ಸಾನಿಯಾ ಮಿರ್ಜಾ ಮತ್ತು ಶೋಯಿಬ್ ಮಲಿಕ್ ನಡುವೆ ಶುಕ್ರವಾರ ಸಂಜೆಯೇ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ಅದನ್ನು ಕೊನೆಯ ಕ್ಷಣದಲ್ಲಿ ರದ್ದು ಪಡಿಸಲಾಗಿತ್ತು. ಇದರ ಹಿಂದಿರುವ ಕಾರಣ ಆಯೇಶಾ ಸಿದ್ಧಿಕಿ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಂಡಿರುವ ಬಗ್ಗೆ ಅಧಿಕೃತ ದಾಖಲೆ ಮತ್ತು ಶೋಯಿಬ್ ಪಾಸ್‌ಪೋರ್ಟನ್ನು ಪೊಲೀಸರು ಇನ್ನೂ ನೀಡದೇ ಇರುವುದು.
ಏಪ್ರಿಲ್ 15ರಂದೇ ಮದುವೆ ಮತ್ತು ನಿಖಾ ನಡೆಯುತ್ತದೆ ಎಂದು ಹೇಳಲಾಗಿತ್ತಾದರೂ, ಶುಕ್ರವಾರ ಏಪ್ರಿಲ್ 9ರಂದು ಮದುವೆ ಮುಗಿಸಿ ಬಿಡುವ ನಿಲುವಿಗೆ ಉಭಯ ಕುಟುಂಬಗಳು ಬಂದಿದ್ದವು. ದರ್ ಉಲ್ ಖಝಾತ್ ಖಾಜಿ ಅಜ್ಮತುಲ್ಲಾಹ್ ಜಾಫ್ರಿಯವರು ನಿಖಾ ಇಂದೇ ನಡೆಯುತ್ತದೆ ಎಂದು ಶುಕ್ರವಾರ ಬೆಳಿಗ್ಗೆ ಖಚಿತಪಡಿಸಿದ್ದರು.
ಆದರೆ ಶೋಯಿಬ್ ಪಾಸ್‌ಪೋರ್ಟ್ ಮತ್ತು ಕ್ರಿಮಿನಲ್ ಪ್ರಕರಣವನ್ನು ಮುಚ್ಚಲಾಗಿರುವ ಅಗತ್ಯ ದಾಖಲೆಗಳನ್ನು ಒಪ್ಪಿಸಲು ಅಸಾಧ್ಯವಾದ ಕಾರಣ ಮದುವೆ ನಡೆಸಲು ಧಾರ್ಮಿಕ ಮುಖಂಡರು ಒಪ್ಪಿಗೆ ಸೂಚಿಸಲಿಲ್ಲ ಎಂದು ಮೂಲಗಳು ಹೇಳಿವೆ.
ಮೊದಲನೇ ಪತ್ನಿ ಆಯೇಶಾ ಸಿದ್ಧಿಕಿಯವರು ತಲಾಖ್ ನೀಡಬೇಕೆಂದು ಶೋಯಿಬ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಆಟಗಾರನ ಪಾಸ್‌ಪೋರ್ಟನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇದೀಗ ಆಯೇಶಾ ತಲಾಖ್ ಪಡೆದುಕೊಂಡಿದ್ದು, ಪ್ರಕರಣ ಹಿಂದಕ್ಕೆ ಪಡೆದಿದ್ದಾರೆ. ಆದರೆ ಅದರ ಪೂರ್ಣ ದಾಖಲೆಗಳು ಇನ್ನೂ ಶೋಯಿಬ್ ಕೈ ಸೇರಿಲ್ಲ.
ಎರಡನೇ ಮದುವೆ 15ಕ್ಕೆ.. ಸಾನಿಯಾ ಮಿರ್ಜಾರನ್ನು ಶೋಯಿಬ್ ಮಲಿಕ್ ಮಾಡಿಕೊಳ್ಳಲಿರುವ ಎರಡನೇ ಮದುವೆ ಏಪ್ರಿಲ್ 15ರಂದೇ ನಡೆಯುತ್ತದೆ ಎನ್ನುವುದು ಇದೀಗ ಖಚಿತವಾಗಿದೆ.
ಸಾನಿಯಾ ಆಂಟಿ ಹಮೀದಾ ಉಸ್ಮಾನ್, ಸಾನಿಯಾ ತಾಯಿ ನಸೀಮಾ ಇದನ್ನು ಖಚಿತಪಡಿಸಿದ್ದಾರೆ. ಈ ಹಿಂದೆ ನಿಗದಿಯಾದಂತೆ ಏಪ್ರಿಲ್ 15ರಂದು ಗುರುವಾರ ಬೆಳಿಗ್ಗೆ ನಿಖಾ ನಡೆಯುತ್ತದೆ. ಸಂಜೆ ತಾಜ್ ಕೃಷ್ಣ ಪಂಚತಾರಾ ಹೊಟೇಲಿನಲ್ಲಿ ಆರತಕ್ಷತೆ ನಡೆಯುತ್ತದೆ ಎಂದು ಅವರು ಖಚಿತಪಡಿಸಿದ್ದಾರೆ.
ಇದನ್ನು ಹೈದರಾಬಾದ್ ಡೆಕ್ಕನ್ ಮುಖ್ಯ ಖಾಜಿ ನಜಾಮುದ್ದೀನ್ ಕೂಡ ಖಚಿತಪಡಿಸಿದ್ದಾರೆ. ಶುಕ್ರವಾರ ಶೋಯಿಬ್ ಮತ್ತು ಸಾನಿಯಾ ನಿಖಾ ನಡೆಯುತ್ತದೆ ಎಂಬ ವರದಿಗಳು ನಿಜವಲ್ಲ. ಈ ಸಂಬಂಧ ಜಾಫ್ರಿ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ, ನನ್ನ ಅನುಮತಿಯಿಲ್ಲದೆ ಅವರು ಈ ನಿಖಾವನ್ನು ನಡೆಸಲು ಸಾಧ್ಯವಿಲ್ಲ. ಇವರಿಬ್ಬರ ಮದುವೆಯನ್ನು ನಾನೇ ಮುಂದೆ ನಿಂತು ನೆರವೇರಿಸಲಿದ್ದೇನೆ ಎಂದಿದ್ದಾರೆ.
ಶೋಯಿಬ್ ಪ್ರಕರಣದ ಕುರಿತು ಹೈದರಾಬಾದ್ ಎಸಿಪಿ ನರಸಿಂಹ ರೆಡ್ಡಿಯವರನ್ನು ಸಂಪರ್ಕಿಸಿದಾಗ, 'ಶೋಯಿಬ್ ಪ್ರಕರಣ ಮುಕ್ತಾಯಗೊಂಡಿದೆ. ಆದರೆ ಅವರು ತನ್ನ ಪಾಸ್‌ಪೋರ್ಟ್ ಮರಳಿ ಪಡೆಯಬೇಕಾದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು' ಎಂದಿದ್ದಾರೆ.
ಈ ಸಂಬಂಧ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಈಗಾಗಲೇ ಡಿಜಿಪಿಯವರನ್ನು ಭೇಟಿಯಾಗಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಅವರು, ಮದುವೆ ಕಾರ್ಯಕ್ರಮಗಳು ಏಪ್ರಿಲ್ 13ರಂದು ಆರಂಭವಾಗಲಿವೆ ಎಂದಷ್ಟೇ ತಿಳಿಸಿದ್ದಾರೆ.