ನಕ್ಸಲೀಯರು ದೇಶದ ಮೊದಲ ಶತ್ರುಗಳಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕಿಡಿಕಾರಿದ್ದು, ಇನ್ನು ಎರಡು ಮೂರು ವರ್ಷಗಳಲ್ಲಿ ನಕ್ಸಲೀಯರ ಅಟ್ಟಹಾಸವನ್ನು ಮಟ್ಟಹಾಕಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕಳೆದ 12ವರ್ಷಗಳಲ್ಲಿ ನಕ್ಸಲೀಯರು ತಮ್ಮ ಅಟ್ಟಹಾಸವನ್ನು ಮೆರೆಯುವ ಮೂಲಕ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ಬೆಳೆದಿದ್ದಾರೆ. ಆ ನಿಟ್ಟಿನಲ್ಲಿ ನಕ್ಸಲೀಯರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಸಮರ್ಥವಾಗಿದೆ ಎಂದರು.
ಪಶ್ಚಿಮಬಂಗಾಲದ ನಕ್ಸಲೀಯರ ಕೇಂದ್ರ ಭಾಗವಾದ ಲಾಲ್‌ಗಢಕ್ಕೆ ಭೇಟಿ ನೀಡಿದ್ದ ಸಚಿವರು, ಮಾತುಕತೆಗೆ ಮುಂದಾಗುವಂತೆ ನಕ್ಸಲೀಯರಿಗೆ ಆಹ್ವಾನ ನೀಡಿದ್ದ ಬೆನ್ನಲ್ಲೇ, ನಕ್ಸಲೀಯರ ವಿರುದ್ಧ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಕ್ಸಲೀಸಂ ದೇಶದ ಮೊದಲ ಶತ್ರುವಾಗಿರುವುದಾಗಿ ಕಳೆದ ರಾತ್ರಿ ಚೆನ್ನೈನ ಆವಡಿ ಎಂಬಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ಅಲ್ಲದೇ ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳು ಕೂಡ ಭಾರತವನ್ನು ಶತ್ರು ರಾಷ್ಟ್ರ ಎಂಬಂತೆ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆ ದೇಶಗಳ ಬೆದರಿಕೆಯನ್ನು ಎದುರಿಸಲು ಕೂಡ ಬಜೆಟ್‌ನಲ್ಲಿ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಹಣವನ್ನು ಮೀಸಲಿರಿಸಲಾಗಿದೆ ಎಂದು ವಿವರಿಸಿದರು.
ಪಾಕಿಸ್ತಾನ ಉಗ್ರರಿಗೆ ತರಬೇತಿ ನೀಡಿ, ಭಾರತದೊಳಕ್ಕೆ ಅಕ್ರಮವಾಗಿ ಕಳುಹಿಸುವ ಮೂಲಕ ಭಾರತದ ಮುಸ್ಲಿಮ್ ಮತ್ತು ಹಿಂದುಗಳ ನಡುವೆ ಕೋಮುದಳ್ಳುರಿ ಹಚ್ಚುವ ಕೆಲಸ ಮಾಡುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದರು.