ಯಾವುದೇ ಕಾರಣಕ್ಕೂ ಗೃಹ ಸಚಿವ ಪಿ. ಚಿದಂಬರಂ ಈ ಹಂತದಲ್ಲಿ ರಾಜೀನಾಮೆಯ ಮಾತುಗಳನ್ನಾಡಬಾರದು ಎಂದು ಹೇಳಿರುವ ಬಿಜೆಪಿ, ಹಾಗೆಲ್ಲಾದರೂ ಮಾಡಿದಲ್ಲಿ ಅದು ನಕ್ಸಲರಿಗೆ ಸರಕಾರ ಶರಣಾದಂತಾಗುತ್ತದೆ; ಮಾವೋವಾದಿ ಗೆರಿಲ್ಲಾಗಳ ಬಲ ಹೆಚ್ಚಿದಂತಾಗುತ್ತದೆ. ಹಾಗಾಗದೆ ಭದ್ರತಾ ಸಿಬ್ಬಂದಿಗಳ ನೈತಿಕ ಸ್ಥೈರ್ಯ ಹೆಚ್ಚಿಸುವ ಸ್ಫೂರ್ತಿದಾಯಕ ಮಾತುಗಳು ಸಚಿವರಿಂದ ಬರಬೇಕು ಎಂದಿದೆ.
ಚಿದಂಬರಂ ಅವರಿಗೆ ಸರಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯವಿದೆ ಎಂದು ಛತ್ತೀಸ್‌ಗಢದಲ್ಲಿ 76 ಭದ್ರತಾ ಸಿಬ್ಬಂದಿಗಳ ಮಾರಣಹೋಮ ನಡೆಸಿದ ನಂತರ ಚಿದಂಬರಂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವರದಿಗಳಿಗೆ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯು ಗೃಹಸಚಿವರ ರಾಜೀನಾಮೆಯನ್ನು ಕೇಳುತ್ತಿಲ್ಲ. ನಾವು ಈ ಕುರಿತು ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿದ್ದೇವೆ. ಚಿದಂಬರಂ ಸಚಿವ ಸ್ಥಾನವನ್ನು ತೊರೆಯಬಾರದು. ಹಾಗೆ ಮಾಡಿದರೆ ಅದು ಮಾವೋವಾದಿಗಳು ಅದನ್ನು ತಮ್ಮ ಜಯವೆಂದು ಪರಿಗಣಿಸುತ್ತಾರೆ ಎಂದರು.
ಮತ್ತೂ ಮುಂದುವರಿಸಿದ ಬಿಜೆಪಿ ನಾಯಕ ಸಚಿವರಿಗೆ ಸಲಹೆ ನೀಡುತ್ತಾ, ಯಾವುದೇ ಕಾರಣಕ್ಕೂ ಹಿಂದಡಿಯಿಡುವ ಬಗ್ಗೆ ಯೋಚನೆ ಮಾಡಬೇಡಿ; ಪರಿಸ್ಥಿತಿಯನ್ನು ಕೆಚ್ಚೆದೆಯಿಂದ ಎದುರಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ. ಮಾವೋವಾದಿಗಳೆದುರು ದೇಶವು ಸೋಲೊಪ್ಪಿಕೊಳ್ಳುವುದನ್ನು ನಾವು ನೋಡಲಾರೆವು ಎಂದರು.
ಯಾವುದೇ ಕಾರಣಕ್ಕೂ ಚಿದಂಬರಂ ತಪ್ಪೊಪ್ಪಿಗೆ ಹೇಳಿಕೆಗಳನ್ನು ನೀಡಬಾರದು. ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅವರು ಸ್ಫೂರ್ತಿದಾಯಕ ಹೇಳಿಕೆಗಳನ್ನು ನೀಡಬೇಕು. ಎಡರಂಗದ ಬಂಡುಕೋರರನ್ನು ಮುಗಿಸುವ ಯುದ್ಧದಲ್ಲಿ ಸರಕಾರಕ್ಕೆ ಬಿಜೆಪಿಯು ಎಲ್ಲಾ ಸಹಕಾರಗಳನ್ನೂ ನೀಡಲಿದೆ ಎಂದು ರೂಡಿ ತಿಳಿಸಿದ್ದಾರೆ.
ಆರೋಪಕ್ಕಿದು ಸಮಯವಲ್ಲ... ಯಾರನ್ನೂ ದೂರಲು ಇದು ಸಮಯವಲ್ಲ, ನಾವು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಬಂಡುಕೋರರನ್ನು ಮಣಿಸಬೇಕಾಗಿದೆ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಛತ್ತೀಸ್‌ಗಢದ ಘಟನೆಯ ಸಂಪೂರ್ಣ ಹೊಣೆ ಹೊತ್ತುಕೊಂಡು ರಾಜೀನಾಮೆಗೆ ಮುಂದಾಗಿರುವ ಚಿದಂಬರಂ ಕುರಿತು ಏನು ಹೇಳುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಮುಖ್ಯಮಂತ್ರಿ, ತಾನು ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಜತೆ ಚರ್ಚೆ ನಡೆಸಿದ್ದೇನೆ; ಅವರ ಅಮೆರಿಕಾ ಮತ್ತು ಬ್ರೆಜಿಲ್ ಪ್ರವಾಸ ಮುಗಿದ ನಂತರ ಮತ್ತೆ ಮಾತುಕತೆ ನಡೆಸುತ್ತೇನೆ. ಇಲ್ಲಿ ನಾವು ಸಂಘಟಿತ ಯತ್ನ ನಡೆಸದ ಹೊರತು ಯಶಸ್ಸು ಗಳಿಸುವುದು ಸುಲಭವಲ್ಲ ಎಂದರು.