಯಕ್ಕಿಂತ ಸುಮಾರು 46 ಲಕ್ಷ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಲಾಲೂ ಅವರನ್ನು 1997ರ ಜುಲೈ ತಿಂಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. 1998ರಲ್ಲೂ ಅವರನ್ನು ಈ ಸಂಬಂಧ ಬಂಧಿಸಲಾಗಿತ್ತು. ಆದರೆ ಇವೆರಡೂ ಸಂದರ್ಭಗಳಲ್ಲಿ ಅವರನ್ನು ಬಿಹಾರ ಮಿಲಿಟರಿ ಪೊಲೀಸ್ ಅತಿಥಿ ಗೃಹದಲ್ಲಿಡಲಾಗಿತ್ತು. ಆದರೆ 2000ದ ನವೆಂಬರ್‌ನಲ್ಲಿ ಬೇವೂರ್ ಜೈಲಿನಲ್ಲಿ ಒಂದು ದಿನ ಬಂಧನಕ್ಕೊಳಪಡಿಸಲಾಗಿತ್ತು.

ಈ ಪ್ರಕರಣವನ್ನು 2006ರಲ್ಲಿ ಸಿಬಿಐ ತನಿಖೆ ನಡೆಸಿದರೂ ಲಾಲೂ-ರಾಬ್ರಿ ತಪ್ಪಿತಸ್ಥರೆಂದು ರುಜುವಾತುಪಡಿಸಲು ವಿಫಲವಾಗಿತ್ತು. ಹಾಗಾಗಿ ಸಿಬಿಐ ವಿಶೇಷ ನ್ಯಾಯಾಲಯವು ಲಾಲೂ ಮತ್ತು ಅವರ ಪತ್ನಿ ನಿರ್ದೋಷಿಗಳೆಂದು ತೀರ್ಪು ನೀಡಿತ್ತು.

ಸಿಬಿಐ ನ್ಯಾಯಾಲಯವು ನೀಡಿದ ತೀರ್ಪಿನ ವಿರುದ್ಧ ಸಿಬಿಐ ಪಾಟ್ನಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿರಲಿಲ್ಲ. ಹಾಗಾಗಿ ಸಿಬಿಐ ನ್ಯಾಯಾಲಯದ ತೀರ್ಪನ್ನು ಬಿಹಾರ ರಾಜ್ಯ ಸರಕಾರವು ಮೇಲ್ಮನವಿ ಸಲ್ಲಿಸಿತ್ತು. ಇದು ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಈ ಸಂದರ್ಭದಲ್ಲಿ ಪಾಟ್ನಾ ಹೈಕೋರ್ಟ್ ಹೇಳಿತ್ತು. ಇದರ ವಿರುದ್ಧ ಲಾಲೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಆದರೆ ಇಂದು ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಛ ನ್ಯಾಯಾಲಯವು, ಖುಲಾಸೆಯನ್ನು ಪ್ರಶ್ನಿಸುವ ಅಧಿಕಾರ ಸರಕಾರಕ್ಕಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಅಂತಿಮ ಪರದೆ ಎಳೆದಿದೆ.

ಕೇಂದ್ರ ಸರಕಾರದ ವಿವೇಚನೆಯಂತೆ ತನಿಖೆ ನಡೆಸಲು ಸಿಬಿಐಯನ್ನು ನಿಯೋಜಿಸಲಾಗಿದೆ. ಹಾಗಾಗಿ ಸಿಬಿಐ ಕೈಗೆತ್ತಿಕೊಳ್ಳುವ ಪ್ರಕರಣಗಳಲ್ಲಿ ರಾಜ್ಯ ಸರಕಾರಗಳು ಯಾವುದೇ ಪಾತ್ರ ವಹಿಸುವಂತಿಲ್ಲ. ಅಂತಹ ಅವಕಾಶಗಳನ್ನು ನೀಡಿದಲ್ಲಿ ಅದು ಸಿಬಿಐ ಮೇಲೆ ರಾಜ್ಯ ಸರಕಾರಗಳಿಗೆ ಅಧಿಕಾರ ಚಲಾಯಿಸಲು ಅನುವು ನೀಡಿದಂತಾಗುತ್ತದೆ ಎಂದು ಲಾಲೂ ಅವರ ವಕೀಲ ರಾಮ್ ಜೇಠ್ಮಲಾನಿ ವಾದಿಸಿದ್ದರು.

ಆರೋಪಿತ ಅಪರಾಧಿ ಕೃತ್ಯಗಳು ರಾಜ್ಯದಲ್ಲೇ ನಡೆದಿರುವುದರಿಂದ, ಪ್ರಕರಣಗಳು ಬಿಹಾರ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಬಿಹಾರ ಸರಕಾರಿ ವಕೀಲರು ವಾದಿಸಿದ್ದರು.

ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಮತ್ತು ಸಿಬಿಐ ಮಾತ್ರ ಮೇಲ್ಮನವಿ ಸಲ್ಲಿಸಲು ಅಧಿಕಾರ ಹೊಂದಿದೆ. ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ಆರ್.ಎಂ. ಲೋಧಾ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ