ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಕಾಂಗ್ರೆಸ್ ನಿಷೇಧಿತರ ಪಟ್ಟಿಯಲ್ಲಿ ಗುರುತು ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮೇಡಂ ಮತ್ತು ಯುವರಾಜನಿಗೆ ಬಿಗ್‌ಬಿ ಇಷ್ಟವಾಗಿರದೇ ಇದ್ದುದರಿಂದ ಹೀಗೆ ಮಾಡಿರಬಹುದು ಎಂದಿದ್ದಾರೆ.
ಕೊಲ್ಕತ್ತಾದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರನ್ನು ಹೆಸರಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅಮಿತಾಬ್ ಅವರು ಗುಜರಾತ್‌ನ ಪ್ರಚಾರ ರಾಯಭಾರಿಯಾಗಿರುವುದು ಮೇಡಂ ಅವರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರನ್ನು ಆಹ್ವಾನಿಸಲಿಲ್ಲ. ಯುವರಾಜನಿಗೂ ಇಷ್ಟವಾಗಲಿಲ್ಲ. ಹಾಗಾಗಿ ಅವರ ಜತೆ ಮಾತುಕತೆ ನಡೆಸಲಿಲ್ಲ. ಭಾರತೀಯ ಪ್ರಜಾಪ್ರಭುತ್ವಕ್ಕೆ ಇದು ಅಪಮಾನಕಾರಿ ವಿಚಾರ ಎಂದರು.
ಬಾಂದ್ರಾ-ವೋರ್ಲಿ ಸೀ ಲಿಂಕ್ ಉದ್ಘಾಟನೆಯಲ್ಲಿ ಅಮಿತಾಬ್ ಬಚ್ಚನ್ ಅವರ ಉಪಸ್ಥಿತಿಯನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ವಿಶ್ವದೆಲ್ಲೆಡೆ ಭಾರತದ ಘನತೆಯನ್ನು ಹೆಚ್ಚಿಸಲು ಸಹಕರಿಸಿದ ಬಚ್ಚನ್ ಅವರನ್ನು ಆ ಪಕ್ಷ ಕಪ್ಪುಪಟ್ಟಿಯಲ್ಲಿರಿಸಿದೆ. ಇದು ಪ್ರಜಾಪ್ರಭುತ್ವವೇ? ಸಹಿಷ್ಣುತೆಯೆಂದರೆ ಇದೇನಾ? ಪಂಡಿತ್ ಜವಾಹರಲಾಲ್ ನೆಹರೂ ಅವರು ಪ್ರತಿಪಾದಿಸಿದ ಪ್ರಜಾಪ್ರಭುತ್ವ ಇದೇನಾ ಎಂದು ಗಡ್ಕರಿ ಪ್ರಶ್ನಿಸಿದ್ದಾರೆ.
ಆದರೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ವಿಶ್ವವಿದ್ಯಾಲಯದ ಉಪ ಕುಲಪತಿಯೊಬ್ಬರು ರಾಹುಲ್ ಗಾಂಧಿಯನ್ನು ತಮ್ಮ ಯುನಿವರ್ಸಿಟಿಗೆ ಆಹ್ವಾನಿಸಿದ್ದಕ್ಕೆ ಅವರನ್ನು ರಾಜೀನಾಮೆ ನೀಡುವಂತೆ ಬಿಜೆಪಿ ಸೂಚಿಸಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇಂದೋರ್‌ನ ದೈವಿ ಅಹಿಲ್ಯಾ ಯುನಿವರ್ಸಿಟಿ ಉಪ ಕುಲಪತಿ ಅಜಿತ್ ಸಿಂಗ್ ಶೆಹ್ರಾವತ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಅವರು, 'ಅವರ ರಾಜೀನಾಮೆ ಕುರಿತು ಯಾವುದೇ ಮಾಹಿತಿಗಳು ನನ್ನಲ್ಲಿಲ್ಲ' ಎಂದರು.
ಈಗ ರಾಹುಲ್ ಗಾಂಧಿ ಹೋಗಿದ್ದಾರೆ. ನಾಳೆ ನಾನು ಹೋಗುತ್ತೇನೆ. ಇದು ಯುನಿವರ್ಸಿಟಿ ಕೆಲಸವಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ರಾಜಕೀಯ ಪಕ್ಷಗಳು ಯುನಿವರ್ಸಿಟಿಗಳಲ್ಲಿ ರಾಜಕೀಯ ಮಾಡುವುದನ್ನು ನಾವು ಬಯಸುವುದಿಲ್ಲ. ವಿಶ್ವವಿದ್ಯಾಲಯ ಎನ್ನುವುದು ಕೇವಲ ಕಲಿಕೆಗೆ ಮೀಸಲಾಗಿರಬೇಕು ಎಂದು ಗಡ್ಕರಿ ವಿವರಣೆ ನೀಡಿದ್ದಾರೆ.