ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊನೆಯ ತಮ್ಮನೆಂದು ಭಾವಿಸಿ ಕ್ಷಮಿಸಿ ಬಿಡಿ: ಶೋಯಿಬ್ ಮಲಿಕ್ (Shoaib Malik | Sania Mirza | Ayesha Siddiqui | Talaq)
Bookmark and Share Feedback Print
 
ಕಳೆದ ಕೆಲವು ದಿನಗಳಿಂದ ತರಹೇವಾರಿ ಹೇಳಿಕೆಗಳನ್ನು ನೀಡುತ್ತಾ ಎಲ್ಲರ ದಾರಿ ತಪ್ಪಿಸಿ ಅನುಕಂಪ ಗಿಟ್ಟಿಸಲು ಯತ್ನಿಸಿದ್ದ ಶೋಯಿಬ್ ಮಲಿಕ್ ಬಣ್ಣ ಬಯಲಾಗುತ್ತಿದ್ದಂತೆ ಇದೀಗ ಸಣ್ಣ ಸಹೋದರನೆಂದು ಭಾವಿಸಿ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾರೆ.

ಆರಂಭದಿಂದಲೂ ತಾನು ಹೈದರಾಬಾದ್ ಯುವತಿ ಆಯೇಶಾ ಸಿದ್ಧಿಕಿಯನ್ನು ಮದುವೆಯಾಗಿಲ್ಲ ಎಂದು ಹೇಳಿಕೊಂಡು ಬಂದಿದ್ದ ಶೋಯಿಬ್, ಬುಧವಾರ ಆಕೆಗೆ ತಲಾಖ್ ನೀಡಿದ್ದರು. ಆ ಮೂಲಕ ತಾನು ಸಾನಿಯಾ ಮಿರ್ಜಾಳನ್ನು ಆಗುತ್ತಿರುವುದು ಎರಡನೇ ಮದುವೆ ಮತ್ತು ಈ ಹಿಂದೆ ಹೇಳಿದ್ದೆಲ್ಲಾ ಸುಳ್ಳು ಎಂಬ ಸಂದೇಶವನ್ನು ಅವರು ರವಾನಿಸಿದ್ದರು.

ಈ ಸಂಬಂಧ ನಿನ್ನೆಯಿಂದ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಶೋಯಿಬ್, ಇದೀಗ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ತನ್ನ ಹೇಳಿಕೆಯುದ್ಧಕ್ಕೂ ಯಾವುದೇ ವಿವರಗಳನ್ನು ನೀಡದೆ, ಹಾರಿಕೆಯ ಸ್ಪಷ್ಟನೆಗಳನ್ನು ಪಾಕ್ ಆಟಗಾರ ನೀಡಿದ್ದಾರೆ. ಅದರ ಅನುವಾದ ಇಂತಿದೆ.

ಚಿಕ್ಕ ತಮ್ಮನೆಂದು ಭಾವಿಸಿ ನನ್ನನ್ನು ಕ್ಷಮಿಸಿಬಿಡಿ..
ನನಗೆದುರಾದ ಸಮಸ್ಯೆಗಳನ್ನು ಎದುರಿಸಲು ಶಕ್ತಿ ತುಂಬಿದ ಮತ್ತು ಬೆಂಬಲಿಸಿದ 'ಸರ್ವಶಕ್ತ ಅಲ್ಲಾಹು' ಮತ್ತು ಮಾಧ್ಯಮಗಳು, ಪಾಕಿಸ್ತಾನದ ಇಡೀ ಜನತೆಗೆ ನಾನು ಮೊದಲು ಧನ್ಯವಾದ ಹೇಳಲು ಬಯಸುತ್ತೇನೆ. ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ನಿರ್ಧರಿಸಲು ನನಗೆ ಸಾಧ್ಯವಿಲ್ಲ. ಸತ್ಯ ಏನೆಂಬುದು ದೇವರಿಗೆ ಗೊತ್ತಿದೆ.

ಸಮಸ್ಯೆಗಳಿಂದ ಹೊರ ಬರುವ ನಿಟ್ಟಿನಲ್ಲಿ ನಾನು ಸೌಹಾರ್ದಯುತ ಹಾದಿಯನ್ನು ಹಿಡಿದಿದ್ದೇನೆ. ಮಾಧ್ಯಮವು ನನ್ನ ಕುಟುಂಬದ ಭಾಗವಾಗಿದೆ ಎಂಬುದನ್ನು ನಾನು ಮನಗಂಡಿದ್ದು, ನನ್ನ ಮತ್ತು ಸಾನಿಯಾಳ ವೈವಾಹಿಕ ಜೀವನ ಸುಂದರವಾಗಿರಲಿ ಎಂದು ಎಲ್ಲರೂ ನನಗಾಗಿ ಮತ್ತು ಸಾನಿಯಾಳಿಗಾಗಿ ಪ್ರಾರ್ಥಿಸಿ.

ಒಬ್ಬ ಪಾಕಿಸ್ತಾನಿಯಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಅಲ್ಲದೆ ಸಾನಿಯಾಳನ್ನು ಸ್ವಾಗತಿಸಲು ಎಲ್ಲರೂ ಮುಂದಾಗುತ್ತಿರುವುದನ್ನು ನಾನು ಮತ್ತು ಸಾನಿಯಾ ನಿರೀಕ್ಷಿಸುತ್ತಿದ್ದೇವೆ. ನಾನು ಮತ್ತು ಸಾನಿಯಾ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ನಿಮ್ಮ ಬೆಂಬಲಕ್ಕಾಗಿ ಧನ್ಯವಾದ ಹೇಳಲಿದ್ದೇವೆ.

ಬೆಂಬಲ ನೀಡಿರುವುದಕ್ಕೆ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳು. ಕೊನೆಯದಾಗಿ ನಾನು ಗೊತ್ತಿದ್ದು ಅಥವಾ ಗೊತ್ತಿಲ್ಲದೆ ಯಾರಿಗಾದರೂ ನೋವುಂಟು ಮಾಡಿದ್ದರೆ, ದಯವಿಟ್ಟು ನಿಮ್ಮ ಚಿಕ್ಕ ತಮ್ಮನೆಂದು ಭಾವಿಸಿ ನನ್ನನ್ನು ಕ್ಷಮಿಸಿಬಿಡಿ.

- ಶೋಯಿಬ್ ಮಲಿಕ್.

ಡಿಎನ್‌ಎ ಟೆಸ್ಟ್‌ಗೆ ಹೆದರಿದ ಶೋಯಿಬ್...
ಆಯೇಶಾ ಸಿದ್ಧಿಕಿ ತನ್ನ ಜತೆ ಮದುವೆಯಾಗಿರುವುದಕ್ಕೆ ಪ್ರಬಲ ಸಾಕ್ಷ್ಯಗಳನ್ನು ಹೊಂದಿರುವುದಾಗಿ ಬೆದರಿಕೆ ಹಾಕಿದ ನಂತರ ಪೊಲೀಸರು ಡಿಎನ್ಎ ಪರೀಕ್ಷೆ ಪ್ರಸ್ತಾಪ ನಡೆಸಿದ್ದನ್ನು ಕೇಳಿದ ಶೋಯಿಬ್ ಬೆದರಿ ತಲಾಖ್ ನೀಡಲು ಒಪ್ಪಿದ್ದಾರೆಂದು ವರದಿಗಳು ಹೇಳಿವೆ.

ಮದುವೆಯ ನಂತರದ ಪ್ರಸ್ತದ ಸಂದರ್ಭದಲ್ಲಿ ಬಳಸಿದ ಬಟ್ಟೆಗಳು ತನ್ನಲ್ಲಿವೆ ಎಂದು ಹೇಳಿದ್ದ ಆಯೇಶಾ, ತಾನು ಗರ್ಭಿಣಿಯಾಗಿದ್ದೆ ಮುಂತಾದ ಆರೋಪಗಳನ್ನು ಶೋಯಿಬ್ ಮೇಲೆ ಹೊರಿಸಿದ್ದಳು. ಇದನ್ನೇ ಆಧಾರವಾಗಿಟ್ಟುಕೊಂಡು ಡಿಎನ್ಎ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದರಿಂದ ಶೋಯಿಬ್ ಹಿಂದಡಿಯಿಟ್ಟರು ಎಂದು ಹೇಳಲಾಗುತ್ತಿದೆ.

ಎಫ್ಐಆರ್ ವಾಪಸ್ ಪಡೆಯದ ಆಯೇಶಾ...
ಶೋಯಿಬ್ ವಿಚ್ಛೇದನ ನೀಡಿರುವುದರಿಂದ ನಾವು ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದ ಆಯೇಶಾ ಕುಟುಂಬ ಇನ್ನೂ ಎಫ್‌ಐಆರ್ ವಾಪಸ್ ಪಡೆದಿಲ್ಲ ಎಂಬ ಸುದ್ದಿಗಳು ಬಂದಿವೆ.

ಪ್ರಕರಣ ಹಿಂಪಡೆಯದ ಕಾರಣ ತನಿಖೆ ಮುಂದುವರಿದಿದ್ದು, ಈ ಬಗ್ಗೆ ಆಯೇಶಾ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವ ಕಾರಣಕ್ಕಾಗಿ ಪ್ರಕರಣವನ್ನು ವಾಪಸ್ ಪಡೆಯಲಾಗಿಲ್ಲ ಎಂಬುದು ಕೂಡ ಸದ್ಯಕ್ಕೆ ತಿಳಿದು ಬಂದಿಲ್ಲ.

ಹೈದರಾಬಾದ್‌ಗೆ ಶೋಯಿಬ್ ಕುಟುಂಬ...
ಆಯೇಶಾ ಸಿದ್ಧಿಕಿ ಜತೆಗಿನ ಮದುವೆಗೆ ತಲಾಖ್ ನೀಡುತ್ತಿದ್ದಂತೆ ಶೋಯಿಬ್ ಕುಟುಂಬದ ಸದಸ್ಯರು ಮದುವೆ ಕಾರ್ಯಕ್ರಮಕ್ಕಾಗಿ ಇದೀಗ ಹೈದರಾಬಾದ್‌ಗೆ ಆಗಮಿಸಿದ್ದಾರೆ.

ಏಪ್ರಿಲ್ 15ರಂದು ಸಾನಿಯಾ ಜತೆ ನಡೆಯಲಿರುವ ವಿವಾಹಕ್ಕಾಗಿ ಶೋಯಿಬ್ ತಾಯಿ ಸುಲ್ತಾನಾ ಫಾರೂಕ್, ಸಹೋದರ ಆದಿಲ್ ಮಲಿಕ್, ಸಹೋದರಿಯರಾದ ಶಾಜಿಯಾ ಇಮ್ರಾನ್ ಮತ್ತು ಸದಾಫ್ ಇಮ್ರಾನ್, ಸಹೋದರ ಮಕ್ಕಳಾದ ಮಮೂನ್ ಇಮ್ರಾನ್, ಜೈನಬ್ ಇಮ್ರಾನ್ ಸೇರಿದಂತೆ ಏಳು ಮಂದಿ ಇಂದು ಮುಂಜಾನೆ ಭಾರತಕ್ಕೆ ಬಂದಿಳಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ