ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಆರೋಪಿಗಳನ್ನು ರಕ್ಷಿಸಿದ ಪಂಚಾಯಿತಿ ಕಟ್ಟೆಯೊಂದು ಬಲಿಪಶು ಯುವತಿಯ ಕುಟುಂಬಕ್ಕೆ ನೀಡಿದ ಪರಿಹಾರವಿದು. 12,500 ಸಾವಿರ ರೂಪಾಯಿ ನೀಡಿ ಕೈತೊಳೆದುಕೊಂಡದ್ದು ಬೆಳಕಿಗೆ ಬಂದದ್ದು ಮಾಧ್ಯಮಗಳ ಮೂಲಕ. ಇದೀಗ ತನಿಖೆಗೆ ಆದೇಶ ನೀಡಲಾಗಿದೆ.
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿ ಏಕಾಂಗಿಯಾಗಿದ್ದಾಗ ಮೂವರು ದುರುಳರು ನುಗ್ಗಿ ಅತ್ಯಾಚಾರ ಎಸಗಿದ್ದರು.
ಎಂನಾಯ್ಕ್ ಖಾನಂ ಠಾಣೆಯ ಪೊಲೀಸರು ದೂರು ಸ್ವೀಕರಿಸಲು ಆರಂಭದಲ್ಲಿ ನಿರಾಕರಿಸಿದ ನಂತರ ಖೇರಾ ಗ್ರಾಮದ ಪಂಚಾಯಿತಿ ಕಟ್ಟೆ 12,500 ರೂಪಾಯಿಗಳನ್ನು ಒಟ್ಟು ಮಾಡಿ ಯುವತಿಯ ಕುಟುಂಬಕ್ಕೆ ನೀಡುವಂತೆ ಆದೇಶ ನೀಡಿತ್ತು.
ಇಂತಹದ್ದೊಂದು ವಿಚಿತ್ರ ತೀರ್ಪು ನೀಡುವ ಮೂಲಕ ಅತ್ಯಾಚಾರಿಗಳಿಗೆ ಪಂಚಾಯಿತಿ ರಕ್ಷಣೆ ನೀಡಿದ್ದು ಮಾತ್ರವಲ್ಲ, ಬಲಿಪಶು ಯುವತಿಯ ಕುಟುಂಬಕ್ಕೆ ಜೀವ ಬೆದರಿಕೆಯನ್ನೂ ಹಾಕಿದೆ. ಗ್ರಾಮದ ಪ್ರಧಾನ ಯೂಕುಬ್ ಆಲಿ ಈ ಬೆದರಿಕೆಯನ್ನು ಹಾಕಿದ್ದಾನೆ. ಪೊಲೀಸರ ಬಳಿ ಮತ್ತೆ ಹೋದರೆ ಕೊಂದೇ ಹಾಕುವುದಾಗಿ ಆತ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದ.
ನಾವು ಪೊಲೀಸರಲ್ಲಿ ದೂರು ನೀಡಲು ಬಯಸಿದ್ದೆವು. ಆದರೆ ಸ್ಥಳೀಯರು ಪಂಚಾಯಿತಿಯಲ್ಲೇ ಪ್ರಕರಣವನ್ನು ಮುಗಿಸುವಂತೆ ಒತ್ತಡ ಹೇರಿದರು. ಆರೋಪಿಗಳು ಪರಿಹಾರ ನೀಡುವಂತೆ ಮಾತ್ರ ಪಂಚಾಯಿತಿ ಆದೇಶ ನೀಡಿದೆ ಎಂದು ಬಲಿಪಶುವಿನ ಚಿಕ್ಕಪ್ಪ ಎಂದು ಹೇಳಲಾಗಿರುವ ಶಾಹಿದ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಗ್ರಾಮದ ಪ್ರಧಾನ ಆಲಿಯನ್ನು ಪತ್ರಿಕೆಯೊಂದು ಪ್ರಶ್ನಿಸಿದಾಗ, 'ನಮ್ಮ ಗ್ರಾಮದಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ. ಹಾಗಾಗಿ ಅಂತಹ ಯಾವುದೇ ಪ್ರಕರಣ ಪಂಚಾಯಿತಿಗೆ ಬಂದಿಲ್ಲ' ಎಂದಿದ್ದಾನೆ.
ಪ್ರಕರಣ ಮಾಧ್ಯಮಗಳ ಮೂಲಕ ಬಯಲಿಗೆ ಬರುತ್ತಿದ್ದಂತೆ ರಾಂಪುರ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರಕರಣ ದಾಖಲಿಸಲು ಆದೇಶ ನೀಡಿದ್ದಾರೆ. ಆದರೆ ಅತ್ಯಾಚಾರ ಪ್ರಕರಣ ದಾಖಲಿಸಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದು, ಈಗ ಲೈಂಗಿಕ ಕಿರುಕುಳ ಪ್ರಕರಣವನ್ನಷ್ಟೇ ದಾಖಲಿಸಿದ್ದಾರೆ. ತನಿಖೆಯ ನಂತರ ಹೆಚ್ಚಿನ ಕ್ರಮ ಕೈಗೊಳ್ಳುವ ಭರವಸೆ ಅವರಿಂದ ಬಂದಿದೆ.
ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗವು ತಕ್ಷಣವೇ ಪ್ರಕರಣದ ಕುರಿತು ವಿಸ್ತ್ರತ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.