ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದ ಸ್ವಾಮಿ ವಿಶ್ವಾಸಘಾತಕ: 'ಕ್ಯಾಮರಾಮೆನ್' ಲೆನಿನ್ (Ram Gopal Varma | Paramahamsa Nityananda Swami | Dharmananda | Ranjita)
Bookmark and Share Feedback Print
 
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪರಮಹಂಸ ನಿತ್ಯಾನಂದ ಸ್ವಾಮಿ ಭಕ್ತರಿಗೆ ಮಂಕುಬೂದಿ ಎರಚಿದ್ದು, ಆಧ್ಯಾತ್ಮಿಕ ಗುರುವಿನ ಸೋಗಿನಲ್ಲಿ ವಿಶ್ವಾಸಘಾತಕ ಎಸಗಿದ್ದಾರೆ ಎಂದು ತಮಿಳು ನಟಿ ರಂಜಿತಾ ಜತೆಗಿನ ಕಾಮಕಾಂಡದ ಚಿತ್ರೀಕರಣ ನಡೆಸಿದ್ದ ಧರ್ಮಾನಂದ ಯಾನೆ ಲೆನಿನ್ ಕರುಪ್ಪನ್ ಆರೋಪಿಸಿದ್ದಾರೆ.

ಬಿಡದಿಯಲ್ಲಿನ ಆಶ್ರಮದಲ್ಲಿ ನಿತ್ಯಾನಂದ ಸ್ವಾಮಿ ಮಹಿಳೆಯರೊಂದಿಗೆ ಅಸಭ್ಯ ರೀತಿಯಲ್ಲಿದ್ದ ಸಂದರ್ಭದಲ್ಲಿ ತಾನು ಚಿತ್ರೀಕರಣ ನಡೆಸಿದ್ದೆ, ಆಗ ನಾನು ಸ್ವಾಮಿಗೆ ತೀರಾ ಆಪ್ತನಾಗಿ ಕಾರು ಚಾಲಕ ಮತ್ತು ತಾಂತ್ರಿಕ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೆ ಎಂದು ಲೆನಿನ್ ಹೇಳಿಕೊಂಡಿದ್ದರು.

ಸ್ವಾಮಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ ನಂತರ ಮಾಧ್ಯಮಗಳ ಮುಂದೆ ಮೊದಲನೇ ಬಾರಿ ಕಾಣಿಸಿಕೊಂಡಿರುವ ಲೆನಿನ್, 'ಸ್ವಾಮಿಯಿಂದ ಕಿರುಕುಳ ಅನುಭವಿಸಿದವರು ನ್ಯಾಯಾಲಯದಲ್ಲಿ ಬಂದು ಸತ್ಯವನ್ನೇ ನುಡಿಯಲಿದ್ದಾರೆ' ಎಂದು 'ಟೈಮ್ಸ್ ನೌ' ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.
PR

ಲಂಪಟತನವನ್ನೊಳಗೊಂಡ ವೀಡಿಯೋವನ್ನು ಚಿತ್ರೀಕರಿಸಿದ್ದರ ಹಿಂದಿನ ಉದ್ದೇಶ 'ಭಕ್ತರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವ ಮೂಲಕ ಮೋಸ ಮಾಡುತ್ತಿದ್ದ ಸ್ವಾಮಿ ನಿತ್ಯಾನಂದ ಒಬ್ಬ ವಿಶ್ವಾಸಘಾತಕ ಮತ್ತು ಸ್ವಾಮಿಯ ಕುಕೃತ್ಯಗಳನ್ನು ಬಹಿರಂಗಪಡಿಸುವುದು' ಮಾತ್ರವಾಗಿತ್ತು ಎಂದು ಇದೇ ಸಂದರ್ಭದಲ್ಲಿ ಲೆನಿನ್ ಸ್ಪಷ್ಟಪಡಿಸಿದ್ದಾರೆ.

ಅದೇ ಹೊತ್ತಿಗೆ ಭಾರೀ ರಾಜಕೀಯ ಪ್ರಭಾವ ಹೊಂದಿರುವ ನಿತ್ಯಾನಂದ ಸ್ವಾಮಿಯಿಂದ 'ಬಳಸಲ್ಪಟ್ಟಿರುವ' ಇಬ್ಬರು ಬಲಿಪಶುಗಳು ನ್ಯಾಯಾಲಯದ ಮುಂದೆ ಬಂದು ಅವರ ಕೃತ್ಯಗಳನ್ನು ಪ್ರಮಾಣೀಕರಿಸಲಿದ್ದಾರೆ ಎಂಬ ಭರವಸೆಯನ್ನೂ ಮಾಜಿ ಅನುಯಾಯಿ ವ್ಯಕ್ತಪಡಿಸಿದ್ದಾರೆ.

ರಂಜಿತಾ ಮತ್ತು ಯುವರಾಣಿ ಎಂಬ ಇಬ್ಬರು ತಮಿಳು ನಟಿಯರ ಜತೆ ಸ್ವಾಮಿ ನಿತ್ಯಾನಂದ ನಡೆಸಿದ್ದಾರೆ ಎನ್ನಲಾಗಿರುವ ಲೈಂಗಿಕ ಚಟುವಟಿಕೆಗಳ ಚಿತ್ರೀಕರಣ ನಡೆಸಿದ್ದ ಲೆನಿನ್, ಅದನ್ನು ಮಾಧ್ಯಮಗಳಿಗೆ ಹಂಚಿದ್ದರು. ಇದು ಬಹಿರಂಗಗೊಂಡ ಬಳಿಕ ತೀವ್ರ ಟೀಕೆ ಮತ್ತು ಒತ್ತಡವನ್ನೆದುರಿಸಿದ ಸ್ವಾಮಿ ಭೂಗತರಾಗಿದ್ದು, ಈಗಾಗಲೇ ನಿತ್ಯಾನಂದ ಪೀಠದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ಸಲ್ಲಿಸಿದ್ದಾರೆ.

ತಾನು ಯಾವುದೇ ತಪ್ಪನ್ನು ಮಾಡಿಲ್ಲ. ತನ್ನ ವಿರೋಧಿಗಳು ಪಿತೂರಿ ನಡೆಸಿದ್ದಾರೆ. ಬಹಿರಂಗಗೊಂಡಿರುವ ವೀಡಿಯೋದಲ್ಲಿರುವುದು ನಾನು ಹೌದು, ಅದರಲ್ಲಿ ಉದ್ದಕ್ಕೂ ಕಾಣಿಸಿಕೊಂಡಿರುವ ವ್ಯಕ್ತಿ ನಾನಲ್ಲ. ಇದರಲ್ಲಿ ಸಾಕಷ್ಟು ಎಡಿಟಿಂಗ್ ಮಾಡುವ ಮೂಲಕ ನನ್ನ ಖಾಸಗಿ ಜೀವನವನ್ನು ಮಣ್ಣುಪಾಲು ಮಾಡಲಾಗಿದೆ ಎಂದು ಸ್ವಾಮಿ ಪ್ರತ್ಯಾರೋಪ ನಡೆಸಿದ್ದರು.

ಪ್ರಸಕ್ತ ಕರ್ನಾಟಕ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಈಗಾಗಲೇ ಕರ್ನಾಟಕ ಸಿಐಡಿಗೆ ವರ್ಗಾಯಿಸಲ್ಪಟ್ಟಿದೆ.

ವರ್ಮಾರಿಂದ ನಿತ್ಯಾನಂದ ಮಹಾತ್ಮೆ..
ನೈಜ ಕಥೆಗಳನ್ನೇ ಚಿತ್ರ ಮಾಡುವುದರಲ್ಲಿ ಎತ್ತಿದ ಕೈ ಎಂಬ ಖ್ಯಾತಿಯ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ವಯಂ ಘೋಷಿತ ಸ್ವಾಮೀಜಿಯ ಕರ್ಮಕಾಂಡವನ್ನೊಳಗೊಂಡ 'ನಿತ್ಯಾನಂದ ಮಹಾತ್ಮೆ'ಯನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು, ನಾನು ದೇವರು ಮತ್ತು ಅನಾಚಾರಗಳ ಕುರಿತು ಚಿತ್ರವೊಂದನ್ನು ಮಾಡುತ್ತಿದ್ದೇನೆ. ಕೆಲ ದಿನಗಳ ಹಿಂದಷ್ಟೇ ಹೀಗೊಂದು ಚಲನಚಿತ್ರ ನಿರ್ದೇಶಿಸಬಹುದೆಂದು ನನಗೆ ಹೊಳೆದಿತ್ತು. ಆದರೆ ಇದು ಖಂಡಿತಾ ಸ್ವಾಮಿ ನಿತ್ಯಾನಂದ ಅವರ ಆತ್ಮಕತೆಯಲ್ಲ ಎಂದು ವರ್ಮಾ ಸ್ಪಷ್ಟಪಡಿಸಿದ್ದಾರೆ.

ದೇವಮಾನವರುಗಳ ಆಶ್ರಮದ ಒಳಗೆ ನಡೆಯುವ ದೇವರು ಮತ್ತು ಸೆಕ್ಸ್ ಕುರಿತಾದ ಹಲವು ಪ್ರಕರಣಗಳನ್ನು ಆಧರಿಸಿ ನಾನು ಚಿತ್ರ ಮಾಡುತ್ತಿದ್ದೇನೆ. ಇದರಲ್ಲಿ ಯಾರದೇ ಒಬ್ಬರ ವಿಚಾರವಷ್ಟೇ ಒಳಗೊಂಡಿರುವುದಿಲ್ಲ. ಇನ್ನಷ್ಟೇ ನಾನು ಚಿತ್ರಕಥೆ ಬರೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ