ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಜಾತ್ಯತೀತತೆಯಿಂದ ಉಗ್ರರಿಗೆ ಬೋನಸ್: ಬಿಜೆಪಿ
(Congress | secularism | terrorists | BJP, Nitin Gadkari, Bangladesh, India, Muslim)
ದೇಶದ ಅಲ್ಪಸಂಖ್ಯಾತರನ್ನು ಓಲೈಸುವ ಮೂಕ ಕಾಂಗ್ರೆಸ್ ತನ್ನ ಓಟ್ ಬ್ಯಾಂಕನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಆಡಳಿತ ಪಕ್ಷವು ಜಾತ್ಯತೀತ ಕಲ್ಪನೆಯನ್ನು ಪ್ರಸಾರ ಮಾಡುತ್ತಿರುವ ರೀತಿಯಿಂದಾಗಿ ಭಾರತದಲ್ಲಿ ಇನ್ನಷ್ಟು ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ಸಹಕಾರವಾಗುತ್ತಿದೆ ಎಂದು ಕಿಡಿ ಕಾರಿದೆ.
ಅಲ್ಪಸಂಖ್ಯಾತರನ್ನು ಸಂತುಷ್ಟಗೊಳಿಸುವ ಬಗ್ಗೆ ಮಾತ್ರ ಕಾಂಗ್ರೆಸ್ ಆಸಕ್ತಿ ತೋರಿಸುತ್ತಿದೆ. ಅವರ ಜಾತ್ಯತೀತ ಘೋಷಣೆಯು ಭಯೋತ್ಪಾದಕರಿಗೆ ತೃಪ್ತಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಈ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಸಾರ್ವಜನಿಕ ರ‌್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.
PTI
ನಾವು ಅಲ್ಪಸಂಖ್ಯಾತ ವಿರೋಧಿಗಳಲ್ಲ. ಅಲ್ಲದೆ ನಮ್ಮದು ಕೋಮವಾದವನ್ನು ಹೊಂದಿರುವ ಪಕ್ಷ ಎಂದು ಹೇಳುವುದೂ ತರವಲ್ಲ. ಭಾರತವನ್ನು ತಮ್ಮ ತಾಯ್ನಾಡು ಎಂದು ಯಾರು ಪರಿಗಣಿಸುತ್ತಾರೋ, ಅವರನ್ನು ನಾವು ಗೌರವಿಸುತ್ತೇವೆ. ಅವರು ಮಸೀದಿಗೆ ಹೋಗುತ್ತಾರೋ, ಚರ್ಚ್‌ಗೆ ಹೋಗುತ್ತಾರೋ ಅಥವಾ ಬೇರೆ ಯಾವುದೇ ಧಾರ್ಮಿಕ ಕೇಂದ್ರಕ್ಕೆ ಹೋಗುತ್ತಾರೋ ಎಂಬುದು ಇಲ್ಲಿ ಪ್ರಶ್ನೆಯೇ ಅಲ್ಲ ಎಂದರು.
ಅದೇ ಹೊತ್ತಿಗೆ ಬಾಂಗ್ಲಾದೇಶಿ ಪ್ರಜೆಗಳು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಅಕ್ರಮವಾಗಿ ನುಸುಳುತ್ತಿದ್ದಾರೆ, ಇದಕ್ಕೆ ಸರಕಾರವು ಯಾವುದೇ ತಡೆಯನ್ನೊಡ್ಡುತ್ತಿಲ್ಲ ಎಂದೂ ಬಿಜೆಪಿ ಅಧ್ಯಕ್ಷರು ಆರೋಪಿಸಿದ್ದಾರೆ.
ಒಂದು ಕಾಲದಲ್ಲಿ ವಿದೇಶೀಯರ ಬಗ್ಗೆ ದನಿಯೆತ್ತುತ್ತಿದ್ದ ಪಕ್ಷಗಳು ಈಗ ಸುಮ್ಮನಾಗಿರುವುದು ನಿಜಕ್ಕೂ ದುಃಖಕರ ವಿಚಾರ. ಚುನಾವಣೆಗಳಲ್ಲಿ ಸೋಲಿನ ಭೀತಿ ಎದುರಿಸುವುದನ್ನು ತಪ್ಪಿಸಿಕೊಳ್ಳಲು ಯತ್ನಿಸುವ ನಿಲುವು ಬಹುಶಃ ಇಂತಹ ಅಕ್ರಮಗಳನ್ನು ತಡೆಯಲು ಯತ್ನಿಸುವುದರಿಂದ ಹಿಂದಕ್ಕೆ ಸರಿಯಲು ಕಾರಣವಿರಬಹುದು ಎಂದು ಗಡ್ಕರಿ ವಿಶ್ಲೇಷಿಸಿದ್ದಾರೆ.
ನಾವು ಚುನಾವಣೆಗಳಲ್ಲಿ ಸೋಲುತ್ತೇವೋ, ಗೆಲ್ಲುತ್ತೇವೋ, ನಮಗೆ ಅದು ಪ್ರಶ್ನೆಯೇ ಅಲ್ಲ. ಆದರೆ ಬಾಂಗ್ಲಾದೇಶೀಯರು ಅಕ್ರಮವಾಗಿ ಪ್ರವೇಶಿಸಲು ನಾವು ಅವಕಾಶ ಮಾಡಿಕೊಡಲಾರೆವು. ರಾಷ್ಟ್ರದ ಆಂತರಿಕ ಭದ್ರತೆಯೇ ನಮ್ಮ ಪ್ರಮುಖ ಆದ್ಯತೆ ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಅದೇ ನಮ್ಮ ಕಳವಳವೂ ಆಗಿದೆ ಎಂದರು.