ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ವಿಚಾರಣೆ ನಡೆಸದಿರುವ ತನ್ನ ಈ ಹಿಂದಿನ ನಿರ್ಧಾರ ಅಂತಿಮವಲ್ಲ ಎಂದು ಗುಜರಾತ್ ಕೋಮುಗಲಭೆಗಳ ತನಿಖೆಗಾಗಿ ರಚಿಸಲಾಗಿರುವ ನಾನಾವತಿ ಆಯೋಗ ಉಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದು, ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನ್ಯಾಯಾಲಯಕ್ಕೆ ಲಿಖಿತವಾಗಿ ತಿಳಿಸಿರುವ ಆಯೋಗವು, '2002ರ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ವಿಚಾರಣೆ ನಡೆಸದೇ ಇರುವ ತನ್ನ ಈ ಹಿಂದಿನ ನಿರ್ಧಾರ ಅಂತಿಮವಲ್ಲ' ಎಂದು ತಿಳಿಸಿದೆ.
ಅಗತ್ಯ ಬಿದ್ದರೆ ಗುಜರಾತ್ ಮುಖ್ಯಮಂತ್ರಿಯವರನ್ನು ಕರೆಸಿಕೊಳ್ಳುವ ಆಯ್ಕೆಯನ್ನು ಉಳಿಸಿಕೊಂಡಿದೆ ಎನ್ನುವುದು ಆಯೋಗ ನ್ಯಾಯಾಲಯದಲ್ಲಿ ಸಲ್ಲಿಸಿರುವ ಲಿಖಿತ ಮಾಹಿತಿಯ ಒಟ್ಟು ತಾತ್ಪರ್ಯ.
2002ರ ಗಲಭೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ವಿಶೇಷ ತನಿಖಾ ದಳವು (ಸಿಟ್) ಇತ್ತೀಚೆಗಷ್ಟೇ ಮೋದಿಯವರನ್ನು ವಿಚಾರಣೆ ನಡೆಸಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
2009ರ ಸೆಪ್ಟೆಂಬರ್ 18ರಂದು ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ್ದ ಆಯೋಗ, ಅವರ ಅಥವಾ ಅವರ ಸಂಪುಟ ಸಚಿವರ ವಿರುದ್ಧ ಆರೋಪ ಹೊರಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು.
ಗುಜರಾತ್ ಗಲಭೆ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದ ಮಧ್ಯ ಪ್ರವೇಶಿಸಬೇಕು ಎಂದು ಬಲಿಪಶುಗಳ ಪರವಾಗಿ 'ಜನಸಂಘರ್ಷ ಮೋರ್ಚಾ' ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ಸಂದರ್ಭ ನಾನಾವತಿ ಆಯೋಗವು ತನ್ನ ಪ್ರಸಕ್ತ ನಿಲುವನ್ನು ನ್ಯಾಯಾಲಯಕ್ಕೆ ತಿಳಿದೆ.
ಪ್ರಕರಣವನ್ನು ನ್ಯಾಯಾಲಯವು ಜೂನ್ 17ರಂದು ವಿಚಾರಣೆಗೆ ಸ್ವೀಕರಿಸಲಿದೆ.
ಗುಜರಾತ್ ಕೋಮುಗಲಭೆಗೆ ಮೂಲ ಕಾರಣ ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಯಾಗಿದ್ದು, ಇದರಲ್ಲಿ 59 ಮಂದಿಯನ್ನು ಕೊಂದು ಹಾಕಲಾಗಿತ್ತು. ಇದು ಉದ್ದೇಶಪೂರ್ವಕ ಕೃತ್ಯವಾಗಿತ್ತು ಎಂದು ನಾನಾವತಿ ಆಯೋಗವು ಈ ಹಿಂದೆ ತಿಳಿಸಿತ್ತು.
2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್ ರೈಲು ಗಾಡಿಯ ಎರಡು ಬೋಗಿಗಳಿಗೆ ಆಕ್ರೋಶಿತ ಗುಂಪೊಂದು ಬೆಂಕಿ ಹಚ್ಚಿದ ಪರಿಣಾಮ 25 ಮಹಿಳೆಯರು, 15 ಮಕ್ಕಳೂ ಸೇರಿದಂತೆ 59 ಮಂದಿ ಸಜೀವ ದಹನಗೊಂಡಿದ್ದರು. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಅಯೋಧ್ಯೆ ಯಾತ್ರೆ ಮುಗಿಸಿ ವಾಪಸ್ ಬರುತ್ತಿದ್ದವರು ಎಂದು ಆಯೋಗ ವಿವರಣೆ ನೀಡಿತ್ತು.
ಈ ಘಟನೆಯ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದಾದ್ಯಂತ ಕೋಮುಗಲಭೆ ಭುಗಿಲೆದ್ದಿತ್ತು. ಪರಿಣಾಮ ಒಟ್ಟು 1,169 ಮಂದಿ ಹತ್ಯೆಯಾಗಿದ್ದರು. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಹೇಳಲಾಗಿದೆ.