ಸಾನಿಯಾ ಮಿರ್ಜಾ ಜತೆಗಿನ ವಿವಾಹ ತೀವ್ರ ವಿವಾದಕ್ಕೆ ತುತ್ತಾಗುತ್ತಿರುವುದನ್ನು ಮನಗಂಡು ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್, ಭಾರತೀಯ ಟೆನಿಸ್ ತಾರೆ ತನ್ನ ಮೊದಲ ಪತ್ನಿಯಾಗಳಿದ್ದಾಳೆ ಮತ್ತು ತಾನು ಯಾವತ್ತೂ ಆಯೇಶಾ ಸಿದ್ಧಿಕಿಯನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಯೇಶಾ ಸಿದ್ಧಿಕಿ ಜತೆ ಶೋಯಿಬ್ ಮೊದಲ ಮದುವೆ ನಡೆದಿತ್ತು ಎಂದು ಆಕೆಯ ಕುಟುಂಬ ವಾದಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಣ್ಣಗೆಗೊಳಿಸಲು ಸಾನಿಯಾ ಮನೆಯಲ್ಲಿರುವ ಪಾಕ್ ಆಟಗಾರ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿವರಗಳನ್ನು ಬಹಿರಂಗಪಡಿಸಿದ್ದು, ಟೆಲಿಫೋನ್ ಮದುವೆಯಾಗಿರುವುದು ಹೌದು; ಆದರೆ ಅದು ನನಗೆ ತೋರಿಸಿದ ಭಾವಚಿತ್ರದಲ್ಲಿದ್ದ ಹುಡುಗಿಯಲ್ಲ ಎಂದು ತಿಳಿಸಿದ್ದಾರೆ.
ನಾವು ಪ್ರೀತಿಸುತ್ತಿದ್ದುದು ಹೌದು... 2001ರಲ್ಲಿ ನಮ್ಮ ನಡುವೆ ದೂರವಾಣಿ ಮಾತುಕತೆಯ ಮೂಲಕ ಸಂಬಂಧ ಆರಂಭವಾಗಿತ್ತು. ಪಾಕಿಸ್ತಾನ ತಂಡದೊಂದಿಗೆ ನಾನು ಆಗ ಶಾರ್ಜಾದಲ್ಲಿದ್ದೆ. ನನಗೆ ಫೋನ್ ಮಾಡಿದ್ದ ಆಕೆ ತಾನು ಆಯೇಶಾಳೆಂದು, ನಿಮ್ಮ ಅಭಿಮಾನಿಯೆಂದೂ, ಸೌದಿ ಅರೇಬಿಯಾದಲ್ಲಿದ್ದೇನೆಂದೂ ಪರಿಚಯಿಸಿಕೊಂಡಿದ್ದಳು. ಈ ರೀತಿ ಮಾತುಕತೆ ಆರಂಭವಾಗಿತ್ತು.
ನಂತರದ ದಿನಗಳಲ್ಲಿ ಮಾತು ಹೆಚ್ಚುತ್ತಾ ಹೋಯಿತು. ಆಯೇಶಾ ತನ್ನದೆಂದು ಹೇಳಿದ್ದ ಕೆಲವು ಭಾವಚಿತ್ರಗಳನ್ನು ನನಗೆ ಕಳುಹಿಸಿದ್ದಳು. ಆ ಫೋಟೋಗಳಲ್ಲಿದ್ದ ಹುಡುಗಿಯನ್ನು ನಾನು ಇದುವರೆಗೂ ಭೇಟಿಯಾಗಿಲ್ಲ.
ಶಾರ್ಜಾ ಟೂರ್ನಮೆಂಟ್ ಮುಗಿಸಿ ಪಾಕಿಸ್ತಾನಕ್ಕೆ ವಾಪಸ್ಸಾದ ನಾನು ಆಯೇಶಾ ಭಾವಚಿತ್ರಗಳನ್ನು ನನ್ನ ಹೆತ್ತವರಿಗೆ ತೋರಿಸಿ, ಈ ಹುಡುಗಿ ನನಗೆ ಇಷ್ಟವಾಗಿದ್ದಾಳೆ ಎಂದು ಹೇಳಿದ್ದೆ. ನಂತರ ಪ್ರತಿ ದಿನ ನಾವು ಮಾತನಾಡುತ್ತಿದ್ದೆವು. ಆಕೆಯನ್ನು ಭೇಟಿ ಮಾಡಲು ನಾನು ಆಸಕ್ತಿ ತೋರಿಸಿದ್ದರೂ, ಬಲವಂತಪಡಿಸಿದರೂ ಆಯೇಶಾ ಅದಕ್ಕೆ ನಿರಾಕರಿಸಿದ್ದಳು. ನಾವು ಮದುವೆಯ ದಿನದಂದೇ ಭೇಟಿ ಮಾಡುವ ಎಂದು ಹೇಳುತ್ತಿದ್ದಳು.
ಭಾವಚಿತ್ರದಲ್ಲಿದ್ದ ಹುಡುಗಿ ನಾನು ದೂರವಾಣಿಯಲ್ಲಿ ಮಾತನಾಡುತ್ತಿದ್ದ ಆಯೇಶಾ ಸಿದ್ಧಿಕಿಯೇ ಆಗಿರಬಹುದು. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಗೊತ್ತಿಲ್ಲ.
ಭೇಟಿಗೆಂದು ಹೈದರಾಬಾದ್‌ಗೆ ಬಂದಿದ್ದೆ... 2002ರಲ್ಲಿ ನಾನು ಆಯೇಶಾಳನ್ನು ಭೇಟಿ ಮಾಡುವ ಏಕೈಕ ಉದ್ದೇಶದಿಂದ ಹೈದರಾಬಾದ್‌ಗೆ ಹೊರಟಿದ್ದೆ. ಆದರೆ ಆಗ ಕರೆ ಮಾಡಿದ ಆಕೆ, ನಾನು ತುರ್ತು ಕೆಲಸದ ನಿಮಿತತ್ ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದೇನೆ; ನಿಮ್ಮನ್ನು ನನ್ನ ಕಸಿನ್‌ಗಳಾದ ರೀಮಾ ಮತ್ತು ಮಹಾ ಅಪಾ (ಹಿರಿಯ ಸಹೋದರಿ) ನೋಡಿಕೊಳ್ಳುತ್ತಾರೆ ಎಂದಿದ್ದಳು.
ನಂತರ ನಾನು ಆಕೆಯ ಕಸಿನ್‌ಗಳಲ್ಲಿ ಮತ್ತು ಹೆತ್ತವರಲ್ಲಿ ವಿಮರ್ಶೆ ನಡೆಸಿದಾಗ, ಆಯೇಶಾ ಇತ್ತೀಚೆಗೆ ಸ್ವಲ್ಪ ದಪ್ಪಗಾಗಿದ್ದಾಳೆ; ಹಾಗಾಗಿ ಆ ರೂಪದಲ್ಲಿ ನಿಮ್ಮನ್ನು ಭೇಟಿ ಮಾಡಲು ಆಕೆಗೆ ಇಷ್ಟವಿಲ್ಲ. ನಿಮಗೆ ಕಳುಹಿಸಿದ್ದ ಚಿತ್ರಗಳು ಒಂದು ವರ್ಷ ಹಳೆಯವು ಎಂದಿದ್ದರು. ನಂತರ ಒಂದು ವರ್ಷದ ಬಳಿಕವೂ ಹೈದರಾಬಾದ್‌ಗೆ ನಾನು ಹೋಗಿದ್ದೆ. ಮತ್ತೆ ರೀಮಾ ಮತ್ತು ಮಹಾ ಅಪಾರನ್ನು ಭೇಟಿ ಮಾಡಿದ್ದೆ. ಆಗಲೂ ಆಯೇಶಾ ಇದೇ ಕಾರಣ ನೀಡಿ ನನ್ನಿಂದ ತಪ್ಪಿಸಿಕೊಂಡಿದ್ದಳು.
ನಂತರ 2005ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸಕ್ಕೂ ಮೊದಲು ಹುಡುಗಿಯನ್ನು ಭೇಟಿ ಮಾಡಿ ಸಂಬಂಧವನ್ನು ಸಂಪ್ರದಾಯಕ್ಕೆ ಒಳಪಡಿಸಬೇಕೆಂದು ನಾನು ನನ್ನ ಬಾವನವರಲ್ಲಿ ಹೇಳಿದ್ದೆ. ಇದೇ ಸಂಬಂಧ ಬಾವ ಇಮ್ರಾನ್ ಜಾಫರ್ ನವದೆಹಲಿಗೆ ಬರಬೇಕೆಂದು ಟಿಕೆಟ್ ಬುಕ್ ಮಾಡಿದ ನಂತರ ಕೊನೆಯ ಕ್ಷಣದಲ್ಲಿ ಮತ್ತೆ ಆಯೇಶಾ ಕೈಕೊಟ್ಟಿದ್ದಳು.
ಬಳಿಕ ತಂಡದ ಪ್ರವಾಸ ಹೈದರಾಬಾದ್‌ಗೆ ಬಂದಿದ್ದಾಗ ಪಂದ್ಯಕ್ಕೂ ಮೊದಲು ತಂಡವನ್ನು ಸಿದ್ಧಿಕಿಯವರ ಮನೆಗೆ ಔತಣಕ್ಕೆಂದು ಕರೆದಿದ್ದರು. ಆ ಸಂದರ್ಭದಲ್ಲಿ ನಾನು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡಿದ್ದೆ. ಪ್ರಶಸ್ತಿ ಸ್ವೀಕರಿಸಿದ್ದ ನಾನು, ನನ್ನ ಪತ್ನಿಯ ತವರು ನಗರವಾಗಿರುವ ಕಾರಣ ಹೆಚ್ಚು ಸಂತೋಷವಾಗಿದೆ ಎಂದು ಹೇಳಿದ್ದೆ.
PR
ಟೆಲಿಫೋನ್ ಮದುವೆ, ನಿಖಾ ಹೌದು... 2002ರ ಹೊತ್ತಿಗೆ ಆಯೇಶಾ ನನ್ನನ್ನು ಮದುವೆಯಾಗಬೇಕೆಂದು ಹೇಳುತ್ತಿದ್ದಳು. ನನಗೂ ಅದೇ ಆಸೆಯಿತ್ತು. ಆದರೆ ಇದಕ್ಕಾಗಿ ನನ್ನಲ್ಲಿ ಜರೂರತ್ತು ಇರಲಿಲ್ಲ. ಆಕೆಯನ್ನೇ ಭೇಟಿಯೇ ಮಾಡಿರಲಿಲ್ಲ. ಆಗ ಆಕೆ ಟೆಲಿಫೋನ್ ನಿಖಾ ಮಾಡಿಕೊಳ್ಳೋಣ ಎಂಬ ಸಲಹೆ ನೀಡಿದಳು. ಇದನ್ನು ಹೆತ್ತವರಲ್ಲಿ ಹೇಳಿದೆ. ನಮ್ಮ ಸುದ್ದಿ ಹೈದರಾಬಾದ್‌ನಲ್ಲಿ ತಿಳಿದುಹೋಗಿರುವುದರಿಂದ ಕುಟುಂಬಕ್ಕೆ ತಲೆಯೆತ್ತಿ ತಿರುಗುವಂತಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ ಎಂಬ ರೀತಿ ಒತ್ತಡಗಳನ್ನು ಆಯೇಶಾ ಹೇರಿದ್ದಳು.
ಭಾವಚಿತ್ರಗಳಲ್ಲಿದ್ದ ಹುಡುಗಿಯನ್ನೇ ನಾನು ಮದುವೆಯಾಗುತ್ತಿದ್ದೇನೆಂದು ಭಾವಿಸಿ ನಂತರ 2002ರ ಜೂನ್‌ನಲ್ಲಿ ನಾನು ನನ್ನ ಗೆಳೆಯನ ಮಳಿಗೆಯೊಂದಕ್ಕೆ ತೆರಳಿ ಅಲ್ಲಿ ನಿಕಾಹ್‌ನಾಮಕ್ಕೆ ಸಹಿ ಮಾಡಿದ್ದೆ.
ಟೆಲಿಫೋನ್ ಮದುವೆಯಾದ ನಂತರ ಪಂದ್ಯಕ್ಕೆಂದು ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗಲೂ ಸಿದ್ಧಿಕಿ ಕುಟುಂಬ ನನಗೆ ಆಯೇಶಾಳನ್ನು ತೋರಿಸಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ಆಯೇಶಾಳ ಸಹೋದರಿ ಎಂದು ಹೇಳಲಾದ ಮಹಾ ಅಪಾಳ ಮೇಲೆ ನನಗೆ ಸಂಶಯ ಬಂದಿತ್ತು. ಆಕೆಯ ನಡೆ-ನುಡಿಗಳು ಫೋನ್‌ನಲ್ಲಿ ಮಾತನಾಡುತ್ತಿದ್ದ ಹುಡುಗಿಯಂತಿದ್ದವು. ಆದರೆ ನಾನು ತಲೆ ಕೆಡಿಸಿಕೊಂಡಿರಲಿಲ್ಲ.
ಫೋಟೋ ಬೇರೆಯವರದ್ದು, ಹುಡುಗಿ ಮಹಾ... ನಂತರ 2005ರ ಆಗಸ್ಟ್‌ನಲ್ಲಿ ನಾನು ಪಾಕಿಸ್ತಾನದಲ್ಲಿದ್ದಾಗ ನನ್ನ ಬಾವ ನನಗೆ ಆಘಾತಕಾರಿ ವಿಚಾರವೊಂದನ್ನು ಪುರಾವೆ ಸಹಿತ ತಿಳಿಸಿದರು. ಸೌದಿಯಲ್ಲಿ ಮಹಾ ಸಿದ್ಧಿಕಿ ಎಂಬ ಶಿಕ್ಷಕಿಯೋರ್ವಳು ತಾನು ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಹೆಂಡತಿ ಎಂದು ಹೇಳುತ್ತಿದ್ದಳು ಎಂದು ಅವರ ಸೌದಿಯಲ್ಲಿರುವ ಸೋದರಳಿಯ ಹೇಳಿದ್ದನ್ನು ತಿಳಿಸಿದರು. ಅಲ್ಲದೆ ಆ ಶಿಕ್ಷಕಿಯ ಭಾವಚಿತ್ರವನ್ನೂ ತೋರಿಸಿದರು. ನನಗೆ ಆಗ ತೀವ್ರ ಆಘಾತವಾಗಿತ್ತು, ಯಾಕೆಂದರೆ ಆ ಚಿತ್ರದಲ್ಲಿದ್ದುದು ಮಹಾ ಅಪಾ!
ಸತ್ಯ ತಿಳಿದ ನಾನು ಆಕ್ರೋಶದಿಂದ ತಕ್ಷಣವೇ ಆಯೇಶಾಳಿಗೆ ಕರೆ ಮಾಡಿ, ನನಗೆ ಕಳುಹಿಸಿರುವ ಚಿತ್ರಗಳನ್ನು ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದೆ. ಆಗ ಕ್ಷಮೆ ಯಾಚಿಸಿದ ಆಕೆ, 'ನಾನು ನಿಮಗೆ ಕಳುಹಿಸಿದ ಚಿತ್ರದಲ್ಲಿದ್ದ ಯುವತಿಗೆ ಈಗಾಗಲೇ ಮದುವೆಯಾಗಿದೆ. ಆ ಚಿತ್ರಗಳನ್ನು ಬಹಿರಂಗಪಡಿಸಿದರೆ ಆಕೆಯ ಜೀವನಕ್ಕೆ ತೊಂದರೆಯಾಗಬಹುದು' ಎಂದಳು. ಹಾಗಾಗಿ ನಮ್ಮ ವಿಚಾರವೇ ತಿಳಿದಿರದ ಮುಗ್ಧ ಯುವತಿಯ ಚಿತ್ರ ಬಿಡುಗಡೆ ಮಾಡುವ ಗೋಜಿಗೆ ನಾನು ಹೋಗಲಿಲ್ಲ. ಈಗಲೂ ಆ ಚಿತ್ರಗಳನ್ನು ನಾನು ಬಹಿರಂಗಪಡಿಸುವುದಿಲ್ಲ.
ನಾನು ಒತ್ತಾಯಿಸಿರಲಿಲ್ಲ: ಆಯೇಶಾ ನನ್ನನ್ನು ಮದುವೆಯಾಗಿ ಎಂದು ನಾನು ಶೋಯಿಬ್‌ಗೆ ಯಾವತ್ತೂ ಒತ್ತಾಯ ಮಾಡಿರಲಿಲ್ಲ. ಅವರೇ ಮುಂದೆ ಬಂದು ನನ್ನನ್ನು ಮದುವೆಯಾಗಿದ್ದರು ಎಂದು ಆಯೇಶಾ ಹೇಳಿಕೊಂಡಿದ್ದಾಳೆ.
ಪಾಕಿಸ್ತಾನದ ಜಿಯೋ ನ್ಯೂಸ್ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಆಯೇಶಾ, ನಾವು 2000ದಲ್ಲಿ ದುಬೈಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದೆವು; ಈ ಸಂದರ್ಭದಲ್ಲಿ ಅವರು ಪಾಕಿಸ್ತಾನಿ ಕ್ರಿಕೆಟಿಗ ಎಂದು ನನಗೆ ಗೊತ್ತಿರಲಿಲ್ಲ. ನಂತರವೂ ನಾವು ಅತ್ಯುತ್ತಮ ಸ್ನೇಹಿತರಾಗಿದ್ದೆವು. ನಾವು ಭೇಟಿಯಾಗಿರುವುದನ್ನು ಮಾಧ್ಯಮಗಳಿಗೆ ತಿಳಿಸಿದ್ದೇ ಶೋಯಿಬ್ ಎಂದು ಹೇಳಿದ್ದಾಳೆ.
ಸಾನಿಯಾ, ಶೋಯಿಬ್ ಹೆಸರಲ್ಲಿ ಐದು ಲಕ್ಷ ಟಿ-ಶರ್ಟ್... ಕ್ರಿಕೆಟಿಗ ಶೋಯಿಬ್ ಮಲಿಕ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಚಿತ್ರಗಳನ್ನೊಳಗೊಂಡ ಐದು ಲಕ್ಷ ಟಿ-ಶರ್ಟ್‌ಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದ ಪಾಕಿಸ್ತಾನಿ ಉದ್ಯಮಿಗಳು, ಮದುವೆ ಮುಂದಕ್ಕೆ ಹೋಗುವ ಸಾಧ್ಯತೆಗಳಿರುವುದರಿಂದ ತಯಾರಿಕೆಗೆ ನೀಡಿರುವ ಆರ್ಡರ್ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಚೀನಾ ಮತ್ತು ಥಾಯ್ಲೆಂಡ್ ಟಿ-ಶರ್ಟ್ ತಯಾರಕರಿಗೆ ಈ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಇದೀಗ ಮದುವೆ ಮುಂದೂಡಲ್ಪಡುವ ಸಾಧ್ಯತೆಗಳು ಕಾಣುತ್ತಿರುವುದರಿಂದ ಸದ್ಯಕ್ಕೆ ಆರ್ಡರ್ ರದ್ದು ಮಾಡಲಾಗಿದೆ ಎಂದು ಕರಾಚಿ ಉದ್ಯಮಿ ಸಿದ್ಧಿಕ್ ಮೆಮೊನ್ ತಿಳಿಸಿದ್ದಾರೆ.
ಮಲಿಕ್ ಮತ್ತು ಆಯೇಶಾ ಸಿದ್ಧಿಕಿ ಕುಟುಂಬದ ನಡುವೆ ಕಾನೂನು ಸಮರ ಆರಂಭವಾಗಿರುವುದರಿಂದ ಮದುವೆ ರದ್ದಾಗಲೂ ಬಹುದು. ಹಾಗಾಗಿ ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಟಿ-ಶರ್ಟ್ ತರಿಸಿಕೊಂಡು ನಷ್ಟ ಮಾಡಿಕೊಳ್ಳುವ ರಿಸ್ಕ್ ಬೇಡ ಎಂದು ಆರ್ಡರ್ ರದ್ದು ಪಡಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಅವರ ಮದುವೆ ವೈಯಕ್ತಿಕ ವಿಚಾರ: ಶಿವಸೇನೆ ಸಾನಿಯಾ ಪಾಕಿಸ್ತಾನಿ ಆಟಗಾರನನ್ನು ಮದುವೆಯಾಗುತ್ತಿರುವುದಕ್ಕೆ ಶುಕ್ರವಾರವಷ್ಟೇ ಕಿಡಿ ಕಾರಿದ್ದ ಶಿವಸೇನೆ ತನ್ನ ವರಸೆಯನ್ನು ಬದಲಾಯಿಸಿದ್ದು, ಅದು ಅವರ ವೈಯಕ್ತಿಕ ವಿಚಾರ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ, 'ಅವರ ಮದುವೆಯ ಕುರಿತ ಪಕ್ಷದ ನಿಲುವನ್ನು ಈಗಾಗಲೇ ಸಾಮ್ನಾದಲ್ಲಿ ಹೇಳಲಾಗಿದೆ. ಅದನ್ನು ಹೊರತುಪಡಿಸಿ ಸಾನಿಯಾ ಯಾರೊಂದಿಗೆ ಮದುವೆಯಾದರೂ ನಮಗೇನೂ ಸಮಸ್ಯೆಯಿಲ್ಲ' ಎಂದಿದ್ದಾರೆ.
ಮದುವೆ ತೀರಾ ವೈಯಕ್ತಿಕ ವಿಚಾರ. ಆಕೆ ತನ್ನ ಜೀವನ ಸಂಗಾತಿಯನ್ನು ಆರಿಸುವ ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ. ಆಕೆ ಪಾಕಿಸ್ತಾನಿಯನನ್ನು ಮದುವೆಯಾಗುತ್ತಿರುವುದಕ್ಕೆ ನಾವು ಹೇಗೆ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಮದುವೆಗೆ ಕಾಂಗ್ರೆಸ್ ಪ್ರತಿಕ್ರಿಯಿಸುವುದಿಲ್ಲ... ಸಾನಿಯಾ ಮಿರ್ಜಾ ಪಾಕಿಸ್ತಾನದ ಸೊಸೆಯಾಗುತ್ತಿರುವುದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆಯೇನು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿರುವ ವಕ್ತಾರ ಅಭಿಷೇಕ್ ಸಿಂಘ್ವಿ, ಇದು ವೈಯಕ್ತಿಕ ವಿಚಾರವಾಗಿರುವ ಕಾರಣ ಪಕ್ಷ ಪ್ರತಿಕ್ರಿಯಿಸಲು ಇಲ್ಲೇನಿದೆ ಎಂದಿದ್ದಾರೆ.
ನನ್ನ ಪ್ರಕಾರ ಒಂದು ಮದುವೆಯ ಕುರಿತು ರಾಜಕೀಯ ಪಕ್ಷಗಳು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅದರಲ್ಲೂ ಕಾಂಗ್ರೆಸ್ ಈ ವಿಚಾರದಿಂದ ದೂರವೇ ಉಳಿಯುತ್ತದೆ. ಮದುವೆಯಾಗುವುದು ಅಥವಾ ಆಗದೇ ಇರುವುದು ವೈಯಕ್ತಿಕ ನಿರ್ಧಾರವಷ್ಟೇ. ತಳವಿಲ್ಲದ ಶಿವಸೇನೆಯಂತಹ ಪಕ್ಷಗಳಿಗೆ ಮಾತ್ರ ಇಂತಹ ಅಗತ್ಯವಿದೆ. ನಮಗಲ್ಲ ಎಂದು ಅವರು ತಿಳಿಸಿದ್ದಾರೆ.
ನಾನು ಶೋಯಿಬ್‌ನನ್ನು ಮದುವೆಯಾಗಲ್ಲ: ಭಗತ್ ಶೋಯಿಬ್ ಮತ್ತೊಬ್ಬ ಗೆಳತಿ ಎಂದು ಹೇಳಲಾಗಿರುವ ಮಾಡೆಲ್, ನಟಿ ಸಯಾಲಿ ಭಗತ್ ನೀಡಿರುವ ಪ್ರತಿಕ್ರಿಯೆಯಿದು. ಆತನ ಜತೆ ಪ್ರೇಮ ಸಂಬಂಧವಿದ್ದುದನ್ನು ನಿರಾಕರಿಸುವ ಆಕೆ, ಸಂಬಂಧವಿತ್ತು ಎಂದಷ್ಟೇ ಒಪ್ಪಿಕೊಳ್ಳುತ್ತಾಳೆ.
ಶೋಯಿಬ್ ಜತೆಗಿನ ಸಂಬಂಧದ ಕಾರಣದಿಂದ ನನ್ನ ಬಾಯ್‌ಪ್ರೆಂಡ್ ನನ್ನನ್ನು ತೊರೆದ. ನಿಜಕ್ಕೂ ಅಂತಹ ಸಂಬಂಧ ನನಗೆ ಆತನ ಜತೆಗೆ ಇರಲಿಲ್ಲ. ಬಾಲಿವುಡ್‌ನಲ್ಲಿ ಚಿತ್ರವೊಂದು ಹಿಟ್ ಆಗಬೇಕಾದರೆ ಗಾಸಿಪ್‌ಗಳು ಅಗತ್ಯವಿರುತ್ತವೆ. ಶೋಯಿಬ್ ಜತೆ ಚಿತ್ರವೊಂದರ ಪ್ರಸ್ತಾಪ ಇದ್ದುದರಿಂದ ನಾನು ಆತನಿಗೆ ಆಪ್ತಳಾಗಿದ್ದೆ. ಆತ ಎಲ್ಲಾದರೂ ಮದುವೆಯ ಆಹ್ವಾನ ನೀಡುತ್ತಿದ್ದರೆ, ನಾನು ಅದಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ ಎಂದು ಭಗತ್ ವಿವರಣೆ ನೀಡಿದ್ದಾಳೆ.