ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯೋಗ ಗುರು ರಾಮದೇವ್‌ಗೆ ತಲೆ ಕೆಟ್ಟಿದೆ: ಲಾಲೂ ವಾಗ್ದಾಳಿ
(yoga guru Baba Ramdev | RJD | Lalu Prasad Yadav | politics)
ರಾಜಕಾರಣಿಗಳನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವ ಯೋಗ ಗುರು ರಾಮದೇವ್ ಅವರನ್ನು ಹುಚ್ಚ ಎಂದು ರಾಷ್ಟ್ರೀಯ ಜನತಾದಳ ವರಿಷ್ಠ ಲಾಲೂ ಪ್ರಸಾದ್ ಯಾದವ್ ಕರೆದಿದ್ದು, ರಾಜಕೀಯದಿಂದ ದೂರ ಉಳಿಯುವಂತೆ ಸಲಹೆ ನೀಡಿದ್ದಾರೆ.
ರಾಮದೇವ್ ಬಾಬಾ ಅವರಿಗೆ ತಲೆ ಕೆಟ್ಟಿದೆ. ಅವರು ಎಲ್ಲಾ ರಾಜಕಾರಣಿಗಳನ್ನೂ ಟೀಕಿಸುತ್ತಿದ್ದಾರೆ. ರಾಜಕೀಯಕ್ಕೆ ಸೇರಬೇಡಿ ಎಂದು ನಾನು ಅವರಿಗೆ ಸಲಹೆ ನೀಡಿದ್ದೇನೆ. ಒಂದು ಬಾರಿ ಜನರಿಂದ ಥಳಿತಕ್ಕೊಳಗಾಗುವುದನ್ನು ನಾವು ತಪ್ಪಿಸಿ ಅವರನ್ನು ರಕ್ಷಿಸಿದ್ದೆವು ಎಂದು ಪಾಟ್ನಾದಲ್ಲಿ ಮಾತನಾಡುತ್ತಾ ಲಾಲೂ ತಿಳಿಸಿದ್ದಾರೆ.
ತನ್ನನ್ನು ಶ್ರೇಷ್ಠ, ಉತ್ತಮನೆಂದು ಹೇಳಿಕೊಳ್ಳಲು ದೇಶದ ಎಲ್ಲಾ ರಾಜಕಾರಣಿಗಳನ್ನೂ ಟೀಕಿಸುವುದು ತರವಲ್ಲ. ಯೋಗ ಗುರು ರಾಜಕೀಯ ಪಕ್ಷವನ್ನು ಸ್ಥಾಪಿಸಬಾರದು ಎಂದು ಈಗಾಗಲೇ ಅವರಿಗೆ ಹೇಳಿದ್ದೇನೆ. ಹಾಗೆ ನೋಡಿದರೆ ಅವರು ಯೋಗದ ಹೆಸರಿನಲ್ಲಿ ಜನರಿಗೆ ಮಂಕು ಬೂದಿ ಎರಚಿ ಮೋಸ ಮಾಡುತ್ತಿದ್ದಾರೆ ಎಂದು ಒಂದು ಕಾಲದಲ್ಲಿ ಹೊಗಳುತ್ತಿದ್ದ ಲಾಲೂ ವಾಗ್ದಾಳಿ ನಡೆಸಿದ್ದಾರೆ.
ಲಾಲೂ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ರಾಮದೇವ್ ಮೇಲೆ ಕೇಳಿ ಬಂದಿದ್ದ ಆರೋಪಗಳನ್ನು ಸಮರ್ಥಿಸಿಕೊಂಡಿದ್ದನ್ನು ಇದೀಗ ಸ್ಮರಿಸಿಕೊಳ್ಳಬಹುದಾಗಿದೆ. ಹರಿದ್ವಾರದಲ್ಲಿ ಯೋಗ ಗುರುವಿನ ಸಂಸ್ಥೆಯೊಂದರಲ್ಲಿ ಆಯುರ್ವೇದ ಔಷಧ ತಯಾರಿಕೆಯಲ್ಲಿ ಪ್ರಾಣಿಗಳ ಮೂಳೆಗಳನ್ನು ಬಳಸಲಾಗುತ್ತಿದೆ ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ಆರೋಪಿಸಿದ್ದ ಸಂದರ್ಭದಲ್ಲಿ ರಾಮದೇವ್ ಅವರ ಬೆಂಬಲಕ್ಕೆ ಲಾಲೂ ಬಂದಿದ್ದರು.
ಲಾಲೂ ನಾಲಗೆಗೆ ಹಿಡಿತವಿರಲಿ: ಗಡ್ಕರಿ ರಾಮದೇವ್ ಅವರನ್ನು ತೀವ್ರವಾಗಿ ಟೀಕಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಗೌರವಾನ್ವಿತ ಧಾರ್ಮಿಕ ಗುರುಗಳ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಿದ್ದಾರೆ.
ಒಬ್ಬ ಗೌರವಾನ್ವಿತ ವ್ಯಕ್ತಿಯ ವಿರುದ್ಧ ಲಾಲೂ ನೀಡಿರುವ ಹೇಳಿಕೆಗಳು ಸಮರ್ಥನೀಯವಲ್ಲ. ಟೀಕಿಸುವಾಗ ಯಾವ ಭಾಷೆಯನ್ನು ಬಳಸುತ್ತಿದ್ದೇವೆ ಎಂಬ ಕನಿಷ್ಠ ಅರಿವು ಇರಬೇಕು ಎಂದು ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ದೇಶದ ರಾಜಕಾರಣಿಗಳಿಗೆ ಜನತೆಯ ಏಳ್ಗೆಯ ಕುರಿತು ಯಾವುದೇ ಚಿಂತೆ ಇಲ್ಲ. ಎಲ್ಲರೂ ತಮ್ಮ ವೈಯಕ್ತಿಕ ವಿಚಾರಗಳಿಗಷ್ಟೇ ಗಮನ ಹರಿಸುತ್ತಾರೆ. ರಾಜಕಾರಣಿಗಳಿಗೆ ಬದ್ಧತೆಯೇ ಇಲ್ಲ. ರಾಜಕಾರಣವನ್ನು ನನ್ನ ಪಕ್ಷ ಪರಿಶುದ್ಧಗೊಳಿಸಲಿದೆ ಎಂದು ರಾಮದೇವ್ ಈ ಹಿಂದೆ ಹೇಳಿದ್ದರು.