ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ದಾಳಿ ಹೊಣೆ; ರಾಜೀನಾಮೆಗೆ ಮುಂದಾದ ಚಿದಂಬರಂ (Home Minister | P Chidambaram | Dantewada massacre | CRPF)
Bookmark and Share Feedback Print
 
ಮಾವೋವಾದಿಗಳಿಂದ ನಡೆದ ಸಿಆರ್‌ಪಿಎಫ್ ಯೋಧರ ಭೀಕರ ನರಮೇಧದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ರಾಜೀನಾಮೆ ಪ್ರಸ್ತಾಪವನ್ನು ಮುಂದಿಟ್ಟಿದ್ದರು ಎಂದು ವರದಿಗಳು ಹೇಳಿವೆ.

ನಕ್ಸಲರು ಪೊಲೀಸರ ಮಾರಣಹೋಮ ನಡೆಸಿದ ದಂತೇವಾಡಕ್ಕೆ ಭೇಟಿ ನೀಡಿ ವಾಪಸ್ಸಾದ ತಕ್ಷಣ ಪ್ರಧಾನಿ ಮತ್ತು ಸೋನಿಯಾಗೆ ಪತ್ರ ಬರೆದಿದ್ದ ಚಿದಂಬರಂ, ಹೊಣೆಗಾರಿಕೆಯಿಂದ ನಾನು ತಪ್ಪಿಸಿಕೊಳ್ಳುತ್ತಿಲ್ಲ; ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಲು ಸಿದ್ಧ ಎಂದು ತಿಳಿಸಿದ್ದರು ಎಂದು ಹೇಳಲಾಗಿದೆ.

ಆದರೆ ಸಚಿವರ ರಾಜೀನಾಮೆಯನ್ನು ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ತಿರಸ್ಕರಿಸಿದ್ದು, ಭಾವನಾತ್ಮಕ ನಿರ್ಧಾರಕ್ಕೆ ಬರದಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಧಾನ ಮಂತ್ರಿಯವರ ಕಚೇರಿ ಕೂಡ ರಾಜೀನಾಮೆ ಪ್ರಸ್ತಾಪ ಮುಂದಿಟ್ಟಿರುವ ವಿಚಾರವನ್ನು ಖಚಿತಪಡಿಸಿದೆ.

ಇದಕ್ಕೂ ಮೊದಲು ಇಂದು ಸಿಆರ್‌ಪಿಎಫ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಚಿವರು, ದಾಳಿಯ ನಂತರ ಇದರ ಹೊಣೆಗಾರಿಕೆ ಯಾರದ್ದು ಎಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನ್ನಲ್ಲಿ ಕೇಳಲಾಗುತ್ತಿತ್ತು. ಇದರ ಜವಾಬ್ದಾರಿಯನ್ನು ನನ್ನ ಕಚೇರಿ ಹೊತ್ತುಕೊಳ್ಳುತ್ತದೆ. ಇದರಿಂದ ನಾನು ನುಣುಚಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.

ನಕ್ಸಲ್ ದಾಳಿಯಿಂದ 75 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ರಾಜ್ಯ ಪೊಲೀಸರೊಬ್ಬರು ಹತರಾದ ಛತ್ತೀಸ್‌ಗಢದ ದಂತೇವಾಡಕ್ಕೆ ಭೇಟಿ ನೀಡಿ ವಾಪಸ್ಸಾದ ನಂತರ ಈ ಹೇಳಿಕೆ ನೀಡಿರುವ ಸಚಿವರು, ಈ ಸಂಬಂಧ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ನಾನು ಪತ್ರ ಬರೆದಿದ್ದು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ ಎಂದರು.

ಈ ಬಗ್ಗೆ ಹೆಚ್ಚೇನೂ ಹೇಳಲು ಬಯಸದ ಅವರು, ವಿಸ್ತರಿಸದೆ ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡರು.

ಸಿಆರ್‌ಪಿಎಫ್‌ನ 'ಶೌರ್ಯ ದಿನ' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಚಿದಂಬರಂ ಅರೆಸೇನಾ ಪಡೆಯ ತ್ಯಾಗವನ್ನು ಶ್ಲಾಘಿಸುತ್ತಾ, ಈ ಸಿಬ್ಬಂದಿಗಳಿಗೆ ಅತ್ಯುನ್ನತ ವೇತನ, ವಸತಿ ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು.

ಅಲ್ಲದೆ ಘಟನೆಯಲ್ಲಿ ಸಾವನ್ನಪ್ಪಿದ ಯೋಧರ ಸಂಬಂಧಿಗಳಿಗೆ ಇದೇ ತಿಂಗಳ ಅಂತ್ಯದೊಳಗೆ ಪರಿಹಾರದ ಮೊತ್ತ ಕೈ ಸೇರುವುದು ಮತ್ತು ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ಉದ್ಯೋಗ ನೀಡುವುದನ್ನು ತನ್ನ ಸಚಿವಾಲಯವು ಖುದ್ದಾಗಿ ಖಚಿತಪಡಿಸಲಿದೆ ಎಂದೂ ಅವರು ಭರವಸೆ ನೀಡಿದ್ದಾರೆ.

ಸರಕಾರವು ಭದ್ರತಾ ಪಡೆಗಳ ಸುರಕ್ಷಿತತೆಯನ್ನು ಸರಕಾರ ನಿರ್ಲಕ್ಷಿಸಿಲ್ಲ, ಅವರನ್ನು ಯಾವತ್ತೂ ಏಕಾಂಗಿಯನ್ನಾಗಿಸಲು ಸರಕಾರ ಬಯಸಿಲ್ಲ ಎಂದಿರುವ ಸಚಿವರು, ಈ ಪಡೆಗಳು ದೇಶದ ಜನತೆ ಸ್ವಾತಂತ್ರ್ಯ, ಮುಕ್ತ ಮತ್ತು ಪ್ರಜಾಪ್ರಭುತ್ವದಡಿಯಲ್ಲಿ ಬದುಕಲು ತಮ್ಮ ಕರ್ತವ್ಯವನ್ನು ನೆರವೇರಿಸಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ