ಘಟಿಕೋತ್ಸವದ ಸಾಂಪ್ರದಾಯಿಕ ಉಡುಗೆಯನ್ನು 'ಅನಾಗರಿಕ ವಸಾಹತುಶಾಹಿ ಅವಶೇಷ' ಎಂದು ಕರೆದಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಕ್ರೈಸ್ತರ ಸಮೂಹವೊಂದು ಆಗ್ರಹಿಸಿದೆ.
ರಮೇಶ್ ಅವರ ಹೇಳಿಕೆಯಿಂದ ಪೋಪ್ ಮತ್ತು ವಿಶ್ವದಾದ್ಯಂತದ ಕ್ರೈಸ್ತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ, ಅವರ ಹೇಳಿಕೆಯು ಧಾರ್ಮಿಕ ಭಾವನೆಗಳನ್ನು ಆಳವಾಗಿ ನೋಯಿಸಿವೆ ಎಂದು ಬೆಂಗಳೂರು ಮೂಲದ 'ಭಾರತೀಯ ಕ್ರೈಸ್ತರ ಜಾಗತಿಕ ಪರಿಷತ್' (ಜಿಸಿಐಸಿ) ಅಧ್ಯಕ್ಷ ಸಾಜನ್ ಕೆ. ಜಾರ್ಜ್ ತಿಳಿಸಿದ್ದಾರೆ.
ಭೋಪಾಲ್‌ನಲ್ಲಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್‌ಮೆಂಟ್ (ಐಐಎಫ್ಎಂ) ಏಳನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವರು, 'ವಸಾಹತುಶಾಹಿಗಳ ಅನಾಗರಿಕ ಅವಶೇಷಗಳಿಗೆ ನಾವು ಸ್ವಾತಂತ್ರ್ಯ ಬಂದು 60 ವರ್ಷಗಳ ನಂತರವೂ ಯಾಕೆ ಅಂಟಿಕೊಂಡಿದ್ದೇವೆ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಮಧ್ಯಯುಗದ ಪಾದ್ರಿಗಳು ಮತ್ತು ಪೋಪ್‌ಗಳು ತೊಡುತ್ತಿದ್ದ ಇಂತಹ ಗೌನ್ ಬದಲು ಸಾಮಾನ್ಯ ದಿರಿಸಿನಲ್ಲಿ ಘಟಿಕೋತ್ಸವ ನಡೆಸಲು ಯಾಕೆ ಮುಂದಾಗುತ್ತಿಲ್ಲ' ಎಂದ ತಕ್ಷಣವೇ ತನ್ನ ಬಿಳಿ ಕುರ್ತಾದ ಮೇಲೆ ಧರಿಸಿದ್ದ ಘಟಿಕೋತ್ಸವ ದಿರಿಸನ್ನು ಕಳಚಿದ್ದರು.
ಒಬ್ಬ ಗೌರವಾನ್ವಿತ ಸಚಿವರಿಂದ ಇಂತಹ ಸಂವೇದನಾರಹಿತ ಹೇಳಿಕೆ ಬಂದಿರುವುದನ್ನು ಭಾರತೀಯ ಕ್ರೈಸ್ತರ ಜಾಗತಿಕ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಪೋಪ್ ಅವರನ್ನು ತುಚ್ಛವಾಗಿಸಲು ಭಾರತದ ಕ್ರಿಶ್ಚಿಯನ್ನರ ಮೇಲೆ ಕಿರುಕುಳ ನೀಡುವ ಪ್ರಮುಖ ಸ್ಥಳವಾದ ಭೋಪಾಲ್‌ನಲ್ಲೇ ಇಂತಹ ಹೇಳಿಕೆ ನೀಡಲು ಸಚಿವರು ಮುಂದಾಗಿರುವುದು ನಮಗೆ ಇನ್ನೂ ಹೆಚ್ಚಿನ ಆತಂಕ ತಂದಿದೆ ಎಂದು ಜಾರ್ಜ್ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.
ವಿಶ್ವದಾದ್ಯಂತದ ಮಿಲಿಯಾಂತರ ಜನ ಮತ್ತು ಚರ್ಚ್‌ಗಳಲ್ಲಿನ ಅನಪೇಕ್ಷಿತ ತಪ್ಪುಗಳನ್ನು ಹುಡುಕುವ ಮತ್ತು ಪೋಪ್ ವಿರುದ್ಧ ಅಗೌರವಯುತವಾಗಿರುವ ಮೂಲಕ ಸಚಿವರು ಸಂಪೂರ್ಣ ಬೇಜವಾಬ್ದಾರಿತನ ಮೆರೆದಿದ್ದಾರೆ. ಅಂತಹ ಅಸಂವೇದನಾಕಾರಿಯಾದ ಆರೋಪಗಳನ್ನು ಮಾಡಿರುವ ಸಚಿವರಿಂದ ನಾವು ಬೇಷರತ್ ಕ್ಷಮೆಯನ್ನು ಬಯಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.