ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟದ ಪ್ರಮುಖ ರೂವಾರಿ ಯಾಸಿನ್ ಭಟ್ಕಳ್: ಎಟಿಎಸ್
(Indian Mujahideen | Riyaz Bhatkal | Pune blast | Yasin Bhatkal)
ಭಯೋತ್ಪಾದಕ ಸಂಘಟನೆ 'ಇಂಡಿಯನ್ ಮುಜಾಹಿದೀನ್' ಸಂಸ್ಥಾಪಕ ರಿಯಾಜ್ ಅಹ್ಮದ್ ಭಟ್ಕರ್ ಸಂಬಂಧಿ ಎಂದು ಹೇಳಲಾಗಿರುವ ಕರ್ನಾಟಕದ ರಿಯಾಜ್ ಭಟ್ಕಳ್ ಎಂಬಾತ ಪುಣೆ ಸ್ಫೋಟದ ಹಿಂದಿನ ಪ್ರಮುಖ ರೂವಾರಿ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ತನ್ನ ವರದಿಯಲ್ಲಿ ತಿಳಿಸಿದೆ.
ಫೆಬ್ರವರಿ 13ರಂದು ಪುಣೆಯಲ್ಲಿನ ಕೊರೆಗಾನ್ ಪಾರ್ಕ್ ಪ್ರದೇಶದ ಜರ್ಮನ್ ಬೇಕರಿಯಲ್ಲಿ ನಡೆದಿದ್ದ ಸ್ಫೋಟವನ್ನು 'ಸಿಮಿ'ಯ ಅಂಗಸಂಸ್ಥೆ ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾದ ಜತೆ ನಿಕಟ ಸಂಪರ್ಕ ಹೊಂದಿರುವ 'ಇಂಡಿಯನ್ ಮುಜಾಹಿದೀನ್' ನಡೆಸಿರುವುದು ಬಹುತೇಕ ಖಚಿತವಾಗಿದೆ ಎಂದು ಎಟಿಎಸ್ ತನ್ನ ವರದಿಯಲ್ಲಿ ಹೇಳಿದೆ ಎಂದು ಮೂಲಗಳು ಹೇಳಿವೆ.
2008ರ ಮುಂಬೈ ಭಯೋತ್ಪಾದನಾ ದಾಳಿ ಸಂಬಂಧದ ವರದಿಗಳನ್ನು ಈ ಮೊದಲು ಸಲ್ಲಿಸಿದ್ದ ಮಹಾರಾಷ್ಟ್ರ ಎಟಿಎಸ್ ಇದೀಗ ಪುಣೆ ಸ್ಫೋಟದ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ. ತಾನು ಶಂಕಿತ ಆರೋಪಿಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ವರದಿಯಲ್ಲಿ ತಿಳಿಸಿದೆ.
17 ಮಂದಿ ಅಮಯಾಕರ ಸಾವಿಗೆ ಕಾರಣವಾದ ಈ ಸ್ಫೋಟದ ಹಿಂದೆ ಪ್ರಮುಖ ಶಂಕಿತ ಆರೋಪಿಯೆಂದು ಕರ್ನಾಟಕದ ಭಟ್ಕಳ ಗ್ರಾಮದ ಯಾಸಿನ್ ಎಂಬಾತನನ್ನು ಗುರುತಿಸಲಾಗಿದೆ. ಈತ ಭೂಗತನಾಗಿರುವ ರಿಯಾಜ್ ಭಟ್ಕಳ್ ಸಂಬಂಧಿಯೆಂದು ನಾವು ನಂಬಿದ್ದೇವೆ ಎಂದು ಎಟಿಎಸ್ ಮೂಲಗಳು ಹೇಳಿವೆ.
ಈ ಸಂಘಟನೆಯ ಭಾರತೀಯ ಮುಖ್ಯಸ್ಥರಾದ ಕರ್ನಾಟಕದ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಸೇರಿದಂತೆ ಹಲವು ಭಯೋತ್ಪಾದಕರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ತನಿಖೆಗಳು ಮುಂದುವರಿದಿವೆ.
ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಾದ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್‌ನ ಸಹಚರನೊಬ್ಬ (ಇದು ಯಾಸಿನ್ ಎಂಬುದು ಖಚಿತವಾಗಿಲ್ಲ) ಬಸ್ಸಿನಲ್ಲಿ ಭಟ್ಕಳಕ್ಕೆ ಹೋಗಿ ಅಲ್ಲಿಂದ ಸ್ಫೋಟಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ತಂದಿದ್ದ. ಅದನ್ನು ಬಳಸಿ ಪುಣೆಯಲ್ಲಿ ಸ್ಫೋಟ ನಡೆಸಲಾಗಿತ್ತು ಎಂದು ಈ ಹಿಂದೆ ವರದಿಗಳು ಹೇಳಿದ್ದವು.
ಇದರೊಂದಿಗೆ ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಸುಪ್ತವಾಗಿ ನಡೆಯುತ್ತಿರುವುದು ಖಚಿತವಾಗಿದ್ದು, ಸರಕಾರಗಳು ಭಯೋತ್ಪಾದಕರನ್ನು ಮಟ್ಟ ಹಾಕಲು ಯಾವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.