ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹತ್ಯಾಕಾಂಡದ ಬಳಿಕವೂ ನಕ್ಸಲರ ವಿರುದ್ಧ ಸೇನೆ ಬಳಸಲ್ವಂತೆ! (Army | P Chidambaram | Naxal | CRPF)
Bookmark and Share Feedback Print
 
ಕೆಂಪು ಪಾಳಯದ ಮಾರಣಹೋಮದಲ್ಲಿ 76 ಭದ್ರತಾ ಸಿಬ್ಬಂದಿಗಳ ಅಮೂಲ್ಯ ಪ್ರಾಣಗಳನ್ನು ಕಳೆದುಕೊಂಡ ಬಳಿಕವೂ ಕೇಂದ್ರ ಸರಕಾರ ಮಿಲಿಟರಿಯನ್ನು ಮಾವೋವಾದಿಗಳ ದಮನಕ್ಕೆ ಬಳಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ.

ನಿನ್ನೆ ದುರ್ಘಟನೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದ ನಂತರ ಮಾತನಾಡುತ್ತಿದ್ದ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ನಕ್ಸಲ್ ನಿಗ್ರಹಕ್ಕೆ ಜಿಲ್ಲಾ ಪೊಲೀಸ್ ಮತ್ತು ಅರೆ ಸೇನಾಪಡೆಗಳನ್ನು ಮಾತ್ರ ಬಳಸಲಾಗುತ್ತದೆ; ಸೇನೆಯನ್ನು ಬಳಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಕ್ಸಲರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ ಎಂದಿರುವ ಸಚಿವರು, ವಾಯುಪಡೆಯನ್ನು ಬಳಸುವ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದರು.

ಛತ್ತೀಸ್‌ಗಢದ ದಂತೇವಾಡದಲ್ಲಿ ನಕ್ಸಲರ ಗುಂಡಿಗೆ ಬಲಿಯಾದ 75 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌‌ಗಳ ಆತ್ಮಗಳಿಗೆ ಶಾಂತಿ ಕೋರಿದ ನಂತರ ಮಾತನಾಡಿದ ಅವರು, 'ಮಾವೋವಾದಿಗಳ ವಿರುದ್ಧ ಸೇನೆಯನ್ನು ಬಳಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ನಕ್ಸಲರನ್ನು ಮಟ್ಟ ಹಾಕಲು ಕೇಂದ್ರೀಯ ಅರೆಸೇನಾ ಪಡೆಗಳೊಂದಿಗೆ ರಾಜ್ಯದ ಪೊಲೀಸರೇ ಸಾಕು ಎಂದೆನಿಸುತ್ತದೆ. ಇದು ಕೇಂದ್ರದ ಈಗಿನ ನಿಲುವು' ಎಂದರು.

ಪ್ರಸಕ್ತ ವಾಯು ಪಡೆ ಅಥವಾ ವೈಮಾನಿಕ ದಾಳಿಗಳನ್ನು ನಡೆಸುವ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ಹಾಗೊಂದು ವೇಳೆ ಅಗತ್ಯ ಬಿದ್ದರೆ ಈ ಅವಕಾಶದ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದರು.

ರಾಜ್ಯಪಾಲ ಶೇಖರ್ ದತ್ ಮತ್ತು ಮುಖ್ಯಮಂತ್ರಿ ರಮಣ್ ಸಿಂಗ್ ಜತೆ ಸ್ಥಳಕ್ಕೇ ಭೇಟಿ ನೀಡಿದ ಚಿದಂಬರಂ, ನಕ್ಸಲರು ತಾವು ಕನಸು ಕಾಣುತ್ತಿರುವ ಗುರಿಯನ್ನು ತಲುಪಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅದು ಅಸಾಧ್ಯ ಎಂದರು.

ನಕ್ಸಲರು ಯುದ್ಧವನ್ನು ನಮ್ಮ ಮೇಲೆ ಹೇರಿದ್ದಾರೆ...
ದೇಶವನ್ನು ವೈರಿ ಮತ್ತು ಸಂಘರ್ಷವನ್ನು ಯುದ್ಧ ಎಂದು ಕರೆದುಕೊಂಡಿರುವುದು ನಕ್ಸಲರು. ಇದು ಅವರ ಪಾಲಿಗೆ ಯುದ್ಧವಾಗಿರಬಹುದು, ಆದರೆ ನಾನು ಯಾವತ್ತೂ ಆ ಶಬ್ದವನ್ನು ಬಳಸಿಲ್ಲ ಎಂದು ಹೇಳಲು ಬಯಸುತ್ತೇನೆ. ಹಾಗಿದ್ದೂ ಅದು ಯುದ್ಧವಾಗಿದ್ದರೆ, ಶಸ್ತ್ರಾಸ್ತ್ರ ಬಳಸಲು ಅಥವಾ ಯಾರನ್ನೂ ಕೊಲ್ಲಲು ಅಧಿಕಾರವಿಲ್ಲದವರಿಂದ ನಮ್ಮ ಮೇಲೆ ಹೇರಲಾಗಿದೆ ಎಂದೇ ನಾವು ಭಾವಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

ನಿನ್ನೆ ಮಾವೋವಾದಿಗಳಿಂದ ಎದುರಾದ ಆಘಾತಕಾರಿ ಅನಿರೀಕ್ಷಿತ ಪ್ರತಿಕ್ರಿಯೆಗಳಿಗೆ ಎಚ್ಚರಿಕೆ ನೀಡಿರುವ ಅವರು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ನಕ್ಸಲರ ಆಳವಾದ ಬೆದರಿಕೆಯನ್ನು ಮಟ್ಟ ಹಾಕಲು ಪ್ರಸಕ್ತ ನಾವು ತಾಳ್ಮೆಯಿಂದಲೇ ಮುಂದುವರಿಯುತ್ತೇವೆ. ಯಾವುದೇ ವಿಚಾರದಲ್ಲಿ ತಕ್ಷಣವೇ ಯಶಸ್ಸು ಸಿಗುವುದು ಅಸಾಧ್ಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ