ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೊಲೀಸರಿಂದ ಶೋಯಿಬ್ ವಿಚಾರಣೆ, ಪಾಸ್‌ಪೋರ್ಟ್ ವಶಕ್ಕೆ (Ayesha Siddiqui | Shoaib Malik | Hyderabad police | Sania Mirza)
Bookmark and Share Feedback Print
 
ಶೋಯಿಬ್ ಮಲಿಕ್ ವಿರುದ್ಧ ಆಯೇಶಾ ಸಿದ್ಧಿಕಿ ಕುಟುಂಬ ಕ್ರಿಮಿನಲ್ ಪ್ರಕರಣ ದಾಖಲಿಸಿದ ಮರುದಿನವೇ ಸಾನಿಯಾ ಮಿರ್ಜಾ ಮನೆಗೆ ಆಗಮಿಸಿರುವ ಹೈದರಾಬಾದ್ ಪೊಲೀಸರು ಪಾಕಿಸ್ತಾನಿ ಕ್ರಿಕೆಟ್ ಆಟಗಾರನನ್ನು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದಾರೆ.

ಸುದೀರ್ಘ ಕಾಲ ನಡೆದ ವಿಚಾರಣೆಯ ನಂತರ ಪೊಲೀಸರು ಶೋಯಿಬ್ ಅವರ ಪಾಸ್‌ಪೋರ್ಟ್ ಮತ್ತು ಮೊಬೈಲ್‌ ಫೋನ್ ವಶಪಡಿಸಿಕಂಡಿದ್ದಾರೆ. ಮೂಲಗಳ ಪ್ರಕಾರ ಪೊಲೀಸರು ಮೊಬೈಲ್ ದಾಖಲೆಗಳನ್ನು ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ.

ಶೋಯಿಬ್ ಅವರ ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡಿರುವುದರಿಂದ ಅವರು ತಕ್ಷಣಕ್ಕೆ ಪಾಕಿಸ್ತಾನಕ್ಕೆ ಹೋಗುವಂತಿಲ್ಲ. ಆದರೆ ಅವರನ್ನು ಬಂಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿಲ್ಲವಾದರೂ, ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.

ಆಯೇಶಾ ತೋರಿಸುತ್ತಿರುವ 'ನಿಕಾಹ್‌ನಾಮಾ' ಮದುವೆ ದಾಖಲೆಯಲ್ಲಿರುವ ಸಹಿ ತನ್ನದಲ್ಲ, ಅದನ್ನು ನಕಲಿ ಮಾಡಲಾಗಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಶೋಯಿಬ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಸೋಮವಾರ ಬೆಳಿಗ್ಗೆ ಸಾನಿಯಾ ಮಿರ್ಜಾ ಅವರ ಮನೆಗೆ ಬಂದ ಎಸಿಪಿ ರವಿಕಾಂತ್ ರೆಡ್ಡಿಯವರು ಸಾನಿಯಾರನ್ನೂ ವಿಚಾರಣೆ ನಡೆಸಿದ್ದಾರೆಯೇ ಎಂಬ ಕುರಿತು ಯಾವುದೇ ಮಾಹಿತಿಗಳು ಬಂದಿಲ್ಲ.

ಅದೇ ಹೊತ್ತಿಗೆ ಪೊಲೀಸರು ಆಯೇಶಾ ಮನೆಗೂ ತೆರಳಿದ್ದು, ಆಕೆ ಮತ್ತು ಕುಟುಂಬದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚುವರಿ ದಾಖಲೆಗಳನ್ನು ಪೊಲೀಸರು ಈ ಸಂದರ್ಭದಲ್ಲಿ ಪಡೆದುಕೊಂಡಿದ್ದಾರೆ. ಆಯೇಶಾ ದೂರವಾಣಿ ದಾಖಲೆಗಳನ್ನು ಕೂಡ ಪೊಲೀಸರು ತನಿಖೆಗೊಳಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಯೇಶಾಗೆ ಕಿರುಕುಳ ನೀಡಿರುವುದು, ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ವಂಚಿಸಿರುವುದು, ಬಾಯ್ಮುಚ್ಚಿ ಸುಮ್ಮನಿರುವಂತೆ ಬೆದರಿಕೆ ಹಾಕಿರುವುದು ಮುಂತಾದ ಆರೋಪಗಳನ್ನು ಶೋಯಿಬ್ ಮೇಲೆ ಹೊರಿಸಲಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮೂಲಕ ಶೋಯಿಬ್ ತನ್ನ ಮಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಆಯೇಶಾ ತಂದೆ ಮೊಹಮ್ಮದ್ ಸಿದ್ಧಿಕಿ ಹೈದರಾಬಾದ್‌ನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅವರ ಮೇಲೆ ಐಪಿಸಿ ಸೆಕ್ಷನ್ 420 (ವಂಚನೆ), 498-ಎ (ವರದಕ್ಷಿಣೆ ಕಿರುಕುಳ) ಮತ್ತು 506ರ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ