ಬಿಹಾರದಲ್ಲಿನ ಶಾಲಾ ಕಟ್ಟಡಗಳನ್ನು ಧ್ವಂಸಗೊಳಿಸಿರುವುದಕ್ಕೆ ಘಟನೆಯ ನಂತರ ಇದೀಗ ಮಾವೋವಾದಿಗಳು ವಿದ್ಯಾರ್ಥಿಗಳ ಕ್ಷಮೆ ಯಾಚಿಸಿದ್ದಾರೆ.
ಕ್ಷಮೆ ಯಾಚಿಸಿರುವ ನೂರಾರು ಪತ್ರಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಗಿದೆ. ಅವರ ಶಾಲೆಗಳನ್ನು ಗುರಿ ಮಾಡಿರುವುದಕ್ಕೆ ನಾವು ಅವರಲ್ಲಿ ಕ್ಷಮೆ ಯಾಚಿಸಿದ್ದೇವೆ. ನಾವು ಯಾಕೆ ಅನಿವಾರ್ಯವಾಗಿ ಶಾಲೆಗಳನ್ನು ಗುರಿ ಮಾಡಬೇಕಾಯಿತು ಎನ್ನುವುದನ್ನು ಕೂಡ ವಿವರಿಸಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ನಕ್ಸಲ್ ನಾಯಕನೊಬ್ಬ ತಿಳಿಸಿದ್ದಾನೆ.
ಸೋನೆ-ಗಂಗಾ-ವಿದ್ಯಾಂಚಲ್ ವಲಯ ಸಮಿತಿಯ ಪರವಾಗಿ ಭಾರತೀಯ ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ಬಂಡುಕೋರರು ಹಿಂದಿಯಲ್ಲಿ ಬರೆದಿರುವ ಪತ್ರಗಳನ್ನು ಮಕ್ಕಳಿಗೆ ಹಂಚಿದ್ದಾರೆ ಎಂದು ವರದಿಗಳು ಹೇಳಿವೆ.
ಶಾಲೆಗಳನ್ನು ಧ್ವಂಸಗೊಳಿಸಿರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರಿದೆ. ನಮ್ಮಿಂದಾಗಿ ಮಕ್ಕಳಿಗೆ ತೊಂದರೆಯಾಗಿರುವುದಕ್ಕೆ ಕ್ಷಮೆ ಇರಲಿ. ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಲು ಕೇಂದ್ರದ ಅರೆಸೇನಾಪಡೆಗಳು ಶಾಲೆಗಳನ್ನು ಬಳಸಲು ಮುಂದಾದ ಕಾರಣ ನಾವು ಶಾಲಾ ಕಟ್ಟಡಗಳನ್ನು ಗುರಿ ಮಾಡಿದ್ದೆವು ಎಂದು ಮಾವೋವಾದಿ ನಾಯಕ ತಿಳಿಸಿದ್ದಾನೆ.
ಅದೇ ಹೊತ್ತಿಗೆ ಸರಕಾರದ 'ಆಪರೇಷನ್ ಗ್ರೀನ್ ಹಂಟ್' ಕಾರ್ಯಾಚರಣೆಗಾಗಿ ಮುಂದಿನ ದಿನಗಳಲ್ಲಿ ಭದ್ರತಾ ಪಡೆಗಳ ಶಿಬಿರಗಳನ್ನು ಎಲ್ಲಾ ಶಾಲೆಗಳಲ್ಲೂ ತೆರೆಯಲಾಗುತ್ತದೆ ಎಂದೂ ಮಾವೋವಾದಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರ ಕೇಂದ್ರ ಸರಕಾರವು ಅರಣ್ಯಗಳು, ಜಮೀನುಗಳು ಮತ್ತು ಬೆಟ್ಟಗುಡ್ಡಗಳನ್ನು ಸ್ಥಳೀಯ ಜನತೆಯ ಅಭಿಪ್ರಾಯಕ್ಕೆ ವಿರುದ್ಧವಾಗಿ ವಿದೇಶಿ ಕಂಪನಿಗಳಿಗೆ ಮಾರುತ್ತಿದೆ. ಮಾವೋವಾದಿಗಳು ಇದನ್ನು ವಿರೋಧಿಸುತ್ತಿದ್ದಾರೆ ಮತ್ತು ವಿರೋಧಿಸುವುದನ್ನು ಮುಂದುವರಿಸುತ್ತಾರೆ ಎಂದು ನಕ್ಸಲರು ಹಂಚಿರುವ ಪತ್ರದಲ್ಲಿ ತಿಳಿಸಲಾಗಿದೆ.
ದಯವಿಟ್ಟು ನಮ್ಮ ಶಾಲೆಗಳನ್ನು ಧ್ವಂಸ ಮಾಡಬೇಡಿ ಎಂದು ಮಾವೋವಾದಿಗಳಿಗೆ ಔರಂಗಾಬಾದ್ ಜಿಲ್ಲೆಯ ನೂರಾರು ಬಡ ಮಕ್ಕಳು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮನವಿ ಮಾಡಿಕೊಂಡಿದ್ದರು.
ಮಾವೋವಾದಿ ಅಂಕಲ್, ನಮ್ಮ ಯಾವ ತಪ್ಪಿಗಾಗಿ ನೀವು ನಮ್ಮ ಶಾಲೆಗಳನ್ನು ನಾಶ ಮಾಡಿ ಶಿಕ್ಷಣದಿಂದ ದೂರ ಉಳಿಸುತ್ತಿದ್ದೀರಿ? ನಿಮಗೆ ಸಮಸ್ಯೆಗಳಿರುವುದು ಪೊಲೀಸರ ಜತೆ. ನಾವು ನಿಮ್ಮ ವೈರಿಗಳು ಯಾವ ಕಾರಣಕ್ಕೆ ಆಗಿದ್ದೇವೆಂದು ತಿಳಿಯುತ್ತಿಲ್ಲ. ನಿಮ್ಮ ಗುರಿಯಾಗಿರುವ ನಮ್ಮ ಶಾಲೆಗಳಲ್ಲಿ ನಾವು ಮಾಡಿರುವ ತಪ್ಪಾದರೂ ಏನು ಎಂದು ಮಕ್ಕಳು ಮಾವೋವಾದಿಗಳಿಗೆ ಬರೆದಿದ್ದ ಪತ್ರದಲ್ಲಿ ಪ್ರಶ್ನಿಸಿದ್ದರು.