ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಸ್ರೋ ಮತ್ತೊಂದು ಸಾಧನೆ: ಏ.15ರಂದು ಜಿಎಸ್ಎಲ್‌ವಿ-ಡಿ3 ನಭಕ್ಕೆ
(ISRO | Sriharikota space centre | cryogenic engine | GSLV-D3)
ಇಸ್ರೋ ಮತ್ತೊಂದು ಸಾಧನೆ: ಏ.15ರಂದು ಜಿಎಸ್ಎಲ್‌ವಿ-ಡಿ3 ನಭಕ್ಕೆ
ಬೆಂಗಳೂರು, ಗುರುವಾರ, 8 ಏಪ್ರಿಲ್ 2010( 15:27 IST )
ತಂತ್ರಜ್ಞಾನವನ್ನು ನೀಡಲು ರಷ್ಯಾ ನಿರಾಕರಿಸಿದ ಹಿನ್ನೆಲೆಯಲ್ಲಿ ಸರಿಸುಮಾರು ಎರಡೂ ದಶಕಗಳ ನಿರಂತರ ಸಂಶೋಧನೆ, ಪರಿಶ್ರಮದ ಬಳಿಕ ಮೊಟ್ಟಮೊದಲ ಬಾರಿಗೆ ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಿಸಲಾಗಿರುವ ಕ್ರಯೋಜೆನಿಕ್ ಎಂಜಿನ್ ಸಿದ್ಧವಾಗಿದೆ. ಇದರೊಂದಿಗೆ ಜಗತ್ತಿನ ಗಮನವನ್ನು ಸೆಳೆದಿರುವ ಭಾರತ ಜಿಎಸ್ಎಲ್‌ವಿ-ಡಿ3 ಉಪಗ್ರಹವನ್ನು ಶ್ರೀಹರಿಕೋಟದಿಂದ ಏಪ್ರಿಲ್ 15ರಂದು ಉಡಾವಣೆ ಮಾಡಲಿದೆ.
ಏ.15ರಂದು ಸಂಜೆ 4.27ಕ್ಕೆ ಉಪಗ್ರಹವನ್ನು ಕಕ್ಷೆಗೆ ಹಾರಿಸಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕಲ್ ಪರೀಕ್ಷೆ ಹೊರತುಪಡಿಸಿ, ಉಡಾವಣೆಗೆ ಸಂಬಂಧಿಸಿದಂತೆ ಎಲ್ಲ ಪ್ರಯೋಗಗಳೂ ಅಂತಿಮಗೊಂಡಿವೆ. ಈ ಸಂಬಂಧ ಏ.12ರಂದು ಪರೀಶೀಲನಾ ಸಮಿತಿಯ ಸಭೆ ನಡೆಯಲಿದ್ದು, ನಂತರ ಉಡಾವಣೆಗೆ ಹಸಿರು ನಿಶಾನೆ ದೊರೆಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಉಪಗ್ರಹವನ್ನು ಉಡಾವಣೆ ಸಿದ್ಧಪಡಿಸಲಾಗಿದೆ. 1992ರಿಂದ ಈವರೆಗೆ ನಡೆದ ಪ್ರಯತ್ನದ ಫಲವಾಗಿ ಉಪಗ್ರಹಕ್ಕೆ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ತಯಾರಿಸುತ್ತಿರುವ ಜಗತ್ತಿನ 5 ರಾಷ್ಟ್ರಗಳಲ್ಲಿ ಭಾರತವೂ ಸ್ಥಾನ ಪಡೆದಿದೆ. ದೂರಸಂಪರ್ಕ ಕ್ಷೇತಕ್ಕೆ ಈ ಉಪಗ್ರಹದಿಂದ ಸಾಕಷ್ಟು ಲಾಭವಾಗಲಿದೆ.
ಭಾರತವು ಈ ತಂತ್ರಜ್ಞಾನವನ್ನು ರಷ್ಯಾದಿಂದ ಪಡೆದುಕೊಳ್ಳಲು ಬಯಸಿತ್ತಾದರೂ, ರಷ್ಯಾ-ಅಮೆರಿಕಾ ಒಪ್ಪಂದದಲ್ಲಿ ಇದಕ್ಕೆ ಅವಕಾಶವಿಲ್ಲದೇ ಇದ್ದುದರಿಂದ ಭಾರತ ತೀವ್ರ ನಿರಾಸೆಗೊಳಗಾಗಿತ್ತು. ಆದರೆ ಧೃತಿಗೆಡದ ಭಾರತ 1999ರಿಂದ ಸ್ವಂತ ಕ್ರಯೋಜೆನಿಕ್ ತಂತ್ರಜ್ಞಾನ ಸಿದ್ಧಪಡಿಸಲು ಪಣತೊಟ್ಟಿತ್ತು. ಪ್ರಸಕ್ತ ಅಮೆರಿಕಾ, ರಷ್ಯಾ, ಯೂರೋಪ್, ಜಪಾನ್ ಮತ್ತು ಚೀನಾಗಳು ಮಾತ್ರ ಈ ತಂತ್ರಜ್ಞಾನ ಹೊಂದಿವೆ.
ಮೇಯಲ್ಲಿ ಕಾರ್ಟೊಸ್ಯಾಟ್.. ಶೀಘ್ರದಲ್ಲೇ ಕಾರ್ಟೊಸ್ಯಾಟ್-2ಬಿ ಉಪಗ್ರಹವೂ ಉಡಾವಣೆಗೆ ಸಿದ್ಧವಾಗಲಿದೆ. ಮೇ 10ರಿಂದ 15ರೊಳಗೆ ಇದನ್ನು ನಭಕ್ಕೆ ಹಾರಿಬಿಡಲಾಗುವುದು.
ಜಿ-ಸ್ಯಾಟ್ 5ಪಿ ಜೂನ್ ಇಲ್ಲವೇ ಜುಲೈನಲ್ಲಿ ಉಡಾವಣೆಗೊಳ್ಳಲಿದೆ. ಮಿಕ್ಕಂತೆ, ಪಿಎಸ್ಎಲ್ವಿ- ಸಿ15, ರಿಸೋರ್ಸ್ಸ್ಯಾಟ್-2 ಸೇರಿದಂತೆ ಸಾಕಷ್ಟು ಉಪಗ್ರಹಗಳು ಈಗಾಗಲೇ ಸಿದ್ಧಗೊಂಡಿವೆ. 2013 ಹೊತ್ತಿಗೆ ಚಂದ್ರಯಾನ-2 ಯೋಜನೆಯನ್ನು ಇಸ್ರೊ ಸಾಕಾರಗೊಳಿಸಲು ಸಜ್ಜಾಗುತ್ತಿದೆ.