ಐದಾರು ವರ್ಷಗಳ ಹಿಂದಿನ ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಾನಿಯಾ ಮಿರ್ಜಾ ಭಾವೀ ಪತಿ ಶೋಯಿಬ್ ಮಲಿಕ್ ಪರಿಸ್ಥಿತಿಯೀಗ ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ.
ಎರಡೂ ದೇಶಗಳಲ್ಲಿ ಶೋಯಿಬ್ ವಿರುದ್ಧ ಆಯೇಶಾ ಸಿದ್ಧಿಕಿ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಇದೇ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಶೋಯಿಬ್, ಪಾಕಿಸ್ತಾನಕ್ಕೆ ಪಾಸ್‌ಪೋರ್ಟ್ ಪಡೆಯದ ಹೊರತಾಗಿ ಪ್ರಯಾಣಿಸುವಂತಿಲ್ಲ. ಭಾರತ ಒಪ್ಪಿಗೆ ನೀಡಿ ತವರಿಗೆ ಮರಳಿದರೂ, ಅಲ್ಲಿ ಅವರಿಗೆ ಸ್ವಾಗತ ನೀಡುವು ಆಯೇಶಾ ಪ್ರಕರಣಗಳು.
ಮದುವೆ ನಿಲ್ಲಿಸುವುದೇ ಗುರಿ... ಹೀಗೆಂದು ಹೇಳಿರುವುದು ಆಯೇಶಾ ಸಿದ್ಧಿಕಿ ಪರವಾಗಿ ಪಾಕಿಸ್ತಾನದಲ್ಲಿ ಪ್ರಕರಣ ದಾಖಲಿಸಲು ಸಿದ್ದತೆ ನಡೆಸುತ್ತಿರುವ ವಕೀಲ ಫಾರೂಕ್ ಹಸನ್. ಏಪ್ರಿಲ್ 15ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಮದುವೆಯನ್ನು ನಿಲ್ಲಿಸುವುದೇ ನಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ.
ಸೆಷನ್ಸ್ ನ್ಯಾಯಾಲಯ ಅಥವಾ ಲಾಹೋರ್ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಲು ಸಂಬಂಧಪಟ್ಟ ದಾಖಲೆಗಳು ಭಾರತದಿಂದ ಬರಬೇಕೆಂದು ನಾನು ಕಾಯುತ್ತಿದ್ದೇನೆ. ಬರುತ್ತಿದ್ದಂತೆ ಶೋಯಿಬ್ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ನಮ್ಮಲ್ಲಿ ಸಾಕಷ್ಟು ಪೂರಕ ದಾಖಲೆಗಳಿವೆ. ಒಂದೆರಡು ದಿನದಲ್ಲಿ ಇದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನಿನ್ನೆಯಷ್ಟೇ ಆಯೇಶಾ ಜತೆ ಮಾತನಾಡಿದ್ದೇನೆ. ಆಕೆ ತೀವ್ರವಾಗಿ ನೊಂದಿದ್ದು, ಆಘಾತಕ್ಕೊಳಗಾಗಿದ್ದಾಳೆ. ಆಕೆಗೆ ನ್ಯಾಯ ಒದಗಿಸಬೇಕಾದ ಅಗತ್ಯವಿದೆ. ಕ್ರಿಕೆಟ್ ಆಟಗಾರರು ಕೂಡ ಕಾನೂನಿಗೆ ಹೊರತಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಇಂತಹ ಪ್ರಕರಣಗಳಿಂದಾಗಿ ದೇಶದ ಹೆಸರು ಹಾಳಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಗತ್ಯ ಬಿದ್ದರೆ ಬಂಧಿಸುತ್ತೇವೆ.. ಆಯೇಶಾ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ತನಿಖೆ ನಡೆಸುತ್ತಿದ್ದೇವೆ. ಅಗತ್ಯ ಬಿದ್ದರೆ ಶೋಯಿಬ್ ಅವರನ್ನು ಬಂಧಿಸುತ್ತೇವೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಎ.ಕೆ. ಖಾನ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸುವುದು ಅಗತ್ಯ ಎಂದು ಕಂಡು ಬಂದರೆ ಹಾಗೆ ಮಾಡುತ್ತೇವೆ. ಸಂಬಂಧ ಪಟ್ಟ ಸಾಕ್ಷ್ಯಗಳನ್ನು ಗಮನಿಸಿದ ನಂತರವಷ್ಟೇ ಇದರ ಬಗ್ಗೆ ಅಂತಿಮ ತೀರ್ಮಾನವನ್ನು ಹೇಳಬಹುದಾಗಿದೆ ಎಂದರು.
ಶೋಯಿಬ್ ಅವರ ಪಾಸ್‌ಪೋರ್ಟನ್ನು ನಾವು ಪಡೆದುಕೊಂಡಿದ್ದೇವೆ. ಆಯೇಶಾ ಹೇಳಿರುವಂತೆ ಶೋಯಿಬ್ ಹೈದರಾಬಾದ್‌ಗೆ ಯಾವ ಸಂದರ್ಭಗಳಲ್ಲೆಲ್ಲ ಭೇಟಿ ನೀಡಿದ್ದಾರೆ ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ. ನಾವು ಪಾಸ್‌ಪೋರ್ಟನ್ನು ವಶಕ್ಕೆ ಅಥವಾ ಜಪ್ತಿ ಮಾಡಿರುವುದಲ್ಲ ಎಂದು ಖಾನ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದಿಂದ ಕಾನೂನು ನೆರವು.. ಭಾರತದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಶೋಯಿಬ್ ಮಲಿಕ್ ಅವರಿಗೆ ಪಾಕಿಸ್ತಾನ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ.
ಅವರಿಗೆ ಅಗತ್ಯವಿರುವ ಎಲ್ಲಾ ಸಹಕಾರಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ಈ ಸಂಬಂಧ ಈಗಾಗಲೇ ದೆಹಲಿಯಲ್ಲಿರುವ ನಮ್ಮ ರಾಯಭಾರ ಕಚೇರಿಯು ಭಾರತ ಸರಕಾರದ ಜತೆ ಸಂಪರ್ಕದಲ್ಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ನಾವೀಗ ಭಾರತ ಸರಕಾರದ ವರದಿಗಾಗಿ ಕಾಯುತ್ತಿದ್ದೇವೆ. ಇಲ್ಲಿ ನಾವು ಮಾಧ್ಯಮ ವರದಿಗಳನ್ನೇ ಅಧಿಕೃತವಾಗಿ ಪರಿಗಣಿಸುವುದಿಲ್ಲ. ಗಂಭೀರ ಪ್ರಕರಣವಾಗಿರುವ ಕಾರಣ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಭಾರತದಲ್ಲಿ ಕೇಳಿಕೊಂಡಿದ್ದೇವೆ ಎಂದರು.
ಶೋಯಿಬ್‌ಗೆ ರಷೀದ್ ಬೆಂಬಲ.. ಶೋಯಿಬ್ ಇಂಟರ್ನೆಟ್ ಮತ್ತು ದೂರವಾಣಿ ಮೂಲಕ ಪ್ರೀತಿ ಮಾಡುತ್ತಿದ್ದ ಹುಡುಗಿ ಇದೀಗ ಟಿವಿಯಲ್ಲಿ ಬರುತ್ತಿರುವ ಆಯೇಶಾ ಸಿದ್ಧಿಕಿಯಲ್ಲ. ಅದು ಬೇರೆ, ಇದು ಬೇರೆ ಎಂದು ಸಹ ಆಟಗಾರನಾಗಿದ್ದ ಪಾಕಿಸ್ತಾನದ ಮಾಜಿ ಕಪ್ತಾನ ರಷೀದ್ ಲತೀಫ್ ಹೇಳಿದ್ದಾರೆ.
ಶೋಯಿಬ್ ಇಂಟರ್ನೆಟ್ ಮೂಲಕ ಚಾಟಿಂಗ್ ಮಾಡುತ್ತಿದ್ದ ಹುಡುಗಿಯ ಭಾವಚಿತ್ರಗಳನ್ನು ನಾನು ನೋಡಿದ್ದೇನೆ. ಆ ಹುಡುಗಿ ಆಯೇಶಾ ಅಲ್ಲ ಎಂದು ಅವರು ತಿಳಿಸಿದ್ದಾರೆ.
ಆ ಹುಡುಗಿಯ ಜತೆ ಚಾಟಿಂಗ್ ಮಾಡಲು ಶೋಯಿಬ್ ನನ್ನ ಲ್ಯಾಪ್‌ಟಾಪ್ ಬಳಸುತ್ತಿದ್ದರು. ಆಕೆಯ ಕೆಲವು ಚಿತ್ರಗಳನ್ನು ಕೂಡ ಶೋಯಿಬ್ ನನಗೆ ತೋರಿಸಿದ್ದರು. ಅವರು ತೋರಿಸಿದ ಚಿತ್ರದಲ್ಲಿದ್ದ ಹುಡುಗಿ ಇದೀಗ ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆಯೇಶಾ ಅಲ್ಲ ಎಂಬುದು ಖಚಿತ ಸಂಗತಿ ಎಂದು ಅವರು ಪ್ರಕರಣದಲ್ಲಿ ಶೋಯಿಬ್‌ಗೆ ಬೆಂಬಲ ಸೂಚಿಸಿದ್ದಾರೆ.