ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳಾ ಮೀಸಲಾತಿ ಬಿಕ್ಕಟ್ಟು; ಸರ್ವಪಕ್ಷಗಳ ಸಭೆ ವಿಫಲ
(Women's Reservation Bill | Lok Sabha | Pranab Mukherjee | Mulayam Singh)
ಮಹಿಳಾ ಮೀಸಲಾತಿ ವಿಧೇಯಕ ಸಮಸ್ಯೆಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಸರಕಾರ ಕರೆದಿದ್ದ ಸರ್ವಪಕ್ಷಗಳ ಸಭೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲವಾಗಿದೆ. ಬಜೆಟ್ ಅಧಿವೇಶನದ ಎರಡನೇ ಭಾಗದ ಕಲಾಪ ಏಪ್ರಿಲ್ 15ರಂದು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಮಸೂದೆ ಸಂಬಂಧ ಸೋಮವಾರ ಈ ಸಭೆಯನ್ನು ಕರೆಯಲಾಗಿತ್ತು.
ಮಹಿಳಾ ಮೀಸಲಾತಿ ವಿಧೇಯಕವನ್ನು ಈಗಿರುವ ಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಮಸೂದೆ ಮಂಡಿಸುವಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷ ಮುಖಂಡ ಮುಲಾಯಂ ಸಿಂಗ್ ಯಾದವ್, ರಾಷ್ಟ್ರೀಯ ಜನತಾ ದಳ ನಾಯಕ ಲಾಲೂ ಪ್ರಸಾದ್ ಯಾದವ್ ಹಾಜರಿದ್ದ ಈ ಸಭೆಯಲ್ಲಿ ಲೋಕಸಭೆಯ ನಾಯಕರಾಗಿರುವ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಅಧ್ಯಕ್ಷತೆ ವಹಿಸಿದ್ದರು.
ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಎನ್‌ಡಿಎ ಸಂಚಾಲಕ ಶರದ್ ಯಾದವ್, ಸಿಪಿಐಎಂ ನಾಯಕ ಬಸುದೇಲ್ ಅಚಾರಿಯಾ, ಸಿಪಿಐ ಮುಖಂಡ ಗುರುದಾಸ್ ದಾಸ್ ಗುಪ್ತಾ, ಟಿಪಿಪಿಯ ನಾಗೇಶ್ವರ ರಾವ್ ಮತ್ತು ಡಿಎಂಕೆಯಿಂದ ಟಿ.ಆರ್. ಬಾಲು ಪಾಲ್ಗೊಂಡಿದ್ದರು.
ಹಿರಿಯ ಕೇಂದ್ರ ಸಚಿವರುಗಳಾದ ಪಿ. ಚಿದಂಬರಂ, ಎ.ಕೆ. ಆಂಟನಿ, ಶರದ್ ಪವಾರ್, ಮಮತಾ ಬ್ಯಾನರ್ಜಿ, ಎಂ. ವೀರಪ್ಪ ಮೊಯ್ಲಿ, ಪಿ.ಕೆ. ಬನ್ಸಾಲ್, ಪೃಥ್ವಿರಾಜ್ ಚೌಹಾನ್ ಮತ್ತು ವಿ. ನಾರಾಯಣ ಸ್ವಾಮಿಯವರು ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾವು ಮಹಿಳಾ ಮೀಸಲಾತಿಗೆ ವಿರೋಧಿಗಳಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಸಮಾಜವಾದಿ ಮತ್ತು ಆರ್‌ಜೆಡಿ ಮುಖಂಡರು, ಮೀಸಲಾತಿಯೊಳಗೆ ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬುದು ನಮ್ಮ ನಿಲುವು ಎಂದು ತಿಳಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆಗೆ ಕಳೆದ ತಿಂಗಳಿನಲ್ಲಿ ರಾಜ್ಯಸಭೆಯು ಅಂಗೀಕಾರ ನೀಡಿತ್ತು. ಅದನ್ನು ಶೀಘ್ರದಲ್ಲೇ ಸಂಸತ್ತಿನಲ್ಲೂ ಮಂಡಿಸುವ ಉದ್ದೇಶ ಯುಪಿಎ ಸರಕಾರದ್ದು. ಅದಕ್ಕೂ ಮೊದಲು ವಿರೋಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸರಕಾರ ಹೇಳಿದಂತೆ ಈ ಸಭೆಯನ್ನು ಇಂದು ಕರೆಯಲಾಗಿತ್ತು.
ಆದರೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲವಾಗಿರುವ ಸಭೆಯನ್ನು ಮತ್ತೊಮ್ಮೆ ಇದೇ ವಾರ ಕರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.