'ವಿಐಪಿ ಭದ್ರತೆಗೆ ಕೈದಿಗಳ ಭದ್ರತಾ ಪೊಲೀಸರನ್ನು ನೇಮಿಸಬೇಡಿ'
ಮುಂಬೈ, ಶನಿವಾರ, 10 ಏಪ್ರಿಲ್ 2010( 12:44 IST )
ನಿಗದಿತ ದಿನಗಳಂದು ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಎದುರಾಗುತ್ತಿರುವ ಅಡ್ಡಿಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಕೈದಿಗಳಿಗೆ ಭದ್ರತೆ ನೀಡುವ ಪೊಲೀಸರನ್ನು ವಿಐಪಿಗಳಿಗೆ ಭದ್ರತೆ ನೀಡಲು ನಿಯೋಜಿಸುವುದನ್ನು ತಪ್ಪಿಸಬೇಕು ಎಂದು ಹೇಳಿದೆ.
ಸಾಕಷ್ಟು ಪೊಲೀಸರಿಲ್ಲ ಎಂಬ ಕಾರಣಗಳನ್ನು ಮುಂದೊಡ್ಡಿ ವಿಚಾರಣಾಧೀನ ಕೈದಿಗಳನ್ನು ನಿಗದಿತ ವಿಚಾರಣೆಯ ದಿನದಂದು ನ್ಯಾಯಾಲಯಗಳಿಗೆ ಹಾಜರುಪಡಿಸಲು ಹೆಚ್ಚಿನ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು.
ಈ ಸಂದರ್ಭದಲ್ಲಿ ವಾದಿಸಿದ ಹಿರಿಯ ವಕೀಲ ಎಸ್.ಆರ್. ಚಿತ್ನಿಸ್, ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರನ್ನು ವಿಐಪಿಗಳಿಗೆ ಭದ್ರತೆ ಒದಗಿಸಬೇಕೆಂದು ಬದಲಿಯಾಗಿ ನಿಯೋಜಿಸಲಾಗುತ್ತದೆ ಎಂಬುದನ್ನು ಬೆಟ್ಟು ಮಾಡಿ ತೋರಿಸಿದರು.
ವಿಚಾರಣಾಧೀನ ಕೈದಿಗಳಿಗೆ ಭದ್ರತೆ ಒದಗಿಸಬೇಕಾದ ಪೊಲೀಸರನ್ನು ವಿಐಪಿಗಳಿಗೆ ಭದ್ರತೆ ನೀಡಲು ಕಳುಹಿಸುವ ಕಾರಣದಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ತೊಡಕಾಗುತ್ತಿದೆ ಎಂಬ ವಾದವನ್ನು ಸ್ವೀಕರಿಸಿದ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ವಿ.ಕೆ. ತಹಿಲರಾಮನಿಯವರನ್ನೊಳಗೊಂಡ ವಿಭಾಗೀಯ ಪೀಠವು, ಇಂತಹ ಪರಿಸ್ಥಿತಿಯನ್ನು ತಪ್ಪಿಸಬೇಕು; ಕೈದಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಪ್ರಮುಖ ಆದ್ಯತೆಯಾಗಬೇಕು ಎಂದಿತು.
ತಮ್ಮ ವಿಚಾರಣೆಗಳು ಬಾಕಿ ಉಳಿದಿರುವುದರಿಂದ ಬೃಹತ್ ಸಂಖ್ಯೆಯಲ್ಲಿ ಕೈದಿಗಳು ಜೈಲಿನಲ್ಲೇ ಉಳಿಯಬೇಕಾಗಿದೆ ಎಂದು ಗಾಂಧಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.