ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಗಳಿಗೆ ಅತ್ತಿಗೆಯಾದ ಸಾನಿಯಾ; ಭಾರತದಲ್ಲಿ ಪ್ರತಿಕೃತಿ ದಹನ
(Shoaib Malik | Sania Mirza | Ayesha Siddiqui | nikahnama)
ಪಾಕಿಗಳಿಗೆ ಅತ್ತಿಗೆಯಾದ ಸಾನಿಯಾ; ಭಾರತದಲ್ಲಿ ಪ್ರತಿಕೃತಿ ದಹನ
ನವದೆಹಲಿ, ಶನಿವಾರ, 3 ಏಪ್ರಿಲ್ 2010( 11:05 IST )
ಸಾಂಪ್ರದಾಯಿಕ ಎದುರಾಳಿ ಎಂದೇ ಗುರುತಿಸಲ್ಪಡುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ತಮ್ಮ ದೇಶದ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಮದುವೆಯಾಗುತ್ತಿರುವುದಕ್ಕೆ ಪೂರ್ಣಕುಂಭ ಸ್ವಾಗತ ಕೋರಿರುವ ಪಾಕಿಸ್ತಾನೀಯರು 'ಅತ್ತಿಗೆ' ಎಂದು ಕರೆಯಲಾರಂಭಿಸಿದ್ದರೆ, ಇತ್ತ ಭಾರತದಲ್ಲಿ ವಿಶ್ವ ಹಿಂದೂ ಪರಿಷತ್ ಮುಂತಾದ ಸಂಘಟನೆಗಳು ಗದ್ದಲ ಎಬ್ಬಿಸಿ ಆಕೆಯ ಪ್ರತಿಕೃತಿಗಳನ್ನು ದಹಿಸುತ್ತಿವೆ.
ಶೋಯಿಬ್ ಮತ್ತು ಆಯೇಶಾ ಸಿದ್ಧಿಕಿ ನಡುವೆ ನಡೆದಿದೆ ಎನ್ನಲಾದ ಮೊದಲನೇ ಮದುವೆಗೆ ವಿಚ್ಛೇದನ ನೀಡದೆ ಮದುವೆಯಾಗುವ ಕುರಿತು ಸಂಶಯಗಳು ಹುಟ್ಟಿಕೊಂಡಿದ್ದರೂ, ಅಂತಿಮವಾಗಿ ಮದುವೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗದು ಎನ್ನುವುದು ಮಿರ್ಜಾ-ಮಲಿಕ್ ಕುಟುಂಬಗಳ ಅಭಿಪ್ರಾಯ.
ಬನ್ನಿ ಸಾನಿಯಾ ಬಾಬಿ... ಹೀಗೆಂದು ಹೇಳುತ್ತಿರುವವರು ಪಾಕಿಸ್ತಾನೀಯರು. ಸಾಮಾಜಿಕ ಸಂಪರ್ಕ ತಾಣ 'ಫೇಸ್‌ಬುಕ್'ನಲ್ಲಿ ಸಾನಿಯಾರನ್ನು ಸ್ವಾಗತಿಸಲೆಂದೇ ಸಾನಿಯಾ ಬಾಬಿ ಖಾತೆಯನ್ನು ತೆರೆದಿರುವ ಅಭಿಮಾನಿಗಳು, ಸಾಗರೋಪಾದಿಯಲ್ಲಿ ಸ್ವಾಗತ ಕೋರುತ್ತಿದ್ದಾರೆ.
'ಪಾಕಿಸ್ತಾನಕ್ಕೆ ಅತ್ತಿಗೆ ಸಾನಿಯಾ ಮಿರ್ಜಾರಿಗೆ ಸ್ವಾಗತ' ಎಂಬ ಹೆಸರಿನಲ್ಲಿರುವ ಈ ಖಾತೆಯಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಅಭಿಮಾನಿಗಳು ಸೇರಿಕೊಂಡಿದ್ದಾರೆ. ಇಲ್ಲಿ ಟೀಕಿಸುವವರೂ ಇದ್ದಾರೆ ಎಂಬುದು ಗಮನಾರ್ಹ.
PR
ಸಾನಿಯಾ ತನ್ನ ಕ್ರೀಡಾ ಜೀವನದಲ್ಲಿ ಸುದ್ದಿಯಾದ ಹಲವು ಮಜಲುಗಳನ್ನು ತೋರಿಸುವ ಚಿತ್ರಗಳು, ಎಡಿಟ್ ಮಾಡಿರುವ ಚಿತ್ರಗಳನ್ನು ಕೂಡ ಈ ಸೈಟಿನಲ್ಲಿ ಪ್ರಕಟಿಸಲಾಗಿದೆ.
ಮೊದಲ ನಿಶ್ಚಿತಾರ್ಥ ನಡೆದಿದ್ದ ಸೊಹ್ರಾಬ್ ಮಿರ್ಜಾ ತಲೆಗೆ ಶೋಯಿಬ್ ತಲೆಯನ್ನು ಸಿಕ್ಕಿಸಿರುವ ಚಿತ್ರ, ಮಗು ಶೋಯಿಬ್‌ಗೆ ಸಾನಿಯಾ ಲಾಲಿ ಹಾಡುತ್ತಿರುವ ಚಿತ್ರಗಳಿವೆ.
ಅತ್ಯುತ್ತಮ ಜೋಡಿ, ಇವರಿಗೆ ಅಲ್ಲಾಹು ಆಶೀರ್ವಾದ ಮಾಡಲಿದ್ದಾರೆ ಎಂದೆಲ್ಲಾ ಅಭಿಮಾನಿಗಳು ಬರೆದುಕೊಂಡಿದ್ದಾರೆ. ಇಲ್ಲಿನ ಮತ್ತೊಂದು ಅಂಶವೆಂದರೆ ಅಪಮಾನಕಾರಿ ಕಾಮೆಂಟುಗಳಿಗೆ ಈ ಸೈಟಿನಲ್ಲಿ ಅವಕಾಶವಿರದೇ ಇರುವುದು. ಈ ಖಾತೆಯನ್ನು ತೆರೆದಿರುವ ವ್ಯಕ್ತಿ, 'ಸಾನಿಯಾ ಮತ್ತು ಶೋಯಿಬ್ ಪಾಕಿಸ್ತಾನದ ಹೆಮ್ಮೆಯಾಗಿದ್ದು, ಅವರಿಗೆ ನಾವು ಗೌರವ ತೋರಿಸಬೇಕು' ಎಂದಿದ್ದಾರೆ.
ಸಾನಿಯಾ ಪ್ರತಿಕೃತಿ ದಹನ... 100 ಕೋಟಿ ಭಾರತೀಯರಲ್ಲಿ ಅರ್ಹ ಪುರುಷನನ್ನು ಆರಿಸುವ ಬದಲು ಪಾಕಿಸ್ತಾನೀಯನನ್ನು ಆರಿಸಿದ್ದು ಯಾಕೆ? ಭಾರತದಲ್ಲಿನ ಹತ್ತಾರು ಕೋಟಿ ಮುಸ್ಲಿಮ್ ಯುವಕರಲ್ಲಿ ಯಾರಾದರೂ ಒಬ್ಬನನ್ನು ಆರಿಸಬಹುದಿತ್ತಲ್ಲವೇ? ಭಾರತದ ಎದುರಾಳಿ ರಾಷ್ಟ್ರ, ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಕ್ಕೆ ಸೊಸೆಯಾಗುವ ಅಗತ್ಯವೇನಿತ್ತು ಎಂದು ಹಲವು ಸಂಘಟನೆಗಳು ಪ್ರಶ್ನಿಸಿವೆ.
ಶಿವಸೇನೆ ವರಿಷ್ಠ ಬಾಳ ಠಾಕ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೆ ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಸೇನೆಗಳು ಕೂಡ ಕೆಂಡ ಕಾರಿವೆ. ಭೋಪಾಲ್ ಸೇರಿದಂತೆ ಹಲವೆಡೆ ವಿಎಚ್‌ಪಿ ಕಾರ್ಯಕರ್ತರು ಸಾನಿಯಾ ಮಿರ್ಜಾ ಅವರ ಭಿತ್ತಿಪತ್ರ, ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿರುವ ವರದಿಗಳೂ ಬಂದಿವೆ.
ನನಗೆ ಬೇಕಾಗಿರುವುದು ಡೈವೋರ್ಸ್ ಮಾತ್ರ... ಹೀಗೆಂದು ಹೇಳಿರುವುದು ಶೋಯಿಬ್ ಜತೆಗಿನ ಮದುವೆಯ ದಾಖಲೆಯನ್ನು (ನಿಕಾಹ್‌ನಾಮ್) ನಿನ್ನೆಯಷ್ಟೇ ಬಿಡುಗಡೆ ಮಾಡಿರುವ ಆಯೇಶಾ ಸಿದ್ಧಿಕಿ.
ನಾನೀಗ ಬಯಸುತ್ತಿರುವುದು ಶೋಯಿಬ್ ಅವರಿಂದ ಅಧಿಕೃತ ವಿಚ್ಛೇದನ ಮಾತ್ರ. ಆದರೆ ಅದು ಬಹಿರಂಗವಾಗಿ ನಡೆಯಬೇಕು, ಮುಚ್ಚಿದ ಕೋಣೆಯೊಳಗಲ್ಲ. ಅವರ ಜತೆಗಿನ ಮದುವೆಯ ಬಗ್ಗೆ ಜನ ನನ್ನಲ್ಲಿ ಪ್ರಶ್ನಿಸುತ್ತಿರುವುದಕ್ಕೆ ತಿಲಾಂಜಲಿ ನೀಡಬೇಕಾಗಿದ್ದು, ಅವರು ಅಧಿಕೃತವಾಗಿ 'ತಲಾಖ್, ತಲಾಖ್, ತಲಾಖ್' ಎಂದು ಹೇಳಲೇಬೇಕು ಎಂದು ಶೋಯಿಬ್ ಮೊದಲ ಪತ್ನಿ ಎಂದು ಹೇಳಲಾಗುತ್ತಿರುವ ಹೈದರಾಬಾದ್ ಹುಡುಗಿ ಆಯೇಶಾ ಆಗ್ರಹಿಸಿದ್ದಾಳೆ.
ಶೋಯಿಬ್ ಕುಟುಂಬದವರು ನನ್ನ ಜತೆಗಿನ ಮದುವೆಯನ್ನು ಸತತವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಹಾಗಾಗಿ ನಾನು ಮದುವೆಯ ದಾಖಲೆಗಳನ್ನು ಅನಿವಾರ್ಯವಾಗಿ ಬಹಿರಂಗಪಡಿಸಬೇಕಾಗಿಯಿತು. ಅದರಲ್ಲಿ ಶೋಯಿಬ್ ಮತ್ತು ಸಾಕ್ಷಿಗಳ ಸಹಿಯಿದೆ. ಇದನ್ನು ಅವರು ನಿರಾಕರಿಸಲು ಸಾಧ್ಯವೇ ಇಲ್ಲ ಎಂದು ಆಯೇಶಾ ಹೇಳಿದ್ದಾಳೆ.
ತಾನು ದಡೂತಿಯಾಗಿದ್ದೇನೆಂದು ಹೀಯಾಳಿಸುತ್ತಿದ್ದ ಶೋಯಿಬ್ ಕಾರಣದಿಂದ ನಾನು ದೆಹಲಿಯಲ್ಲಿ ಸರ್ಜರಿ ಕೂಡ ಮಾಡಿಸಿಕೊಂಡಿದ್ದೆ. ಆದರೆ ಅವರು ನಂತರವೂ ತನ್ನ ನಿರಾಕರಣೆಯನ್ನು ಮುಂದುವರಿಸಿದರು. ನಾನೇನು ಸಾನಿಯಾಳನ್ನು ವಿರೋಧಿಸುತ್ತಿಲ್ಲ, ಆದರೆ ಸತ್ಯ ಹೊರಗೆ ಬರಬೇಕು ಎಂದಿದ್ದಾಳೆ.
ಅದೇ ಹೊತ್ತಿಗೆ ಶೋಯಿಬ್ ಮದುವೆಯಾಗಿರುವುದು ಮಹಾ ಸಿದ್ಧಿಕಿಯನ್ನೇ ಹೊರತು ಆಯೇಶಾಳನ್ನಲ್ಲ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಆಯೇಶಾ, 'ನನ್ನ ಹೆಸರು ಮಹಾ ಸಿದ್ಧಿಕಿ. ನನ್ನ ಅಜ್ಜಿ ನನಗೆ ಇಟ್ಟ ಹೆಸರು ಆಯೇಶಾ. ಪಾಸ್‌ಪೋರ್ಟಿನಲ್ಲೂ ನನ್ನ ಹೆಸರು ಮಹಾ ಎಂದೇ ನಮೂದಾಗಿದೆ. ನಿಕಾಹ್ ಸಂದರ್ಭದಲ್ಲಿ ಬೇರೆ ಹೆಸರನ್ನು ನೀಡಲಾಗಿದೆ ಎಂಬ ವಾದ ಸರಿಯಲ್ಲ, ಯಾಕೆಂದರೆ ಎರಡೂ ಹೆಸರುಗಳು ನನ್ನವೇ' ಎಂದು ವಿವರಣೆ ನೀಡಿದ್ದಾಳೆ.
ಆಯೇಶಾ ನನ್ನ ಹೆಂಡತಿ... ಇಂತಹ ಒಂದು ಹೇಳಿಕೆಯನ್ನು ಸ್ವತಃ ಶೋಯಿಬ್ ನೀಡಿರುವ ವೀಡಿಯೋ ತುಣುಕುಗಳನ್ನು ಇದೀಗ ಪಾಕಿಸ್ತಾನಿ ಚಾನೆಲ್‌ಗಳು ಪ್ರಸಾರ ಮಾಡುತ್ತಿವೆ.
ನೀವೊಬ್ಬ ಯಶಸ್ವೀ ಕ್ರಿಕೆಟ್ ಆಟಗಾರ ಮತ್ತು ಯುವಕನಾಗಿರುವುದರಿಂದ ಹುಡುಗಿಯರು ಮುಗಿ ಬಿದ್ದರೆ ಏನು ಮಾಡುತ್ತೀರಿ ಎಂದು 2004ರಲ್ಲಿ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ್ದ ಶೋಯಿಬ್, 'ಅಂದರೆ ನೀವು ನನ್ನ ಹೆಂಡತಿಯಿಂದ ನನಗೆ ಹೊಡೆಸಬೇಕೆಂದು ಹೇಳುತ್ತಿದ್ದೀರಿ. ಯಾಕೆಂದರೆ ನನಗೆ ಈಗಾಗಲೇ ಮದುವೆಯಾಗಿದೆ. ಆಕೆ ಭಾರತದ ಹೈದರಾಬಾದ್‌ನವಳಾಗಿದ್ದು, ಇದೀಗ ಜೆಡ್ಡಾದಲ್ಲಿದ್ದಾಳೆ. ಆಕೆಯ ಹೆಸರು ಆಯೇಶಾ. ಹಾಗಾಗಿ ಹುಡುಗಿಯರ ಕರೆಗಳಿಗೆ ನಾನು ಓಗೊಡಲಾರೆ' ಎಂದು ಹೇಳಿದ್ದರು.