ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಷ್ಟ್ರಪತಿಗೆ ಸೋನಿಯಾ ಗಾಂಧಿ ಹೆಸರಲ್ಲಿ ರಾಂಗ್ ಕಾಲ್ (President | Rashtrapati Bhavan | Sonia Gandhi | Pratibha Patil)
Bookmark and Share Feedback Print
 
ಹೀಗೊಂದು ಕರೆ ಬಂದಿರುವುದು ನಿಜ. ತಾನು ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ ಕಂ ಕಚೇರಿ 10 ಜನಪಥದಿಂದ ಮಾತನಾಡುತ್ತಿದ್ದೇನೆ, ಕಾಂಗ್ರೆಸ್ ಅಧ್ಯಕ್ಷೆಯವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಲ್ಲಿ ತುರ್ತು ಮಾತುಕತೆ ನಡೆಸುವುದಿದೆ ಎಂದು ಅನಾಮಿಕನೊಬ್ಬ ದೂರವಾಣಿ ಕರೆ ಮಾಡಿದ್ದಾನೆ. ಇದರಿಂದಾಗಿ ತೀವ್ರ ತಲೆಕೆಡಿಸಿಕೊಂಡಿರುವ ಪೊಲೀಸರು ಇದೀಗ ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇದು ನಡೆದಿರುವುದು ಮಾರ್ಚ್ 28ರಂದು ಬೆಳಿಗ್ಗೆ ಸರಿಯಾಗಿ 11 ಗಂಟೆಗೆ. ರಾಷ್ಟ್ರಪತಿ ಭವನದ ಹಾಟ್‌ಲೈನ್ ನಂಬರಿಗೆ ಕರೆ ಬಂದಿತ್ತು. ಟೆಲಿಫೋನ್ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ರಾಷ್ಟ್ರಪತಿಯವರ ವೈಯಕ್ತಿಕ ಕಾರ್ಯದರ್ಶಿ ಕರೆ ಸ್ವೀಕರಿಸಿದ್ದರು.

ಶೈಲೇಂದ್ರ ಎಂದು ಹೇಳಿಕೊಂಡ ವ್ಯಕ್ತಿ ರಾಷ್ಟ್ರಪತಿಯವರ ಕಾರ್ಯದರ್ಶಿಯವರಲ್ಲಿ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತನಾಡುತ್ತಾ, ಸೋನಿಯಾ ಗಾಂಧಿಯವರು ಪ್ರತಿಭಾ ಪಾಟೀಲ್ ಅವರ ಭೇಟಿಗಾಗಿ ಮುಂಚಿತವಾಗಿ ಅನುಮತಿ ಪಡೆದಿದ್ದಾರೆ; ಈಗ ಅವರಿಗೆ ತುರ್ತು ಭೇಟಿ ಮಾಡುವುದಿದೆ ಎಂದು ಹೇಳಿದ್ದ.

ಒಂದು ನಿಮಿಷ ಎಂದು ಹೇಳಿದ್ದ ಕಾರ್ಯದರ್ಶಿಯವರು, ರಾಷ್ಟ್ರಪತಿಯವರ ಕಾರ್ಯಕ್ರಮಗಳ ಪಟ್ಟಿಯನ್ನು ನೋಡಲು ಅಲ್ಲೇ ಫೈಲು ನೋಡಲಾರಂಭಿಸಿದರು. ಆಗ ಅಂತಹ ಯಾವುದೇ ಅಪಾಯಿಂಟ್‌ಮೆಂಟ್ ಸೋನಿಯಾ ಪಡೆದಿರುವುದು ಅಲ್ಲಿರಲಿಲ್ಲ. ಇದನ್ನು ಹೇಳೋಣ ಎಂದು ಫೋನೆತ್ತಿದಾಗ ಅತ್ತ ಕಡೆಗಿದ್ದ ವ್ಯಕ್ತಿ ಕರೆ ಕಡಿತಗೊಳಿಸಿದ್ದ.

ತಕ್ಷಣವೇ ಕಾರ್ಯದರ್ಶಿಯವರು ರಾಷ್ಟ್ರಪತಿಯವರ ಕಚೇರಿಯ ಪರವಾಗಿ ರಾಷ್ಟ್ರಪತಿ ಭವನದ ಪೊಲೀಸ್ ಉಪ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಇದೀಗ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ ಇದು ಭಯೋತ್ಪಾದಕರ ಕೃತ್ಯವಲ್ಲ.

ಪ್ರಾಥಮಿಕ ತನಿಖೆಗಳ ಪ್ರಕಾರ ಕಾಂಗ್ರೆಸ್ ಅಧ್ಯಕ್ಷೆಯವರ ಕಚೇರಿಯಲ್ಲಿ ಶೈಲೇಂದ್ರ ಎಂಬ ಹೆಸರಿನ ಯಾವುದೇ ವ್ಯಕ್ತಿ ಕೆಲಸ ಮಾಡುತ್ತಿಲ್ಲ ಮತ್ತು ಅಂದು ಸೋನಿಯಾ ಯಾವುದೇ ಅಪಾಯಿಂಟ್‌ಮೆಂಟ್ ಕೂಡ ಕೇಳಿರಲಿಲ್ಲ. ಹಾಗಾಗಿ ಬಂದಿರುವ ಕರೆ ಕೀಟಲೆ ಅಥವಾ ದಾರಿ ತಪ್ಪಿಸುವ ಕರೆ ಎಂಬುದು ಖಚಿತವಾಗಿದೆ. ಆದರೆ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೆಹಲಿ ಪೊಲೀಸ್ ವಿಶೇಷ ದಳಕ್ಕೆ ಪ್ರಕರಣವನ್ನು ಒಪ್ಪಿಸಿದ್ದಾರೆ.

ಈ ದಳದ ಪ್ರಕಾರ ಕರೆ ಬಂದಿರುವುದು ಸ್ಥಿರ ದೂರವಾಣಿಯಿಂದ. ಆ ಸಂಖ್ಯೆ ಕೂಡ ಲಭ್ಯವಾಗಿದೆ. ಖಂಡಿತಾ ಇದು ಉಗ್ರರ ಮೂಲಗಳಿಂದಲ್ಲ. ಉಳಿದಂತೆ ಹೆಚ್ಚಿನ ವಿವರಗಳನ್ನು ನಾವು ಬಿಟ್ಟುಕೊಡಲಾರೆವು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ