ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಶ್ರೀರಾಮ ಮಂದಿರ ದರ್ಶನಕ್ಕೆ ಅವಕಾಶ ನೀಡಿ: ಸ್ವಾಮಿ
(Ayodhya | Supreme Court | Lord Rama | Subramanian Swamy)
ಅಯೋಧ್ಯೆ ಶ್ರೀರಾಮ ಮಂದಿರ ದರ್ಶನಕ್ಕೆ ಅವಕಾಶ ನೀಡಿ: ಸ್ವಾಮಿ
ನವದೆಹಲಿ, ಶುಕ್ರವಾರ, 9 ಏಪ್ರಿಲ್ 2010( 18:28 IST )
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿರುವ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅಸಮಂಜಸ ನಿರ್ಬಂಧಗಳನ್ನು ಇಲ್ಲಿನ ಆಡಳಿತ ಹೇರಿದೆ, ಇದನ್ನು ತೆರವುಗೊಳಿಸಿ ಭಗವಂತನ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿಯವರ ಮನವಿಗೆ ಸಂಬಂಧಿಸಿದಂತೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ಪೀಠವು, ಈ ಸಂಬಂಧ ಹೊಸ ಅರ್ಜಿಯನ್ನು ಸಲ್ಲಿಸಿದಲ್ಲಿ ಅದನ್ನು ಪರಿಗಣಿಸಲಾಗುವುದು ಎಂದು ಹೇಳಿದೆ.
PTI
ನೀವು ಈ ಸಂಬಂಧ ಸೂಕ್ತ ಅರ್ಜಿಯನ್ನು ಸಲ್ಲಿಸಬೇಕು. ಹಾಗಾದರೆ ಮಾತ್ರ ಪ್ರತಿವಾದಿಗಳು ತಮ್ಮ ಉತ್ತರವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಪೀಠವು ತಿಳಿಸಿದ್ದು, ಮೂರು ವಾರಗಳ ಕಾಲಾವಕಾಶವನ್ನು ಸ್ವಾಮಿಯವರಿಗೆ ನೀಡಿದೆ.
ತಾನು ಶ್ರೀರಾಮ ಮಂದಿರದಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತಿದ್ದೇನೆ ಎಂಬುದು ಸೇರಿದಂತೆ ನ್ಯಾಯಾಲಯದ ಸೂಚನೆಯ ಪ್ರಕಾರ ಹಲವು ಅಂಶಗಳನ್ನೊಳಗೊಂಡ ಅರ್ಜಿಯನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ನಾನು ಸಲ್ಲಿಸಿದ್ದೇನೆ ಎಂದು ಜನತಾ ಪಕ್ಷದ ಮುಖ್ಯಸ್ಥ ತಿಳಿಸಿದ್ದಾರೆ.
ಈ ಹಿಂದಿನ ಇತ್ಯರ್ಥವಾಗದೇ ಉಳಿದಿರುವ ಪ್ರಕರಣದಲ್ಲಿ ಒಬ್ಬ ವಾದಿಯಾಗಿ ನಾನು ಮರುಮನವಿ ಸಲ್ಲಿಸುತ್ತಿದ್ದೇನೆ ಎಂದು ಪೀಠದ ಎದುರು ತಿಳಿಸಿದ ಸ್ವಾಮಿ, ಅಲ್ಲಿ ಪೂಜೆ ಸಲ್ಲಿಸಲು ಹೇರಲಾಗಿರುವ ನಿರ್ಬಂಧಕ್ಕೆ ನನ್ನ ಪ್ರಾರ್ಥನೆಯು ವಿರುದ್ಧವಾಗಿದೆ ಎಂದರು.
ಅದೇ ವೇಳೆ ರಾಮ ಮಂದಿರವನ್ನು ಅದೇ ಸ್ಥಳದಲ್ಲಿ ನಿರ್ಮಿಸುವುದು ಅಥವಾ ನಿರ್ಮಿಸದೇ ಇರುವುದು ನನ್ನ ಪ್ರಶ್ನೆಯಲ್ಲ ಎಂದು ಪೀಠಕ್ಕೆ ಸ್ಪಷ್ಟಪಡಿಸಿರುವ ಸುಬ್ರಮಣ್ಯನ್ ಸ್ವಾಮಿ, ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವುದಕ್ಕೆ ಹೇರಲಾಗಿರುವ ನಿರ್ಬಂಧದ ಕುರಿತು ಮಾತ್ರ ನಾನು ಪ್ರಶ್ನಿಸುತ್ತಿದ್ದೇನೆ ಎಂದರು.
ಅಯೋಧ್ಯೆಯ ಇತ್ಯರ್ಥವಾಗದೆ ಉಳಿದಿರುವ ವಿವಾದಿತ ಸ್ಥಳದಲ್ಲಿರುವ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಆಡಳಿತವು ಅಸಮಂಜಸ ನಿರ್ಬಂಧಗಳನ್ನು ಹೇರಿದೆ ಎಂದು ಅವರು ಆರೋಪಿಸಿದ್ದು, ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಇನ್ನಷ್ಟೇ ಇತ್ಯರ್ಥವಾಗಬೇಕಿರುವ ಅಯೋಧ್ಯೆಯ ವಿವಾದದ ಅಂತಿಮ ತೀರ್ಪಿನ ಹಂಗಿಲ್ಲದೆ ನಾನು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕೆಂದು ಜನವರಿ 29ರಂದು ಸ್ವಾಮಿ ಅರ್ಜಿ ಸಲ್ಲಿಸಿದ್ದರು. ತಾತ್ಕಾಲಿಕ ದೇವಳದಲ್ಲಿರುವ ದೇವರ ಮೂರ್ತಿಗಳನ್ನು ಭಕ್ತಾದಿಗಳು ದರ್ಶನ ಮಾಡಲು ಸೂಕ್ತ ಅವಕಾಶ ನೀಡಬೇಕು ಎಂದಿದ್ದ ಅವರು, ಇದರ ನಿರಾಕರಣೆಯು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದರು.