ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಿತೃತ್ವ ವಿವಾದ; ಉತ್ತರಿಸಲು ತಿವಾರಿಗೆ ಕೊನೆಯ ಅವಕಾಶ (DNA test | N D Tiwari | Rohit Shekhar | Ujjwala Sharma)
Bookmark and Share Feedback Print
 
ಸಾಕಷ್ಟು ಭಾವಚಿತ್ರಗಳಲ್ಲಿ ಮಹಿಳೆ ಮತ್ತು ಆಕೆಯ ಪುತ್ರನ ಜತೆ ಕಾಣಿಸಿಕೊಂಡಿದ್ದರೂ ಯುವಕನ ತಂದೆ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ನೀವು ಡಿಎನ್‌ಎ ಪರೀಕ್ಷೆಗೆ ಯಾಕೆ ಒಳಗಾಗಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕ ಎನ್.ಡಿ. ತಿವಾರಿಯವರನ್ನು ಪ್ರಶ್ನಿಸಿರುವ ದೆಹಲಿ ಹೈಕೋರ್ಟ್, ಉತ್ತರಿಸಲು ಕೊನೆಯ ಅವಕಾಶವನ್ನು ನೀಡಿದೆ.

34ರ ಹರೆಯದ ರೋಹಿತ್ ಶೇಖರ್ ಎಂಬ ಯುವಕ ತನ್ನ ತಂದೆ ತಿವಾರಿ ಎಂದು ವಾದಿಸುತ್ತಿದ್ದಾರೆ. ಇದನ್ನು ನ್ಯಾಯಾಲಯ ಘೋಷಿಸಬೇಕೆಂಬುದು ಅವರ ವಾದ. ಆದರೆ ತಿವಾರಿ ಅದನ್ನು ನಿರಾಕರಿಸುತ್ತಾ ಬಂದಿದ್ದಾರೆ. ಈ ಸಂಬಂಧ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು, ತಿವಾರಿಯವರು ನ್ಯಾಯಾಲಯದ ಎದುರು ಹಾಜರಾಗಲು ವಿಫಲವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾ, ನಾಲ್ಕು ವಾರಗೊಳಗೆ ಉತ್ತರಿಸುವಂತೆ ಆದೇಶ ನೀಡಿದೆ.

ರೋಹಿತ್ ತನ್ನ ತಾಯಿಯೊಂದಿಗೆ ತಿವಾರಿಯವರ ಜತೆಗಿರುವ 200ಕ್ಕೂ ಹೆಚ್ಚು ಭಾವಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಭಿನ್ನ ಕಾರ್ಯಕ್ರಮಗಳಲ್ಲಿ ಅವರು ಜತೆಗಿರುವುದನ್ನು ತೋರಿಸುತ್ತಿದೆ. ಇದಕ್ಕೆ ಮತ್ತು ಡಿಎನ್‌ಎ ಪರೀಕ್ಷೆ ಸಂಬಂಧ ಉತ್ತರಿಸುವಂತೆ ತಿವಾರಿಯವರಿಗೆ ಆದೇಶ ನೀಡಲಾಗಿದೆ.

ನೀವು ಪ್ರತಿಕ್ರಿಯೆ ನೀಡದೇ ಇರುವ ಕಾರಣದಿಂದಾಗಿ ಇಡೀ ವಿವಾದ ಸುದೀರ್ಘ ಅವಧಿಗೆ ಮುಂದುವರಿಯುತ್ತಿದೆ. ನೀವು ಸಮರ್ಥವಾಗಿ ಉತ್ತರಿಸುತ್ತಿದ್ದರೆ ಈ ಪ್ರಕರಣ ಯಾವತ್ತೋ ಮುಗಿದು ಹೋಗುತ್ತಿತ್ತು. ಇದು ನಿಮಗೆ ಕೋರ್ಟ್ ನೀಡುತ್ತಿರುವ ಕೊನೆಯ ಅವಕಾಶ ಎಂದು ನ್ಯಾಯಾಲಯ ತಿವಾರಿಯವರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿಯವರ ವಕೀಲರು ವಿಶೇಷ ರಜಾ ಅರ್ಜಿಯನ್ನು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಅಪೆಕ್ಸ್ ಕೋರ್ಟ್ ನಿಮ್ಮ ಪರವಾಗಿ ತೀರ್ಪು ನೀಡುವವರೆಗೆ ಆ ಅರ್ಜಿ ಊರ್ಜಿತವಲ್ಲ ಎಂದು ತಿಳಿಸಿದೆ.

ತನ್ನ ತಾಯಿ ಉಜ್ವಲಾ ಶರ್ಮಾ ಮತ್ತು ಆಂಧ್ರಪ್ರದೇಶ ಮಾಜಿ ರಾಜ್ಯಪಾಲ ತಿವಾರಿಯವರ ನಡುವಿನ ಸಂಬಂಧದಿಂದ ತಾನು ಹುಟ್ಟಿದ್ದೇನೆ. ತನ್ನ ತಂದೆ ತಿವಾರಿಯವರು ಎಂದು ರೋಹಿತ್ ವಾದಿಸುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಇದನ್ನು ತಳ್ಳಿ ಹಾಕುತ್ತಿದ್ದಾರೆ. ಈ ಸಂಬಂಧ ಕೆಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ