ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೈಂಗಿಕ ಕಿರುಕುಳ ಸರದಿಯೀಗ ಭಾರತೀಯ ಕ್ರೈಸ್ತ ಪಾದ್ರಿಯದ್ದು (Catholic priest | sexual Abuse | Rev. Joseph Palanivel Jeyapaul | Most Rev. A. Almaraj)
Bookmark and Share Feedback Print
 
ಪರಮಹಂಸ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಸಂಗ ಭಾರೀ ಸುದ್ದಿಯಾದ ಬೆನ್ನಿಗೆ ಇದೀಗ ಭಾರತೀಯ ಮೂಲದ ಕ್ರೈಸ್ತ ಪಾದ್ರಿಯೊಬ್ಬ ಇಂತಹುದೇ ಅನಾಚಾರದಲ್ಲಿ ಪಾಲ್ಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಸಕ್ತ ಭಾರತದಲ್ಲಿ ಕೆಲಸ ಮಾಡುತ್ತಿರುವ ಈತ ಕೆಲವು ವರ್ಷಗಳ ಹಿಂದೆ ಅಮೆರಿಕಾದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದ. ಇದೀಗ ಆತನನ್ನು ಗಡೀಪಾರು ಮಾಡುವಂತೆ ವ್ಯಾಟಿಕನ್ ಆಗ್ರಹಿಸುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

ಅಮೆರಿಕಾದ ಮಿನೆಸೋಟಾ ರಾಜ್ಯದಲ್ಲಿ 14ರ ಹರೆಯದ ಹುಡುಗಿಯೊಬ್ಬಳಿಗೆ ಈ ಕ್ಯಾಥೊಲಿಕ್ ಪಾದ್ರಿ ಲೈಂಗಿಕ ಕಿರುಕುಳ ನೀಡಿದ್ದ. ಪ್ರಸಕ್ತ ಈತಭಾರತದ ಬಿಷಪ್ ಆಡಳಿತ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಪ್ರಸಕ್ತ ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ರೆವೆರೆಂಡ್ ಜೋಸೆಫ್ ಪಾಲಾನಿವಲ್ ಜೆಯಪೌಲ್ ಎಂಬಾತನೇ ಈ ಆರೋಪಿ. ಈತನ ವಿರುದ್ಧ ಆರೋಪಗಳಿರುವುದನ್ನು ವ್ಯಾಟಿಕನ್ ಕಳೆದ ಮೂರು ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿರುವುದು ಚರ್ಚ್ ದಾಖಲೆಗಳಲ್ಲಿ ನಮೂದಾಗಿದೆ. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ. ಅಲ್ಲದೆ ಆರೋಪಿಯನ್ನು ಅಮೆರಿಕಾಕ್ಕೆ ವಿಚಾರಣೆಗೆಂದು ಕಳುಹಿಸುವ ಯಾವುದೇ ಚಿಂತನೆ ನಡೆದಿಲ್ಲ ಎಂದು ಆತನ ಬಿಷಪ್ ತಿಳಿಸಿದ್ದಾರೆ.

ತಮಿಳುನಾಡಿನ ಊಟಿಯ ಬಿಷಪ್‌ರವರ ಕಚೇರಿಯಲ್ಲಿ, ಅವರ ವ್ಯಾಪ್ತಿಗೆ ಬರುವ ಡಜನ್‌ಗಳಷ್ಟು ಚರ್ಚ್ ಶಾಲೆಗಳಿಗೆ ಶಿಕ್ಷಕರನ್ನು ನೇಮಕಗೊಳಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಈತ ತನ್ನ ತಪ್ಪಿಗಾಗಿ ತೀರಾ ಕಡಿಮೆ ಶಿಕ್ಷೆಯನ್ನಷ್ಟೇ ಅಮೆರಿಕಾದಲ್ಲಿ ಅನುಭವಿಸಿದ್ದ.

ಬಿಷಪ್‌ ಪ್ರಕಾರ ಪಾದ್ರಿ ನಿರಪರಾಧಿ..
ಆರೋಪಿತ ಪಾದ್ರಿಯನ್ನು ನಾವು ಸುಮ್ಮನೆ ಹೊರದಬ್ಬಲು ಸಾಧ್ಯವಿಲ್ಲ. ಹಾಗಾಗಿ ಆತ ಬಿಷಪ್ ಕಚೇರಿಯಲ್ಲಿ ಉಳಿದುಕೊಂಡಿದ್ದು, ಶಿಕ್ಷಕರ ನೇಮಕಾತಿ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದಾನೆ. ಆತನ ಪ್ರಕಾರ ಅವನು ನಿರಪರಾಧಿ ಮತ್ತು ಆತನ ವಿರುದ್ಧ ಮಾಡಲಾಗಿರುವುದು ಕೇವಲ ಆರೋಪ ಮಾತ್ರ ಎಂದು ಊಟಿ ಬಿಷಪ್ ಮೋಸ್ಟ್ ರೆವೆಡೆಂಡ್ ಎ. ಅಲ್ಮಾರಾಜ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಜೆಯಪೌಲ್ ಕಾರ್ಯವನ್ನು ಸ್ಪಷ್ಟಪಡಿಸಿರುವ ಬಿಷಪ್, ಆತ ಕೇವಲ ದಾಖಲಾತಿಗಳ ಕೆಲಸಗಳಷ್ಟೇ ಇಲ್ಲಿ ನಿರ್ವಹಿಸುತ್ತಿದ್ದಾನೆ; ಮಕ್ಕಳು ಅಥವಾ ಇತರ ವಿಚಾರಗಳಲ್ಲಿ ಆತ ತೊಡಗಿಸಿಕೊಂಡಿಲ್ಲ ಎಂದಿದ್ದಾರೆ.

ಜೆಯಪೌಲ್ ವಿರುದ್ಧ ನೀಡಿರುವ ಕ್ರಿಮಿನಲ್ ದೂರಿನ ಪ್ರಕಾರ, 2004ರ ಅಂತ್ಯದಲ್ಲಿ ಆತ 14ರ ಹರೆಯದ ಹುಡುಗಿಯೊಬ್ಬಳನ್ನು ತನ್ನ ಕೊಠಡಿಗೆ ಬರುವಂತೆ ಒತ್ತಾಯಿಸಿದ್ದ; ಅಲ್ಲದೆ ಹಾಗೆ ಮಾಡದಿದ್ದರೆ ಹುಡುಗಿಯ ಕುಟುಂಬವನ್ನು ಹತ್ಯೆಗೈಯುವುದಾಗಿ ಬೆದರಿಕೆ ಹಾಕಿದ್ದ. ಈ ಸಂದರ್ಭದಲ್ಲಿ ಅಸಹ್ಯ ರೀತಿಯಲ್ಲಿ ಲೈಂಗಿಕ ಚಟುವಟಿಕೆ ನಡೆಸುವಂತೆ ಆತ ಹುಡುಗಿಯನ್ನು ಬಲವಂತಪಡಿಸಿದ್ದ ಎಂದು ಆರೋಪಿಸಲಾಗಿತ್ತು.

ಆದರೆ ಇದನ್ನು ಜೆಯಪೌಲ್ ತಳ್ಳಿ ಹಾಕಿದ್ದಾನೆ. ಇದು ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪವಾಗಿದ್ದು, ಆ ಹುಡುಗಿ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.

ಪ್ರಾರ್ಥನೆಗೆ ಕಳುಹಿಸಿದ್ದರಂತೆ..
ಹೀಗೆಂದು ಹೇಳಿರುವುದು ಊಟಿ ಬಿಷಪ್. ಆರೋಪಿತ ನಮ್ಮಲ್ಲಿಗೆ ಬಂದ ನಂತರ ಆತನ ಚಾರಿತ್ರ್ಯವನ್ನು ಪರಿಶೀಲನೆ ನಡೆಸಲು ನಾವು ಆತನನ್ನು ಒಂದು ವರ್ಷದ ಕಾಲ ಪ್ರಾರ್ಥನಾ ಕೇಂದ್ರಕ್ಕೆ (ಮತಪ್ರಚಾರಕರು ವಾಸಿಸುವ ವಿರಕ್ತಗೃಹ) ಕಳುಹಿಸಿದ್ದೆವು.

ಆರೋಪಿತ ಪಾದ್ರಿ ಈ ಹಿಂದೆ ಕೆಲಸ ಮಾಡಿರುವ ಕಡೆಗಳಲ್ಲಿ ಕೂಡ ಆತನ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಎಲ್ಲೂ ಅಂತಹ ಲೈಂಗಿಕ ಕಿರುಕುರಳ ಪ್ರಕರಣಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ನಂತರವಷ್ಟೇ ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಷಪ್ ತಿಳಿಸಿದ್ದಾರೆ.

ಗಡೀಪಾರು ಸಾಧ್ಯತೆ..
ಅಮೆರಿಕಾದಲ್ಲಿ ಲೈಂಗಿಕ ಕಿರುಕುಳ ನೀಡಿದ ನಂತರ ಭಾರತಕ್ಕೆ ಪರಾರಿಯಾಗಿದ್ದ ಪಾದ್ರಿಯನ್ನು ಗಡೀಪಾರು ಮಾಡುವಂತೆ ಅಮೆರಿಕಾ ಆಗ್ರಹಿಸುವ ಸಾಧ್ಯತೆಗಳಿವೆ. ಎರಡೂ ದೇಶಗಳ ನಡುವೆ ಗಡೀಪಾರು ಒಪ್ಪಂದ ಜಾರಿಯಲ್ಲಿರುವುದರಿಂದ ಈ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜೆಯಪೌಲ್ ಗಡೀಪಾರಿಗೆ ಸಂಬಂಧಪಟ್ಟಂತೆ ಅಮೆರಿಕಾ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜತೆ ವ್ಯಾಟಿಕನ್ ಸಂಪರ್ಕದಲ್ಲಿದ್ದು, ಪಾದ್ರಿಯ ಭಾರತದಲ್ಲಿನ ವಿಳಾಸವನ್ನೂ ಪತ್ತೆ ಹಚ್ಚಿದೆ.

ಆರೋಪಿತ ಪಾದ್ರಿಯನ್ನು ಕೆಲಸದಿಂದ ತೆಗೆದು ಹಾಕುವಂತೆ ಭಾರತದಲ್ಲಿನ ಚರ್ಚ್ ಮೂಲಗಳಿಗೆ ವ್ಯಾಟಿಕನ್ ಶಿಫಾರಸು ಮಾಡಿತ್ತು. ಆತನ ಮೇಲಿರುವ ಆರೋಪಗಳು ಗಂಭೀರವಾಗಿರುವುದರಿಂದ ಈ ಕ್ರಮಕ್ಕೆ ಅದು ಸೂಚನೆ ನೀಡಿತ್ತು. ಆದರೆ ಭಾರತದಲ್ಲಿನ ಬಿಷಪ್ ಇದನ್ನು ತಳ್ಳಿ ಹಾಕಿದ್ದರು.

ಅಮೆರಿಕಾದಿಂದ ಗಡೀಪಾರು ಮನವಿಯೇನಾದರೂ ಬಂದಿದೆಯೇ ಎಂಬ ಪ್ರಶ್ನೆಗಳಿಗೆ ಭಾರತದ ವಿದೇಶಾಂಗ ಸಚಿವಾಯದ ಮೂಲಗಳು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ