ಮೊದಲ ಹೆಂಡತಿ ಆಯೇಶಾ ಸಿದ್ಧಿಕಿಗೆ ವಿಚ್ಛೇದನ ನೀಡಿರುವ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಮತ್ತು ಸೊಹ್ರಾಬ್ ಮಿರ್ಜಾ ಜತೆಗಿನ ನಿಶ್ಚಿತಾರ್ಥ ಮುರಿದುಕೊಂಡಿದ್ದ ಸಾನಿಯಾ ಮಿರ್ಜಾ ಮದುವೆ ಇಂದು ಸಂಜೆ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ಪಷ್ಟನೆ ನೀಡಿರುವ ಸಾನಿಯಾ ಕುಟುಂಬ, ಮದುವೆ ಏಪ್ರಿಲ್ 15ರಂದೇ ನಡೆಯಲಿದೆ ಎಂದು ತಿಳಿಸಿದೆ.
ಸಾನಿಯಾ-ಶೋಯಿಬ್ ಮದುವೆ ಇಂದು ಸಂಜೆ ಐದು ಗಂಟೆಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಸಾನಿಯಾ ನಿವಾಸದಲ್ಲಿ ನೆರವೇರಲಿದೆ ಎಂದು ಅವರಿಬ್ಬರ ನಿಖಾ ನೆರವೇರಿಸುವ ಹಾಜಿಯೊಬ್ಬರು ಇದನ್ನು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಸಾನಿಯಾ ಮನೆಯೆದುರು ಜಮಾಯಿಸಿದ್ದವು. ಆದರೆ ಇದೀಗ ಸ್ಪಷ್ಟಪಡಿಸಿರುವ ಸಾನಿಯಾ ತಾಯಿ, ಈ ಹಿಂದೆ ನಿಗದಿಯಾದಂತೆ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ.
ಈಗಾಗಲೇ ಶೋಯಿಬ್ ಅವರ ತಾಯಿ, ಸಹೋದರ ಮತ್ತಿತರ ಕುಟುಂಬ ಸದಸ್ಯರು ಹೈದರಾಬಾದ್‌ಗೆ ಆಗಮಿಸಿದ್ದು, ಇಂದು ನಡೆಯುತ್ತಿರುವ ಮದುವೆ ಕಾರ್ಯಕ್ರಮದಲ್ಲಿ ಉಭಯ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಕೇವಲ ಆಪ್ತರು ಮಾತ್ರ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿತ್ತು. ನಿಖಾ ಧಾರ್ಮಿಕ ವಿಧಿವಿಧಾನಗಳನ್ನು ಹಾಜಿ ಅಜ್ಮತುಲ್ಲಾ ಜಾಫ್ರಿಯವರು ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
PTI
ಏಪ್ರಿಲ್ 15ರಂದು ನಗರದ ತಾಜ್ ಕೃಷ್ಣಾದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಅಂದೇ ಮದುವೆ ಕೂಡ ನಡೆಯಲಿದೆ.
ವಿಶೇಷವೆಂದರೆ ಇದೇ ತಾಜ್ ಕೃಷ್ಣಾ ಪಂಚತಾರಾ ಹೊಟೇಲಿನಲ್ಲಿ ಸಾನಿಯಾ ತನ್ನ ಬಾಲ್ಯದ ಗೆಳೆಯ ಸೊಹ್ರಾಬ್ ಮಿರ್ಜಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ವರ್ಷದ ಜುಲೈ 10ರಂದು ಈ ಕಾರ್ಯಕ್ರಮ ನಡೆದಿತ್ತು. ಸಾಮರಸ್ಯ ಕೊರತೆಯ ಕಾರಣವೊಡ್ಡಿ ಈ ನಿಶ್ಚಿತಾರ್ಥವನ್ನು ಜನವರಿ 28ರಂದು ಸಾನಿಯಾ ಮುರಿದುಕೊಂಡಿದ್ದರು. ಇದೀಗ ಮತ್ತೊಬ್ಬ ಯುವಕನನ್ನು ಅದೇ ಹೊಟೇಲಿನಲ್ಲಿ ಸಾನಿಯಾ ಕೈ ಹಿಡಿಯುತ್ತಿದ್ದಾರೆ.
ಶೋಯಿಬ್‌ಗೆ ಕೋಟಿಗಟ್ಟಲೆ ಸುರಿದಿದ್ದೆ... ಶೋಯಿಬ್ ಮಲಿಕ್ ಆರ್ಥಿಕ ಸಂಕಷ್ಟದಲ್ಲಿದ್ದಾಗ ಆತನಿಗೆ ಕೋಟಿಗಟ್ಟಲೆ ಹಣ ನೀಡಿದ್ದೆ ಎಂದು ವಿಚ್ಛೇದನ ಪಡೆದುಕೊಂಡಿರುವ ಅವರ ಮೊದಲ ಪತ್ನಿ ಆಯೇಶಾ ಸಿದ್ಧಿಕಿ ಹೇಳಿಕೊಂಡಿದ್ದಾರೆ.
ಶೋಯಿಬ್‌ರನ್ನು 2002ರಲ್ಲಿ ಭೇಟಿಯಾಗುವ ಸಂದರ್ಭದಲ್ಲಿ ನಾನು ಜೆಡ್ಡಾದ ಹಾಲಾ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದೆ. ನಾವು ನಿಕಟವಾಗುತ್ತಿದ್ದಂತೆ ಅವರು ನನ್ನಿಂದ ಹಣಕಾಸು ಬೆಂಬಲವನ್ನು ಬಯಸಿದ್ದರು. ಆಗ ಅವರು ಸ್ಟಾರ್ ಆಗಿರಲಿಲ್ಲ. ಆದರೂ ನಾನು ಅವರನ್ನು ಪ್ರೀತಿಸಿದ್ದೆ. ಅದೇ ಪ್ರೀತಿಯಿಂದ ಅವರ ಮೇಲೆ ನಾನು ಕೋಟಿಗಟ್ಟಲೆ ಸುರಿದಿದ್ದೆ ಎಂದು ಸಿದ್ಧಿಕಿ ತಿಳಿಸಿದ್ದಾರೆ.
ಅವರಿಗೆ ಸಹಾಯ ಮಾಡಿದ್ದ ಮೊತ್ತವನ್ನು ನಾನು ಲೆಕ್ಕವಿಟ್ಟಿಲ್ಲ. ಸುಮಾರು 10 ಕೋಟಿ ರೂಪಾಯಿಗಳಷ್ಟು ಹಣವನ್ನು ಅವರಿಗೆ ನೀಡಿರಬಹುದು ಎಂದು ಹೇಳುವ ಸಿದ್ಧಿಕಿ, ನಾವು ಮದುವೆಯ ನಂತರ ಕೆಲವು ಸಮಯ ಸಂತೋಷದ ಜೀವನ ನಡೆಸಿದ್ದೆವು; ಆದರೆ ಅವರು ಸ್ಟಾರ್ ಆಟಗಾರನಾದ ನಂತರ ನನ್ನ ತೂಕದ ಬಗ್ಗೆ ದೂರಲಾರಂಭಿಸಿದರು. ನಾನು ಆಕರ್ಷಿತಳಾಗಿಲ್ಲ ಎಂದು ತಗಾದೆ ತೆಗೆಯಲಾರಂಭಿಸಿದರು. ಇದೇ ಕಾರಣದಿಂದ ನಾನು ಡಯಟ್ ಕೈಬಿಡುವಷ್ಟು ನೊಂದುಕೊಂಡಿದ್ದೆ ಎಂದು ಆಯೇಶಾ ಹೇಳಿದ್ದಾರೆ.