ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಪ್ರೀಂ ರಜೆ ಸಲಹೆಗೆ ಜಪ್ಪೆನ್ನದ ನ್ಯಾಯಮೂರ್ತಿ ದಿನಕರನ್
(Karnataka High Court | P D Dinakaran | Supreme Court | K G Balakrishnan)
ರಾಜ್ಯದಲ್ಲಿನ ಪ್ರಕರಣಗಳು ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ರಜೆಯ ಮೇಲೆ ತೆರಳುವಂತೆ ಸುಪ್ರೀಂ ಕೋರ್ಟ್ ಸಮಿತಿ ನೀಡಿದ್ದ ಸಲಹೆಯನ್ನು ಗಂಭೀರವಾಗಿ ಪರಿಗಣಿಸದ ಕರ್ನಾಟಕ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಎಂದಿನಂತೆ ಮುಂದುವರಿದಿದ್ದಾರೆ ಎಂದು ವರದಿಗಳು ಹೇಳಿವೆ.
ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ದಿನಕರನ್ ಅವರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ನ್ಯಾಯಾಂಗ ಕಲಾಪದಿಂದ ದೂರ ಉಳಿದಿದ್ದ ದಿನಕರನ್ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದರು. ಇದರಿಂದಾಗಿ ರಾಜ್ಯದ ಪ್ರಕರಣಗಳು ಬಾಕಿ ಉಳಿಯುತ್ತಿವೆ ಎಂದು ದೂರುಗಳು ಬಂದಿದ್ದವು.
ಇದನ್ನು ಗಮನಕ್ಕೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಸಮಿತಿಯು, ದಿನಕರನ್ ಅವರನ್ನು ರಜೆಯ ಮೇಲೆ ತೆರಳುವಂತೆ ಸಲಹೆ ನೀಡಿತ್ತು. ಅಲ್ಲದೆ ಅವರ ಸ್ಥಾನಕ್ಕೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ದೆಹಲಿಯ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರನ್ನು ನೇಮಕಗೊಳಿಸಿತ್ತು ಎಂದು ವರದಿಗಳು ತಿಳಿಸಿದ್ದವು.
ಆದರೆ ನ್ಯಾಯಮೂರ್ತಿ ದಿನಕರನ್ ಅವರು ಎಂದಿನಂತೆ ತನ್ನ ಆಡಳಿತಾತ್ಮಕ ಕೆಲಸವನ್ನು ಇಂದೂ ಮುಂದುವರಿಸಿದ್ದಾರೆ. ಆ ಮೂಲಕ ತಾನು ರಜೆಯಲ್ಲಿ ತೆರಳುವ ಯಾವುದೇ ಇಚ್ಛೆ ಹೊಂದಿಲ್ಲ ಎನ್ನುವ ಸಂದೇಶವನ್ನು ಅವರು ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹಿರಿಯ ವಕೀಲ ಶಾಂತಿ ಭೂಷಣ್ ಅವರ ಪ್ರಕಾರ ಸುಪ್ರೀಂ ಕೋರ್ಟ್ ಸಮಿತಿ ನೀಡಿರುವ ಸಲಹೆಯನ್ನು ನ್ಯಾಯಮೂರ್ತಿ ದಿನಕರನ್ ಸ್ವೀಕರಿಸಬೇಕಾದ ಅನಿವಾರ್ಯತೆಯಿಲ್ಲ. ಹಾಗೊಂದು ವೇಳೆ ಸ್ವೀಕರಿಸದೇ ರಜೆಯ ಮೇಲೆ ತೆರಳದೇ ಇದ್ದಲ್ಲಿ ಹಂಗಾಮಿ ನ್ಯಾಯಮೂರ್ತಿಯಾಗಿ ಲೋಕೂರ್ ನೇಮಕ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಅದೇ ಹೊತ್ತಿಗೆ ದಿನಕರನ್ ಅವರು ತನ್ನ ನಿರ್ಧಾರವನ್ನು ತೆಗೆದುಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಅವರ ನಿರ್ಧಾರವನ್ನು ಬೆಂಬಲಿಸಿ, ರಜೆಯ ಮೇಲೆ ತೆರಳದಂತೆ ಒತ್ತಾಯಿಸಲು ಹಲವು ನ್ಯಾಯವಾದಿಗಳು ಭೇಟಿ ಕೂಡ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.