ಹಲವು ಪ್ರಗತಿಪರ ವಿಚಾರಗಳನ್ನು ಮಂಡಿಸುವ ಮತ್ತು ಆಧುನಿಕ ಯುಗದೊಂದಿಗೆ ಸರಿಸಾಟಿಯಾಗಿ ಸಾಗುವ ರಾಜಕಾರಣಿಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಮುಖರು ಎಂದು ಅವರ ಮೇಲಿರುವ ಆರೋಪಗಳ ಹೊರತಾಗಿಯೂ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಇದಕ್ಕೆ ಪೂರಕವೆಂಬಂತೆ ದೇಶದಲ್ಲೇ ಮೊದಲನೇ ಬಾರಿಗೆ ನೂತನ ಮತದಾನ ಪದ್ಧತಿಯನ್ನು ಅವರು ಜಾರಿಗೆ ತರುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮತದಾನವೆನ್ನುವುದು ಕೆಲವೇ ಜನರ ಆಯ್ಕೆಯಾಗುತ್ತಿರುವುದನ್ನು ಮನಗಂಡಿದ್ದ ಮೋದಿ ಸ್ಥಳೀಯ ಚುನಾವಣೆಗಳಲ್ಲಿ ಮತದಾನ ಕಡ್ಡಾಯ ಎಂಬ ನೀತಿ ರೂಪಿಸಿ ಹಲವರ ಹುಬ್ಬೇರಿಸಿದ್ದರು. ಇದೀಗ ರಾಜ್ಯದ ಸ್ಥಳೀಯ ಚುನಾವಣೆಗಳಲ್ಲಿ ಆನ್‌ಲೈನ್ ಓಟಿಂಗ್ ಜಾರಿಗೆ ತರುವ ಚಿಂತನೆಯಲ್ಲಿದ್ದಾರೆ.
ಅಂದರೆ ತಮ್ಮ ಹಕ್ಕು ಚಲಾಯಿಸಲು ಮತದಾರ ಮತದಾನ ಕೇಂದ್ರಕ್ಕೆ ಹೋಗುವ ಬದಲು, ಅದಕ್ಕೂ ಮೊದಲು ಆನ್‌ಲೈನ್ ಮತದಾನಕ್ಕಾಗಿ ನೋಂದಣಿ ಮಾಡಿಕೊಂಡು ಇಂಟರ್ನೆಟ್ ಮೂಲಕ ಮತ ಚಲಾಯಿಸಬಹುದಾಗಿದೆ.
ಇಂತಹ ಪದ್ಧತಿಯನ್ನು ನಮ್ಮ ಸರಕಾರಗಳು ಯಾಕೆ ಜಾರಿಗೆ ತರುತ್ತಿಲ್ಲ ಎನ್ನುವುದು ಐಟಿ ಮಂದಿಯ ಕೂಗಾಗಿತ್ತು. ಆದರೆ ಯಾವುದೇ ಸರಕಾರಗಳು ಅಥವಾ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಮೋದಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಅಹಮದಾಬಾದ್ ಮಹಾನಗರ ಪಾಲಿಕೆ (ಎಎಂಸಿ) ಚುನಾವಣೆಯ ಹೊತ್ತಿಗೆ ಈ ವ್ಯವಸ್ಥೆ ಸಿದ್ಧವಾಗುವ ಸಾಧ್ಯತೆಗಳಿವೆ. ಗುಜರಾತ್ ಚುನಾವಣಾ ಆಯೋಗ ಈ ಕುರಿತು ರಾಜ್ಯ ಸರಕಾರದ ಜತೆ ಸಂಪರ್ಕದಲ್ಲಿದ್ದು, ಅದಕ್ಕಾಗಿ ಪ್ರತ್ಯೇಕ ಘಟಕವೊಂದನ್ನೂ ಸ್ಥಾಪಿಸಿದೆ.
ಗುಜರಾತ್ ಚುನಾವಣಾ ಆಯಕ್ತ ಕೆ.ಸಿ. ಕಪೂರ್ ಈ ಘಟಕದ ಮುಖ್ಯಸ್ಥರು. ಅವರ ಪ್ರಕಾರ ಇ-ವೋಟಿಂಗ್ ಅಕ್ಟೋಬರ್ ಮಧ್ಯದಲ್ಲಿ ಲಭ್ಯವಾಗಬಹುದು. ಈ ಹೊತ್ತಿಗೆ ವಡೋದರ, ಸೂರತ್, ರಾಜಕೋಟ್, ಭಾವನಗರ್ ಮತ್ತು ಜಾಮ್ನಾಗರ್‌ಗಳಲ್ಲಿ ಪಾಲಿಕೆ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ಇ-ವೋಟಿಂಗ್ ವ್ಯವಸ್ಥೆಯನ್ನು ಅಳವಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ವೋಟಿಂಗ್‌ಗಾಗಿ ಸೂಕ್ತ ತಂತ್ರಾಂಶವನ್ನು ರೂಪಿಸಲು ಐಬಿಎಂ, ಟಿಸಿಎಸ್, ಸಿಲ್ವರ್ ಟಚ್, ಮೈಕ್ರೋಟೆಕ್ ಮತ್ತು ಸಿಎಂಎಸ್‌ನಂತಹ ದಿಗ್ಗಜ ಕಂಪನಿಗಳೂ ಮುಂದೆ ಬಂದಿವೆ. ಇದುವರೆಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ.
ಇಲ್ಲಿ ಎರಡು ರೀತಿ ವೋಟಿಂಗ್ ವ್ಯವಸ್ಥೆಗಳನ್ನು ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೊದಲನೆಯದ್ದು ಬಯೋಮೆಟ್ರಿಕ್ ವ್ಯವಸ್ಥೆ. ಇಲ್ಲಿ ನಿರ್ದಿಷ್ಟ ಕಂಪ್ಯೂಟರುಗಳಲ್ಲಿ ಇಂತಹ ವ್ಯವಸ್ಥೆಯನ್ನು ಮಾಡಿರಲಾಗುತ್ತದೆ. ಅಲ್ಲಿಗೆ ಮತ ಚಲಾಯಿಸಲು ಮತದಾರ ತೆರಳಬೇಕಾಗುತ್ತದೆ. ಇಲ್ಲಿ ಮತದಾರನಿಗೆ ಎಟಿಎಂ ಕಾರ್ಡ್‌ನಂತಹ ಕಾರ್ಡ್ ನೀಡಲಾಗುತ್ತದೆ.
ಎರಡನೇ ವಿಧಾನ ಇ-ವೋಟಿಂಗ್ ಬಯಸಿ ಅರ್ಜಿ ಸಲ್ಲಿಸುವವರಿಗೆ ಐಡಿ ಮತ್ತು ಪಾಸ್‌ವರ್ಡ್ ನೀಡುವುದು. ಆ ಮೂಲಕ ಎಲ್ಲಿ ಬೇಕಾದರೂ ನಿಗದಿತ ಸಮಯದಲ್ಲಿ ಆನ್‌ಲೈನ್ ಮೂಲಕ ಮತ ಚಲಾಯಿಸಬಹುದು. ಇದು ಹೆಚ್ಚಿನ ಜನರಿಗೆ ಉಪಯೋಗಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇರ ನಿರ್ದೇಶನದಂತೆ ಇ-ವೋಟಿಂಗ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 2010-11ರ ಬಜೆಟ್‌ನಲ್ಲಿ ಇದಕ್ಕಾಗಿ ಮೋದಿಯವರು ಆರಂಭಿಕ ಮೊತ್ತವೆಂದು ಐದು ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಅದನ್ನು ಅವಶ್ಯಕತೆಗೆ ತಕ್ಕಂತೆ ಹೆಚ್ಚಿಸಲಾಗುತ್ತದೆ ಎಂದು ಸರಕಾರದ ಮೂಲಗಳು ಹೇಳಿವೆ.
ಪ್ರಸಕ್ತ ಅಮೆರಿಕಾ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಸ್ವಿಜರ್ಲೆಂಡ್, ನೆದರ್ಲೆಂಡ್ ಮತ್ತು ಈಸ್ಟೋನಿಯಾ ಮುಂತಾದ ದೇಶಗಳ ಸ್ಥಳೀಯ ಚುನಾವಣೆಗಳಲ್ಲಿ ಆನ್‌ಲೈನ್ ವೋಟಿಂಗ್ ವ್ಯವಸ್ಥೆಯನ್ನು ಬಳಸಲಾಗುತ್ತಿದ್ದು, ಗುಜರಾತ್‌ನಲ್ಲೂ ಜಾರಿಗೆ ತಂದರೆ ಸರದಿಯಲ್ಲಿ ನಿಲ್ಲಲು ಬಯಸದ ಮತ್ತು ಸಮಯದ ಅಭಾವವಿರುವವರು ಮತ ಚಲಾಯಿಸಲು ಸಹಾಯವಾಗುತ್ತದೆ ಎಂದು ಚುನಾವಣಾ ಆಯುಕ್ತ ಕಪೂರ್ ಹೇಳಿದ್ದಾರೆ.