ಕೇವಲ ಗುಜರಾತ್ ಸರಕಾರದ ಪ್ರಚಾರ ರಾಯಭಾರಿಯಾಗಿದ್ದ ಮಾತ್ರಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್‌ರನ್ನು ಹೋದಲ್ಲೆಲ್ಲ ಹೀಯಾಳಿಸುತ್ತಿದ್ದ ಕಾಂಗ್ರೆಸ್ ವಕ್ತಾರರು ಇನ್ನು ಮುಂದೆ ಅನಿವಾರ್ಯವಾಗಿ ಬಾಯಿ ಮುಚ್ಚಿಕೊಂಡಿರಬೇಕಾಗುತ್ತದೆ. ಯಾಕೆಂದರೆ ಯಾರೊಬ್ಬರೂ ಇನ್ನು ಮುಂದಕ್ಕೆ ಈ ವಿಚಾರದ ಬಗ್ಗೆ ಮಾತು ಬೆಳೆಸುವುದು ಬೇಡ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಟ್ಟಪ್ಪಣೆ ವಿಧಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿರುವ ಜನಾರ್ದನ ದ್ವಿವೇದಿಯವರು ಪಕ್ಷದ ಎಲ್ಲಾ ವಕ್ತಾರರ ಸಭೆಯನ್ನು ಕರೆದಿದ್ದು, ಬಚ್ಚನ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸದಂತೆ ಸೂಚನೆ ನೀಡಿದ್ದಾರೆ. ಇದು ಸೋನಿಯಾ ಗಾಂಧಿಯವರ ಸೂಚನೆ ಮೇರೆಗೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಬಚ್ಚನ್ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಸಮತೋಲಿತ, ಸಭ್ಯ ಭಾಷೆಯನ್ನು ಬಳಸುವಂತೆ ವಕ್ತಾರರಿಗೆ ಸೂಚನೆ ನೀಡಲಾಗಿದೆ. ಬಚ್ಚನ್ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಅಗ್ಗದ ಪ್ರಚಾರದ ಬಗ್ಗೆ ಸೋನಿಯಾ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ.
ಸೋನಿಯಾ ಸೂಚನೆಯನ್ನು ವಕ್ತಾರರು ಪಾಲಿಸುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಪಕ್ಷದ ವಕ್ತಾರೆ ಜಯಂತಿ ನಟರಾಜನ್ ಅವರಲ್ಲಿ ಅಮಿತಾಬ್ ಪ್ರಕರಣದ ಕುರಿತು ಪ್ರತಿಕ್ರಿಯಿಸುವಂತೆ ಕೇಳಿದಾಗ, ಈ ವಿಚಾರದ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಈ ಕುರಿತು ನಮ್ಮ ಪಕ್ಷದ ನಿಲುವನ್ನು ಈಗಾಗಲೇ ಹೇಳಲಾಗಿದೆ. ಇನ್ನೇನು ಹೇಳಲು ಉಳಿದಿಲ್ಲ ಎಂದಷ್ಟೇ ನಟರಾಜನ್ ತಿಳಿಸಿದ್ದಾರೆ.
ಮುಂಬೈ ಸೀ ಲಿಂಕ್ ಎರಡನೇ ಲೇನ್ ಉದ್ಘಾಟನೆಯ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ತಪ್ಪಿಸಿಕೊಂಡಿದ್ದಾರೆ ಎಂಬಲ್ಲಿಂದ ವಿವಾದ ಆರಂಭವಾಗಿತ್ತು. ಆ ಬಳಿಕ ಕಾಂಗ್ರೆಸ್‌ನ ಹಲವು ನಾಯಕರು ಬಿಗ್‌ಬಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದು ಬಚ್ಚನ್ ಒಬ್ಬರಿಗೆ ಸೀಮಿತವಾಗದೆ ಅವರ ಪುತ್ರ ಅಭಿಷೇಕ್ ಬಚ್ಚನ್ ಕಾರ್ಯಕ್ರಮಕ್ಕೂ ಭಾದಿಸಿತ್ತು. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಭಾಗವಹಿಸಿದ್ದ 'ಅರ್ತ ಆರ್' ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಅಭಿಷೇಕ್ ಭಿತ್ತಿಪತ್ರಗಳನ್ನು ಹರಿದು ಹಾಕುವ ಮೂಲಕ ಕಾಂಗ್ರೆಸ್ ತನ್ನ ಪರೋಕ್ಷ ಅಸಮಾಧಾನವನ್ನು ತೋರಿಸಿತ್ತು.
ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿಯವರಂತೂ ಅವಕಾಶ ಸಿಕ್ಕಾಗಲೆಲ್ಲ ಅಮಿತಾಬ್ ಅವರನ್ನು ಹಿಗ್ಗಾಮುಗ್ಗಾ ಹೀಗಳೆಯುತ್ತಿದ್ದರು. ಬಿಗ್‌ಬಿಗೆ ನಿಜವಾಗಿಯೂ ಸಂವೇದನೆ ಇರುವುದಾದರೆ ಅವರು ಗುಜರಾತ್ ನರಮೇಧವನ್ನು ಖಂಡಿಸಲಿ ಎಂದೂ ತಿವಾರಿ ಸವಾಲು ಹಾಕಿದ್ದರು.
ಈ ನಡುವೆ ಕಾಂಗ್ರೆಸ್ ಮಿತ್ರ ಪಕ್ಷ ಎನ್‌ಸಿಪಿ ಬಚ್ಚನ್ ಓಲೈಕೆಯಲ್ಲಿ ತೊಡಗಿದ್ದು, ಕಾರ್ಯಕ್ರಮವೊಂದಕ್ಕೆ ಅವರನ್ನು ಆಹ್ವಾನಿಸಿದೆ.
ಇಸ್ಲಾಮ್‌ಪುರದಲ್ಲಿನ ಥಿಯೇಟರ್ ಉದ್ಘಾಟನಾ ಕಾರ್ಯಕ್ರಮವೊಂದಕ್ಕೆ ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಜಯಂತ್ ಪಾಟೀಲ್ ಅವರು ಅಮಿತಾಬ್ ಅವರನ್ನು ಆಹ್ವಾನಿಸಿದ್ದಾರೆ. ಆದರೆ ಇದು ಪ್ರಚಾರ ತಂತ್ರವಲ್ಲ ಎಂದು ಇದೇ ಸಂದರ್ಭದಲ್ಲಿ ಎನ್‌ಸಿಪಿ ಸ್ಪಷ್ಟಪಡಿಸಿದೆ.