ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅವಧಿಗಿಂತ ಮುಂಚೆ ಬಿಡುಗಡೆ; ನಳಿನಿ ಮನವಿ ತಿರಸ್ಕೃತ
(premature release | Madras High Court | Rajiv Gandhi | Nalini Sriharan)
ಕ್ಷಮಾದಾನ ಯೋಜನೆಯಡಿಯಲ್ಲಿ ಅವಧಿಗಿಂತ ಮುಂಚೆ ತನ್ನನ್ನು ಬಿಡುಗಡೆ ಮಾಡಬೇಕೆಂದು ಕೋರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮಾಡಿಕೊಂಡಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ತಳ್ಳಿ ಹಾಕಿದೆ.
44ರ ಹರೆಯದ ನಳಿನಿಯ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಲಿಪ್ ಧರ್ಮ ರಾಜ್ ಮತ್ತು ಕೆ.ಕೆ. ಶಶಿಧರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, 1991ರ ಮೇ 21ರಂದು ಶ್ರೀಪೆರುಂಬುದೂರ್‌ನಲ್ಲಿ ಮಾಜಿ ಪ್ರಧಾನಿಯವರನ್ನು ಹತ್ಯೆಗೈದಿರುವ ಸಂಚಿನಲ್ಲಿ ಭಾಗಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿತು.
ಕೆಲವೇ ದಿನಗಳ ಹಿಂದಷ್ಟೇ ತಮಿಳುನಾಡು ಸರಕಾರವು ನಳಿನಿ ಬಿಡುಗಡೆಗೆ ನಕಾರ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ಕಾರಾಗೃಹ ಸಲಹಾ ಸಮಿತಿಯನ್ನು ರಚಿಸಿದ್ದ ಸರಕಾರವು, ಅದರ ಶಿಫಾರಸಿನಂತೆ ಪ್ರಧಾನಿ ಹಂತಕಿಯನ್ನು ಅವಧಿಗಿಂತ ಮುನ್ನ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಇದೀಗ ನ್ಯಾಯಾಲಯ ಮತ್ತೊಂದು ಅರ್ಜಿಯ ವಿಚಾರಣೆಯಲ್ಲಿ ನಳಿನಿಯ ಬೇಡಿಕೆಯನ್ನು ತಳ್ಳಿ ಹಾಕಿದೆ.
ರಾಜೀವ್ ಗಾಂಧಿಯವರನ್ನು ಹತ್ಯೆಗೈದದ್ದು, ಅದರ ಹಿಂದಿನ ಘೋರ ಸಂಚುಗಳಲ್ಲಿ ಭಾಗಿಯಾಗಿರುವಂತಹ ಗಂಭೀರ ಪ್ರಮಾದಗಳನ್ನು ಆಕೆ ಎಸಗಿದ್ದಾಳೆ. ಹಾಗಾಗಿ ಅಕೆಯನ್ನು ಅವಧಿಗಿಂತ ಮುಂಚೆ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಸಿಆರ್‌ಪಿಸಿ 435ರ ಅಡಿಯಲ್ಲಿ ಸಿಬಿಐ ತನಿಖೆ ನಡೆಸುವ ಎಲ್ಲಾ ಪ್ರಕರಣಗಳಲ್ಲಿ ಕೇಂದ್ರದ ಸಲಹೆಯಿಲ್ಲದೆ ರಾಜ್ಯ ಸರಕಾರ ನಿರ್ಧಾರಕ್ಕೆ ಬರುವಂತಿಲ್ಲ. ನನ್ನ ಪ್ರಕರಣವನ್ನು ಕೂಡ ಕೇಂದ್ರೀಯ ತನಿಖಾ ದಳವು ತನಿಖೆ ನಡೆಸಿರುವುದರಿಂದ ಅವಧಿಗೆ ಮುಂಚೆ ಬಿಡುಗಡೆ ಮಾಡಬೇಕೆಂಬ ತನ್ನ ಅರ್ಜಿಯನ್ನು ಪರಿಶೀಲಿಸಬೇಕು ಎಂದು ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2008ರಲ್ಲಿ ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿದ್ದ ನಳಿನಿ, ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಈ ಅಧಿಕಾರ ಹೊಂದಿದ್ದಾರೆ ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ಇಂದು ತಳ್ಳಿ ಹಾಕಿದೆ.
161ನೇ ವಿಧಿಯಂತೆ ಅಧಿಕಾರ ಚಲಾಯಿಸಿದ್ದ ರಾಜ್ಯಪಾಲರು 421 ಕೈದಿಗಳನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡಿದ್ದಾರೆ. ಹಾಗಾಗಿ 14 ವರ್ಷಗಳನ್ನು ಜೈಲಿನಲ್ಲಿ ಕಳೆದಿರುವ ತಾನು ಬಿಡುಗಡೆಗೆ ಅರ್ಹಳಾಗಿದ್ದೇನೆ ಎಂದು ನಳಿನಿ 2006ರಲ್ಲಿ ನಳಿನಿ ಮನವಿ ಮಾಡಿಕೊಂಡಿದ್ದರು.
ತನ್ನ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದೆ ಎಂಬ ಏಕಮಾತ್ರ ಕಾರಣಕ್ಕೆ ಅವಧಿಗಿಂತ ಮುಂಚೆ ಬಿಡುಗಡೆಗೆ ನಿರಾಕರಿಸಲಾಗುತ್ತಿದೆ ಎಂದು ನಳಿನಿ ವಾದಿಸಿದ್ದಳು.
ಅವಧಿಗಿಂತ ಮುಂಚೆ ಬಿಡುಗಡೆ ಮಾಡವಲ್ಲಿ ಎಸಗಿರುವ ಅಪರಾಧದ ರೀತಿಯನ್ನೂ ಪರಿಗಣಿಸಲಾಗುತ್ತದೆ. ಹಾಗಾಗಿ ಆಕೆ ಇತರ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಂತೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.