ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಘಟಿಕೋತ್ಸವ ಗೌನ್ ಬ್ರಿಟೀಷರ ಅವಶೇಶ: ಜೈರಾಮ್ ರಮೇಶ್
(Jairam Ramesh | barbaric practice | environment minister | convocation gown)
ಘಟಿಕೋತ್ಸವ ಸಮಾರಂಭಗಳಲ್ಲಿ ರೂಢಿಯಂತೆ ಧರಿಸುವ ಮೇಲುಡುಪನ್ನು ಬಹಿರಂಗವಾಗಿ ಕಳಚಿರುವ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್, ಇದೊಂದು 'ವಸಾಹತುಶಾಹಿಗಳ ಅನಾಗರಿಕ ಅವಶೇಷ' ಎಂದು ಶುಕ್ರವಾರ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.
ವಸಾಹತುಶಾಹಿಗಳ ಅಸಂಸ್ಕೃತ ಅವಶೇಷಗಳಿಗೆ ನಾವು ಸ್ವಾತಂತ್ರ್ಯ ಬಂದು 60 ವರ್ಷಗಳ ನಂತರವೂ ಯಾಕೆ ಅಂಟಿಕೊಂಡಿದ್ದೇವೆ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್‌ಮೆಂಟ್ (ಐಐಎಫ್ಎಂ) ಏಳನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಮೇಶ್ ತಿಳಿಸಿದ್ದಾರೆ.
ಓಬೀರಾಯನ ಕಾಲದ ಪಾದ್ರಿಗಳು ಮತ್ತು ಪೋಪ್‌ಗಳು ತೊಡುತ್ತಿದ್ದ ಇಂತಹ ಗೌನ್ ಬದಲು ಸಾಮಾನ್ಯ ದಿರಿಸು ಯಾಕಿಲ್ಲ ಎಂದು ಪ್ರಶ್ನಿಸಿದ ರಮೇಶ್ ತಕ್ಷಣವೇ ತನ್ನ ಬಿಳಿ ಕುರ್ತಾದ ಮೇಲೆ ಧರಿಸಿದ್ದ ಘಟಿಕೋತ್ಸವ ದಿರಿಸನ್ನು ಕಳಚಿ ಅಚ್ಚರಿ ಮೂಡಿಸಿದರು.
ಸಾಮಾನ್ಯ ದಿರಿಸಿನಲ್ಲಿ ಈ ಕಾರ್ಯಕ್ರಮದಲ್ಲಿ ಯಾಕೆ ಪಾಲ್ಗೊಳ್ಳಬಾರದು. ಬ್ರಿಟೀಷರು ಹಾಕಿಕೊಟ್ಟ ದಾರಿಯಲ್ಲೇ ನಾವು ಸ್ವಾತಂತ್ರ್ಯ ಬಂದ ನಂತರವೂ ಯಾಕೆ ಸಾಗಬೇಕು ಎಂದು ಪ್ರಶ್ನಿಸಿ ಸಂಪ್ರದಾಯವನ್ನು ಉಲ್ಲಂಘಿಸಿದ ರಮೇಶ್ ಅವರ ನಾಟಕೀಯ ನಡವಳಿಕೆಯು ಅಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳಿಂದ ಭಾರೀ ಚಪ್ಪಾಳೆಗೆ ಕಾರಣವಾಯಿತು.
ಅದೇ ಹೊತ್ತಿಗೆ ಬಾಲಿವುಡ್ ಮೆಘಾ ಸ್ಟಾರ್ ಅಮಿತಾಬ್ ಬಚ್ಚನ್ ಜತೆ ಕಾಂಗ್ರೆಸ್ ನಾಯಕರು ವೇದಿಕೆ ಹಂಚಿಕೊಳ್ಳುವ ಕುರಿತಾದ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.