ಸೈನಿಕರನ್ನು ಭಿಕ್ಷುಕರಂತೆ ಕಾಣ್ಬೇಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್
ನವದೆಹಲಿ, ಶುಕ್ರವಾರ, 2 ಏಪ್ರಿಲ್ 2010( 11:00 IST )
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡುವ ಸೈನಿಕರನ್ನು ಮಾನವೀಯತೆಯಿಂದ ವರ್ತಿಸಿ ಎಂದು ಸೂಚಿಸಿರುವ ಸುಪ್ರೀಂಕೋರ್ಟ್, ಸೈನಿಕರ ಪಿಂಚಣಿ ಮತ್ತು ಸಂಬಳದ ವಿಚಾರಗಳಲ್ಲಿ ಅವರನ್ನು ಭಿಕ್ಷುಕರಂತೆ ಕಾಣಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಒಬ್ಬ ವ್ಯಕ್ತಿ ದೆಹಲಿಯ ಯಾವುದೇ ಭಾಗದಲ್ಲಿ ಭಿಕ್ಷೆ ಬೇಡಲು ಕುಳಿತರೆ ದಿನಕ್ಕೆ ಸಾವಿರ ರೂಪಾಯಿ ಗಳಿಸುತ್ತಾನೆ. ಆದರೆ ನೀವು ದೇಶಕ್ಕಾಗಿ ಹೋರಾಡಿ ಕೈ-ಕಾಲು ಕಳೆದುಕೊಂಡವರಿಗೆ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ನೀಡಿ ಕೈತೊಳೆದುಕೊಳ್ಳುತ್ತಿದ್ದೀರಿ ಇದು ಸರಿಯಲ್ಲಿ ಎಂದು ಕೇಂದ್ರವನ್ನು ಜಾಡಿಸಿದೆ.
ದೇಶದ ರಕ್ಷಣೆಗಾಗಿ ಎದೆಯೊಡ್ಡಿ ಹೋರಾಡುವ ಸಾಹಸಿ ಸೈನಿಕರ ಜೊತೆ ನೀವು ನಡೆದುಕೊಳ್ಳುತ್ತಿರುವ ರೀತಿಯಾ ಇದು?ನೀವು ಅವರನ್ನು ಭಿಕ್ಷುರಂತೆ ಕಾಣುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ನ್ಯಾಯಮೂರ್ತಿಗಳಾದ ಮಾರ್ಕಾಂಡೆಯ ಕಾಟ್ಜು ಮತ್ತು ಎ.ಕೆ.ಪಟ್ನಾಯಕ್ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1970ರ ನವೆಂಬರ್ 21ರಂದು ಅತ್ಯಂತ ಎತ್ತರದ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಬಲಗೈ ಕಳೆದುಕೊಂಡಿದ್ದ ಸೇನಾಧಿಕಾರಿ ಸಿ.ಎಸ್.ಸಿಧು ಅವರಿಗೆ ಹೆಚ್ಚಿನ ಪಿಂಚಣಿ ನೀಡಬೇಕು ಎಂಬ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿ ಸುಪ್ರೀಂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡು ಬಗೆ ಇದು.