ಗೋಹತ್ಯೆ ವಿರೋಧಿಸಿದ್ದ ಬಿಜೆಪಿ ಶಾಸಕನ ಮನೆಗೆ 'ಸಿಮಿ' ಬೆಂಕಿ?
ಬಾಹ್‌ರೈಚ್, ಗುರುವಾರ, 8 ಏಪ್ರಿಲ್ 2010( 12:48 IST )
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅವ್ಯಾಹತ ಗೋಹತ್ಯೆಯನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ ಶಾಸಕರೊಬ್ಬರ ಮನೆಗೆ ನಿಷೇಧಿತ ಉಗ್ರಗಾಮಿ ಸಂಘಟನೆ 'ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿ ಚಳವಳಿ' (ಸಿಮಿ) ಬೆಂಕಿ ಹಚ್ಚಿದೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಾಹ್‌ರೈಚ್ ಜಿಲ್ಲೆಯ ಮೆಹ್ಸಿ ಎಂಬಲ್ಲಿ. ಇಲ್ಲಿನ ಸುರೇಶ್ವರ್ ಸಿಂಗ್ ಎಂಬ ಬಿಜೆಪಿ ಶಾಸಕನ ಕೊತ್ವಾಲಿ ಎಂಬಲ್ಲಿನ ಮನೆಗೆ ಅಪರಿಚಿತ ವ್ಯಕ್ತಿಗಳು ರಾತೋರಾತ್ರಿ ಕಿಚ್ಚು ಹಚ್ಚಿದ್ದರು. ಪರಿಣಾಮ ಮನೆಯಲ್ಲಿದ್ದ ಅವರ ಸಹೋದರ ದಿನೇಶ್ವರ್ ಸಿಂಗ್ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧ್ಯರಾತ್ರಿ ಹೊತ್ತು ಕೆಲವು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಸುರಿದು ನನ್ನ ಮನೆಗೆ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಕೊಠಡಿಯೊಂದರಲ್ಲಿ ನಿದ್ದೆ ಮಾಡುತ್ತಿದ್ದ ನನ್ನ ಸಹೋದರ ಗಂಭೀರ ಗಾಯಗೊಂಡಿದ್ದಾನೆ ಎಂದು ಶಾಸಕರು ಘಟನೆಯನ್ನು ವಿವರಿಸಿದ್ದು, ಅವರ ಪ್ರಕಾರ ಇದು 'ಸಿಮಿ' ಕಾರ್ಯಕರ್ತರಿಂದ ನಡೆದಿರುವ ಕೃತ್ಯ.
ಲಂಡನ್‌ನ 'ಹಲ್ಲಮ್ ಯುನಿವರ್ಸಿಟಿ'ಯ ಸಂಶೋಧನಾ ವಿಭಾಗದ ಲೆಟರ್ ಹೆಡ್‌ನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಸದಸ್ಯನೆಂದು ಹೇಳಿಕೊಳ್ಳುತ್ತಾ ಬೆದರಿಕೆ ಹಾಕಿರುವ ಪತ್ರವನ್ನು ಬರೆದಿರುವುದನ್ನೂ ಇದೇ ಸಂದರ್ಭದಲ್ಲಿ ಶಾಸಕರು ಬಹಿರಂಗಪಡಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ರಾಮಪಾಟಿ ರಾಮ್ ತ್ರಿಪಾಠಿ, 'ಬಾಹ್‌ರೈಚ್ ಪ್ರದೇಶವು ಸಿಮಿ ಚಟುವಟಿಕೆಗಳ ಪ್ರಮುಖ ತಾಣವಾಗಿದೆ. ಸುರೇಶ್ವರ್ ಸಿಂಗ್ ಅವರು ಗೋಹತ್ಯೆಯ ವಿರುದ್ಧ ದನಿಯೆತ್ತುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸಿಮಿ ಮುಗಿಸಲು ಯತ್ನಿಸಿದೆ. ಪ್ರಕರಣ ಸಂಬಂಧ ಯಾರನ್ನೂ ಬಂಧಿಸದೇ ಇದ್ದಲ್ಲಿ ಏಪ್ರಿಲ್ 9ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.