ಉದ್ಯೋಗ ನೇಮಕಾತಿ ಸಂದರ್ಶನಕ್ಕೆ ಹೊರಟಿದ್ದ 25ರ ಹರೆಯದ ವಿವಾಹಿತ ಯುವತಿಯೊಬ್ಬಳನ್ನು ಅಪಹರಿಸಿದ ಮೂವರ ಗುಂಪು ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಕೃತ್ಯ ಬೆಳಕಿಗೆ ಬಂದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ನಾಗ್ಪುರ ಮೂಲದ ಯುವತಿಯ ಗಂಡ ಅಮೆರಿಕಾದಲ್ಲಿದ್ದು, ಇತ್ತೀಚೆಗಷ್ಟೇ ಪುಣೆಗೆ ಬಲಿಪಶು ವಾಪಸಾಗಿದ್ದಳು. ಎಂಬಿಎ ಪದವೀಧರೆಯಾಗಿರುವ ಈಕೆ ನೌಕರಿ ನೇಮಕಾತಿಗಾಗಿ ಟ್ಯಾಕ್ಸಿಯೊಂದನ್ನು ಏರಿದ ನಂತರ ಅಪಹರಿಸಿ ಅತ್ಯಾಚಾರ ನಡೆಸಲಾಗಿದೆ.
ಬಂಧಿತ ಆರೋಪಿಗಳನ್ನು ರಂಜಿತ್ ಶಾಹಜಿ ಗಾಡೆ (25) ಮತ್ತು ಗಣೇಶ್ ಉತ್ತಮ್ ಕಾಮ್ಲೆ (26) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಸುಭಾಷ್ ಹೀರಾಲಾಲ್ ಭೋಂಸ್ಲೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ಇನ್ನಷ್ಟೇ ವರದಿ ಲಭ್ಯವಾಗಬೇಕಿದೆ. ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯರಾತ್ರಿಯವರೆಗೂ ಅತ್ಯಾಚಾರ... ಸಂಜೆ ಸುಮಾರು 4.30ರ ಹೊತ್ತಿಗೆ ಪುಣೆಯ ವೇಕಾದ್ ಎಂಬಲ್ಲಿನ ಬಸ್ ನಿಲ್ದಾಣದಲ್ಲಿ ಯುವತಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕ್ಯಾಬ್ ಬಂದಿತ್ತು. ಆಕೆಯನ್ನು ಡ್ರಾಪ್ ಮಾಡುವುದಾಗಿ ಅದರಲ್ಲಿದ್ದ ಚಾಲಕ ಹೇಳಿದ್ದ.
ಆಗ ಕಾರಿನಲ್ಲಿ ರಂಜಿತ್ ಮತ್ತು ಗಣೇಶ್ ಇಬ್ಬರೇ ಇದ್ದರು. ಸ್ವಲ್ಪ ಹೊತ್ತಿನ ಬಳಿಕ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಇನ್ನೊಬ್ಬ ವ್ಯಕ್ತಿ ತಮ್ಮ ನಿಲುವನ್ನು ಬದಲಾಯಿಸಿ ಈಕೆಯನ್ನು ಅಪಹರಿಸಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ಗೆಳೆಯ ಸುಭಾಷ್‌ನನ್ನೂ ಕಾರಿಗೆ ಹತ್ತಿಸಿಕೊಂಡರು.
ಬಳಿಕ ನಗರದಾದ್ಯಂತ ರಾತ್ರಿ 12 ಗಂಟೆಯವರೆಗೂ ಯುವತಿಯನ್ನು ಕಾರಿನಲ್ಲಿ ದಿಗ್ಬಂಧನಕ್ಕೊಳಪಡಿಸಿ ಸುತ್ತಾಡಿದರು. ಎಲ್ಲಾದರೂ ಕಿರುಚಿದಲ್ಲಿ ನಿನ್ನನ್ನು ಕೊಂದೇ ಹಾಕುವುದಾಗಿ ಆರೋಪಿಗಳು ಯುವತಿಗೆ ಬೆದರಿಕೆಯನ್ನೂ ಹಾಕಿದ್ದರು.
ತಡರಾತ್ರಿ ಹಿಂಜೆವಾಡಿ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕಾರನ್ನು ಕೊಂಡೊಯ್ದ ಆರೋಪಿಗಳು ಒಬ್ಬರ ನಂತರ ಒಬ್ಬರು ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪುಣೆ ಪೊಲೀಸ್ ಉಪ ಆಯುಕ್ತ ಮಹೇಶ್ ಪಾಟೀಲ್ ವಿವರಣೆ ನೀಡಿದ್ದಾರೆ.