ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಲ್ಲಿ ದಲಿತ ಅರ್ಚಕರ ಪಾದಕ್ಕೆ ಬ್ರಾಹ್ಮಣರೂ ಬೀಳುತ್ತಾರೆ! (Dalits | Brahmins | Durga devi | India)
Bookmark and Share Feedback Print
 
ಅದು ಕಾಳಿ ಮಾತೆಯ ಮಂದಿರ. ಆ ದೇವಿಗೆ ಸಮಾಜದ ಕೆಳಸ್ತರದ ದಲಿತರೇ ಪುರೋಹಿತರು. ದೇವಳಕ್ಕೆ ಬರುವ ಬ್ರಾಹ್ಮಣರು, ಠಾಕೂರ್‌ಗಳು ಅಥವಾ ಯಾವುದೇ ಜಾತಿಯವರು ಕೂಡ ಮೇಲು-ಕೀಳೆನ್ನದೆ ಅರ್ಚಕರ ಪಾದಗಳಿಗೆ ಎರಗಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದೇ ಅಲ್ಲಿನ ಸಂಪ್ರದಾಯ.

ಹೌದು, ಇಂತಹ ಒಂದು ವಿಶಿಷ್ಟ ದೇವಸ್ಥಾನವಿರುವುದು ಉತ್ತರ ಪ್ರದೇಶದಲ್ಲಿ. ಲಕ್ನೋದಿಂದ 300 ಕಿಲೋ ಮೀಟರ್ ದೂರದಲ್ಲಿರುವ ಇಟಾ ಜಿಲ್ಲೆಯಲ್ಲಿನ ಲಖ್ನಾ ನಗರದಲ್ಲಿನ 200 ವರ್ಷ ಪುರಾತನ ಕಾಳಿ ಮಾತಾ ದೇವಸ್ಥಾನದಲ್ಲಿ ಕೇವಲ ದಲಿತರನ್ನು ಹೊರತುಪಡಿಸಿ ಯಾರೂ ಪೂಜೆ ಮಾಡುವಂತಿಲ್ಲ.

ಜಾತಿ ವಿಭಜನೆ ಮತ್ತು ಭೇದಭಾವಗಳಿಂದಾಗಿ ದಲಿತರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಸಿಗದೇ ಇರಬಹುದು. ಆದರೆ ಇಲ್ಲಿ ಪುರೋಹಿತರನ್ನು ಪೂಜ್ಯ ಭಾವನೆಯಿಂದ ಗೌರವಿಸಲಾಗುತ್ತಿದೆ ಎಂದು ನಗರದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ರಾಮ್ ದುಲಾರ್ ರಾಜ್ಬಾರ್ ಹೇಳುತ್ತಾರೆ.

ಅದು ಬ್ರಾಹ್ಮಣರು, ಠಾಕೂರ್‌ಗಳು ಅಥವಾ ಯಾವುದೇ ಮೇಲ್ವರ್ಗದ ಜನರೇ ಆಗಿರಲಿ, ದೇವಸ್ಥಾನದ ಒಳಗೆ ಬಂದ ನಂತರ ಎಲ್ಲರೂ ದಲಿತ ಪುರೋಹಿತರ ಎದುರು ನಮ್ರತೆಯಿಂದ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಇದು ಹೊರಗಿನವರಿಗೆ ಅಚ್ಚರಿ ತರಬಹುದು. ಆದರೆ ನಮಗೆ ಇದು ಸಂಪ್ರದಾಯ ಎಂದು ವಿವರಣೆ ನೀಡುತ್ತಾರೆ.

ಇದು ಕೇವಲ ಒಂದು ದೇವಸ್ಥಾನ ಮಾತ್ರವಲ್ಲ. ಸಮಾನ ಸಮಾಜಕ್ಕೊಂದು ನಿದರ್ಶನವಾಗುವ ಸ್ಥಳವಿದು ಎನ್ನುತ್ತಾರೆ ನಗರದಲ್ಲಿ ಹಲವು ಬಟ್ಟೆ ಅಂಗಡಿಗಳನ್ನು ಹೊಂದಿರುವ ಉಮೇಶ್ ದೀಕ್ಷಿತ್.

ಲಖ್ನಾ ನಗರದ ಜನತ ದಲಿತ ಪುರೋಹಿತರಲ್ಲೇ ತಮ್ಮ ಮಕ್ಕಳಿಗೆ ನಾಮಕರಣ ಮಾಡಿಸುತ್ತಾರೆ. ದಲಿತ ಅರ್ಚಕರು ಮಕ್ಕಳಿಗೆ ಹೆಸರಿಟ್ಟರೆ ಅದರಿಂದ ಮಕ್ಕಳು ಮತ್ತು ಕುಟುಂಬಕ್ಕೆ ಶುಭ ಮತ್ತು ಸಮೃದ್ಧಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯರ ಪ್ರಕಾರ ಈ ದೇವಳದಲ್ಲಿ ಕೇವಲ ದಲಿತರು ಮಾತ್ರ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವುದರ ಹಿಂದೆ ಸಂಪ್ರದಾಯವೊಂದಿದೆ. ಅವರೇ ಹೇಳುವಂತೆ ಇಲ್ಲಿನ ಅರಸ ಜೈಪಾಲ್ ಸಿಂಗ್ ಎಂಬಾತ ಈ ದೇವಸ್ಥಾನವನ್ನು ಕಟ್ಟಿದ್ದ. ಬಳಿಕ ಇಲ್ಲಿ ಕೇವಲ ದಲಿತರು ಮಾತ್ರ ಪೂಜೆ ಸಲ್ಲಿಸಲು ಅವಕಾಶವಿದೆ ಎಂದು ಕಟ್ಟಪ್ಪಣೆ ವಿಧಿಸಿದ್ದ.

ದೇವಸ್ಥಾನ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಇಡಬೇಕಿದ್ದ ಮೂರ್ತಿಯೊಂದನ್ನು ಛೋಟೆಲಾಲ್ ಎಂಬ ದಲಿತ ಸ್ಪರ್ಶಿಸಿದ ಎಂಬ ಕಾರಣಕ್ಕೆ ಮೇಲ್ಜಾತಿಯ ಮಂದಿ ಥಳಿಸಿದ್ದರು. ಇದನ್ನು ಗಮನಿಸಿದ ಜೈಪಾಲ್ ಸಿಂಗ್ ಮಧ್ಯ ಪ್ರವೇಶಿಸಿ, ಈ ದೇವಸ್ಥಾನ ನಿರ್ಮಾಣವಾದ ಬಳಿಕ ಛೋಟೇಲಾಲ್ ಮತ್ತು ಆತನ ಕುಟುಂಬ ಮಾತ್ರ ಇದನ್ನು ನೋಡಿಕೊಳ್ಳಬೇಕು ಎಂದು ಆದೇಶ ನೀಡಿದ್ದ. ಅದರಂತೆ ಈಗಲೂ ನಡೆದುಕೊಂಡು ಬಂದಿದೆ ಎಂದು ಇಲ್ಲಿನ ನಿವಾಸಿ ರಾಮ ರಕ್ಷಾ ಪಾಂಡೆ ವಿವರಿಸುತ್ತಾರೆ.

ಪ್ರಸಕ್ತ ಛೋಟೇಲಾಲ್‌ನ ನಾಲ್ಕನೇ ಪೀಳಿಗೆಯವರಾದ ಅಶೋಕ್ ಕುಮಾರ್ (43) ಮತ್ತು ಅಖಿಲೇಸ್ ಕುಮಾರ್ (45) ಎಂಬ ಇಬ್ಬರು ಅರ್ಚಕರು ಕಾಳಿ ಮಾತೆಯ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ