ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಕ್ಷ ಅನರ್ಹಗೊಳಿಸುವ ಅಧಿಕಾರ ನಮಗಿಲ್ಲ: ಚುನಾವಣಾ ಆಯೋಗ
(de-register party | Election Commission | Naveen Chawla | India)
ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ನೋಂದಾಯಿತ ರಾಜಕೀಯ ಪಕ್ಷಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಈ ಪಕ್ಷಗಳನ್ನು ಅನರ್ಹಗೊಳಿಸುವ ಅಧಿಕಾರ ತನಗಿಲ್ಲ ಎಂದು ತಿಳಿಸಿದೆ.
ಸರಿಸುಮಾರು 1,000 ರಾಜಕೀಯ ಪಕ್ಷಗಳಲ್ಲಿ ಈಗ 700ರಷ್ಟು ಪಕ್ಷಗಳು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂದು 'ನ್ಯಾಷನಲ್ ಎಲೆಕ್ಷನ್ ವಾಚ್' ಎಂಬ ಸರಕಾರೇತರ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ತಿಳಿಸಿದ್ದಾರೆ.
ಇಂತಹ ಪಕ್ಷಗಳ ನೋಂದಾವಣಿಗಳನ್ನು ರದ್ದುಗೊಳಿಸಲು ನಮಗೆ ಯಾವುದೇ ಅಧಿಕಾರವಿಲ್ಲ ಎಂದಿರುವ ಅವರು, ಆಯೋಗವು ಪರಿಷ್ಕರಣೆ ಪ್ರಸ್ತಾಪಗಳನ್ನು ಆಗಾಗ ಕೇಂದ್ರ ಸರಕಾರಕ್ಕೆ ಕಳುಹಿಸುತ್ತಿದೆ ಎಂದರು.
ನಮ್ಮ ತಿದ್ದುಪಡಿ ಪ್ರಸ್ತಾಪಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಜತೆ ಮೇ-ಜೂನ್ ಅವಧಿಯಲ್ಲಿ ನಾವು ಮಾತುಕತೆ ನಡೆಸಲಿದ್ದೇವೆ. ಈ ಸಂದರ್ಭದಲ್ಲಿ ಇಂತಹ ರಾಜಕೀಯ ಪಕ್ಷಗಳ ಪ್ರಸ್ತಾವನೆಯನ್ನೂ ಮಾಡಲಾಗುತ್ತದೆ ಎಂದು ಚಾವ್ಲಾ ತಿಳಿಸಿದ್ದಾರೆ.
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕೆಂಬ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾನ್ ನಿರಂತರ ಬೇಡಿಕೆಯ ಕುರಿತು ಪ್ರಶ್ನಿಸಿದಾಗ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದರು.
ಇದನ್ನು ಮೊದಲು ಮಾಜಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಸಲಹೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ಸರಕಾರವೊಂದು ಬಹುಮತ ಕಳೆದುಕೊಂಡು ಬಿದ್ದಾಗ ಏನು ಮಾಡುವುದು ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ ಎಂದು ಸಮಸ್ಯೆಯನ್ನು ಆಯುಕ್ತರು ಬಿಚ್ಚಿಟ್ಟರು.