ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಣವಿಲ್ಲವೆಂದ ಮಾಯಾಗೆ ಕಾಂಗ್ರೆಸ್‌ನಿಂದ 'ಮೂರ್ತಿದೇವಿ' ಬಿರುದು
(Congress | Mayawati | Murtidevi | Right to Education Act)
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯದಲ್ಲಿ ಹಣವಿಲ್ಲ, ಕೇಂದ್ರ ಸರಕಾರವೇ ಪೂರ್ತಿ ಹಣವನ್ನು ಭರಿಸಬೇಕು ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಕಟು ಟೀಕೆ ಮಾಡಿರುವ ಕಾಂಗ್ರೆಸ್ ಅವರಿಗೆ 'ಮೂರ್ತಿದೇವಿ' ಬಿರುದು ನೀಡಿದೆ.
ರಾಜ್ಯದಾದ್ಯಂತ ತನ್ನ ಮತ್ತು ಪಕ್ಷಕ್ಕೆ ಸಂಬಂಧಪಟ್ಟವರ ಮೂರ್ತಿಗಳನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಲು ಸಿದ್ಧರಿರುವ ಮುಖ್ಯಮಂತ್ರಿಯೊಬ್ಬರು ಮಗುವಿಗೆ ಶಿಕ್ಷಣ ನೀಡುವ ವಿಚಾರಕ್ಕೆ ಬಂದಾಗ ಹಿಂದಕ್ಕೆ ಸರಿಯುತ್ತಾರೆಂದರೆ ಇದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಮಾಯಾವತಿಯವರನ್ನು ತನ್ನ ಮಾತಿನುದ್ದಕ್ಕೂ 'ಮೂರ್ತಿದೇವಿ' (ಮೂರ್ತಿಗಳ ದೇವತೆ) ಎಂದೇ ಕರೆದ ಸಿಂಘ್ವಿ, 'ಸಿಎಂ ಮೂರ್ತಿದೇವಿ ಮಾಯಾವತಿಯವರು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರುವ ರಾಜ್ಯ ಸರಕಾರದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಇದು ಅವರಿಂದ ಬಂದಿರುವ ಅಪಮಾನಕಾರಿ ಸ್ಪಂದನೆ' ಎಂದರು.
ಮಾಯಾವತಿಯವರು ತನ್ನದೇ ಮೂರ್ತಿಗಳಿಗಾಗಿ 4,500 ಕೋಟಿ ರೂಪಾಯಿಗಳನ್ನು ಅಂದರೆ ಉತ್ತರ ಪ್ರದೇಶದ ವಾರ್ಷಿಕ ಬಜೆಟ್‌ನ ಶೇ.3ರಷ್ಟನ್ನು ಮೀಸಲಿಡುತ್ತಾರೆ. ಆ ಪುತ್ಥಳಿಗಳಿಗೆ ರಕ್ಷಣೆ ಒದಗಿಸಲು ಹೆಚ್ಚುವರಿ 67 ಕೋಟಿ ರೂಪಾಯಿಗಳನ್ನು ಅವರು ಖರ್ಚು ಮಾಡುತ್ತಾರೆ. ಆದರೆ ಶಿಕ್ಷಣಕ್ಕಾಗಿ ಖರ್ಚು ಮಾಡಲು ಅವರಲ್ಲಿ ಹಣವಿಲ್ಲ ಎಂದು ಸಿಂಘ್ವಿ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.
ಕಡ್ಡಾಯ ಶಿಕ್ಷಣ ಯೋಜನೆ ಜಾರಿಗಾಗಿ ಉತ್ತರ ಪ್ರದೇಶಕ್ಕೆ 18,000 ಕೋಟಿ ರೂಪಾಯಿಗಳ ಅಗತ್ಯವಿದೆ. ಅದರಲ್ಲಿ ಶೇ.55 ಅಥವಾ ಸುಮಾರು 10,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ನೀಡುತ್ತದೆ. ಉಳಿದ ಮೊತ್ತವನ್ನಷ್ಟೇ ರಾಜ್ಯ ಸರಕಾರ ಭರಿಸಬೇಕಾಗುತ್ತದೆ.
ಉತ್ತರ ಪ್ರದೇಶದ ಸಾಕ್ಷರತಾ ಪ್ರಮಾಣವನ್ನು ವಿಶ್ಲೇಷಣೆ ನಡೆಸಿದ ಸಿಂಘ್ವಿ, ದೇಶದಲ್ಲೇ ಈ ರಾಜ್ಯವು ಸಾಕ್ಷರತಾ ಪ್ರಮಾಣದಲ್ಲಿ ಹಿಂದಿದೆ; ಆದರೆ ಮಗುವೊಂದಕ್ಕೆ ಶಿಕ್ಷಣ ನೀಡಲು, ಶೇ.100ರಷ್ಟು ಸಾಕ್ಷರತೆಯನ್ನು ಖಚಿತಪಡಿಸಲು ಸಿಕ್ಕಿರುವ ನೂತನ ಅವಕಾಶಕ್ಕೆ ಅವರು ನಕಾರ ಸೂಚಿಸುತ್ತಿದ್ದಾರೆ. ಮಾಯಾವತಿ ಯೋಚನೆ ಅಭಿವೃದ್ಧಿ ವಿರೋಧಿಯಾಗಿದ್ದು, ಋಣಾತ್ಮಕ ಮನೋಭಾವವನ್ನು ತೋರಿಸುತ್ತಿದ್ದಾರೆ ಎಂದರು.