ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾಗ್ವತ್ ಹತ್ಯೆಗೆ ಹಿಂದೂ ಸಂಘಟನೆಗಳಿಂದ ಸಂಚು: ಮಹಾರಾಷ್ಟ್ರ (RR Patil | Abhinav Bharat | Sanathan Sanstha | Mohan Bhagwat)
Bookmark and Share Feedback Print
 
ಮಾಲೆಗಾಂವ್ ಸ್ಫೋಟ ಆರೋಪ ಎದುರಿಸುತ್ತಿರುವ ಹಿಂದೂ ಬಲಪಂಥೀಯ ಸಂಘಟನೆಗಳಾದ ಅಭಿನವ್ ಭಾರತ್ ಮತ್ತು ಸನಾತನ ಸಂಸ್ಥೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ತುಚ್ಛೀಕರಿಸುವ ಭಾಷೆಯನ್ನು ಬಳಸಿವೆ. ಅಲ್ಲದೆ ಈ ಮಾತುಕತೆ ಸಂದರ್ಭದಲ್ಲಿ ಹತ್ಯೆಯ ಕುರಿತ ಪ್ರಸ್ತಾಪಗಳೂ ಬಂದಿದ್ದವು ಎಂದು ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ್ ತಿಳಿಸಿದ್ದಾರೆ.

ಮಾಲೆಗಾಂವ್ ಸ್ಫೋಟ ಆರೋಪಿಗಳು ಭಾಗ್ವತ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಗಳಿವೆ. ಇಂತಹ ಮಾತುಕತೆ ನಡೆಸಿರುವ ಆಡಿಯೋ ಟೇಪನ್ನು ಆರೋಪಿಗಳಿಂದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ವಶಪಡಿಸಿಕೊಂಡಿದೆ ಎಂದು ಗೃಹ ಸಚಿವರು ವಿಧಾನಸಭೆಗೆ ತಿಳಿಸಿದ್ದಾರೆ.

ರಾಸಾಯನಿಕ ಬಳಸಿ ಹತ್ಯೆಗೆ ಸಂಚು...
ಸಚಿವ ಪಾಟೀಲ್ ಅವರ ಪ್ರಕಾರ ಆರೋಪಿಗಳು ವ್ಯಕ್ತಿಯೊಬ್ಬನನ್ನು ರಾಸಾಯನಿಕ ಬಳಸಿ ಹತ್ಯೆಗೈಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭಾಗ್ವತ್ ಅವರ ಕುರಿತು ಅವಹೇಳನಕಾರಿ ಮಾತುಕತೆ ನಡೆಸಿದ ಬಹು ಹೊತ್ತಿನ ನಂತರ ಈ ಮಾತುಕತೆ ದಾಖಲಾಗಿದೆ. ಆದರೆ ಎಲ್ಲೂ ಇದು ಭಾಗ್ವತ್ ಅವರನ್ನೇ ಕೊಲ್ಲಲು ಎಂಬ ನೇರ ಅಂಶಗಳಿಲ್ಲ. ಪೊಲೀಸರು ದೂರವಾಣಿ ದಾಖಲೆಗಳಿಂದ ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

ಅವರ ಮಾತುಕತೆಯಲ್ಲಿ ಬಂದಿರುವ ರಾಸಾಯನಿಕವನ್ನು ವ್ಯಕ್ತಿಯ ಚಪ್ಪಲಿಗಳು ಅಥವಾ ಶೂಗಳಿಗೆ ಹಚ್ಚುವ ಯೋಜನೆ ಹಾಕಿದ್ದರು. ಇದನ್ನು ಧರಿಸಿದ ಎರಡರಿಂದ ಮೂರು ದಿನಗಳೊಳಗೆ ವ್ಯಕ್ತಿ ಯಾವುದೇ ಸಂಶಯ ಬಾರದಂತೆ ಸಾವನ್ನಪ್ಪುತ್ತಾನೆ. ಇದನ್ನು ಪರಿಣತ ವೈದ್ಯರು ಅಥವಾ ರಾಸಾಯನಿಕ ತಜ್ಞರಿಗೂ ತಕ್ಷಣ ಪತ್ತೆ ಹಚ್ಚಲು ಸಾಧ್ಯವಾಗದು. ಶವದ ಮರಣೋತ್ತರ ಪರೀಕ್ಷೆಯಲ್ಲೂ ಸಾವಿನ ಕಾರಣವನ್ನು ಪತ್ತೆ ಹಚ್ಚಲಾಗದಂತಹ ವಿಷವಿದು ಎಂದು ಪಾಟೀಲ್ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೇ ತಿಳಿದಿತ್ತು...
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್, ಇಂತಹ ಒಂದು ವರದಿ ಮಾಧ್ಯಮಗಳ ಮೂಲಕ ಎರಡು ವರ್ಷಗಳ ಹಿಂದೆಯೇ ನಮ್ಮ ಗಮನಕ್ಕೆ ಬಂದಿತ್ತು; ಈ ಕುರಿತು ಗಮನ ಹರಿಸಬೇಕಾಗಿರುವುದು ಸರಕಾರ. ನಾವೇನೂ ಹೇಳುವುದಿಲ್ಲ ಎಂದಿದ್ದಾರೆ.

ನಾವು ಇದನ್ನು ತಿಳಿದುಕೊಂಡದ್ದು ಮಾಧ್ಯಮಗಳ ಮೂಲಕ. ಭಾಗ್ವತ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದ ವರದಿಗಳು ಎರಡು ವರ್ಷಗಳ ಹಿಂದೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮುಖ್ಯಸ್ಥರು ಸರಕಾರದಿಂದ ಹೆಚ್ಚಿನ ಭದ್ರತೆ ಪಡೆಯುತ್ತಿದ್ದಾರೆ ಎಂದರು.

ಇದು ಕಾಂಗ್ರೆಸ್, ಎನ್‌ಸಿಪಿ ಕುತಂತ್ರ...
ಮೋಹನ್ ಭಾಗ್ವತ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು ಎಂಬ ಸಚಿವರ ಹೇಳಿಕೆಯನ್ನು ಅಭಿನವ ಭಾರತ್ ಮತ್ತು ಸನಾತನ ಸಂಸ್ಥೆಗಳು ನಿರಾಕರಿಸಿದ್ದು, ಇದು ಕಾಂಗ್ರೆಸ್ ಮತ್ತು ಎನ್‌ಸಿಪಿ ಕುತಂತ್ರ ಎಂದು ಪ್ರತಿದಾಳಿ ನಡೆಸಿವೆ.

ಕೆಲವು ಹಿಂದೂ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ಜತೆ ಸಂಬಂಧ ಹೊಂದಿವೆ ಎಂದು ಎನ್‌ಸಿಪಿ ಶಾಸಕ ಜಿತೇಂದ್ರ ಆವಾದ್ ವಿಧಾನಸಭೆಯಲ್ಲಿ ಆರೋಪಿಸಿರುವುದಕ್ಕೆ ಮತ್ತು ಸಚಿವ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಭಿನವ ಭಾರತ್ ವಕ್ತಾರ ಮಿಲಿಂದ್ ಜೋಶಿ ರಾವ್, ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿರುವ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಅಭಿನವ್ ಭಾರತ್ ಸದಸ್ಯರ ವಿರುದ್ಧದ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯನ್ನು ನ್ಯಾಯಾಲಯ ಕೈ ಬಿಟ್ಟಿದೆ. ಆದರೆ ಅವರಿಗೆ ಇನ್ನೂ ಜಾಮೀನು ನೀಡಲಾಗಿಲ್ಲ. ಏಪ್ರಿಲ್ 12ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಹೀಗಾಗಿ ಸಮಸ್ಯೆಗಳನ್ನು ಸೃಷ್ಟಿಸಲು ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಯತ್ನಿಸುತ್ತಿವೆ ಎಂದು ರಾವ್ ಆರೋಪಿಸಿದ್ದಾರೆ.

ಇದೇ ರೀತಿಯ ಪ್ರತಿಕ್ರಿಯೆಯನ್ನು ಅಭಿನವ ಭಾರತ್ ಅಧ್ಯಕ್ಷ ಹಿಮಾನಿ ಸಾವರ್ಕರ್ ನೀಡಿದ್ದಾರೆ. ನಾವು ಆರೆಸ್ಸೆಸ್ ಮತ್ತು ಅದರ ಮುಖ್ಯಸ್ಥ ಭಾಗ್ವತ್ ಬಗ್ಗೆ ಶ್ರೇಷ್ಠ ಗೌರವ ಹೊಂದಿದ್ದೇವೆ. ಔರಂಗಾಬಾದ್ ಮತ್ತು ನವಿ ಮುಂಬೈ ಚುನಾವಣೆಗಳಲ್ಲಿ ಹೆಚ್ಚು ಮತ ಗಳಿಸಬೇಕೆಂಬ ಉದ್ದೇಶದಿಂದ ಈ ಸುಳ್ಳು ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ