ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ವರದಿ ಸುಪ್ರೀಂಗೆ; ಮತ್ತೆ ಸಂಕಷ್ಟದಲ್ಲಿ ಬಳ್ಳಾರಿ ರೆಡ್ಡಿಗಳು (Obulapuram mines | Survey of India | G. Janardhan Reddy | Andhra Pradesh)
Bookmark and Share Feedback Print
 
ಕರ್ನಾಟಕದ ಸಚಿವರುಗಳಾದ ಜಿ. ಜನಾರ್ದನ ರೆಡ್ಡಿ ಮತ್ತು ಜಿ. ಕರುಣಾಕರ ರೆಡ್ಡಿಯವರ ಮಾಲಕತ್ವದ ಓಬಳಾಪುರಂ ಗಣಿ ಕಂಪನಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇವರ ಒಡೆತನದ ಗಣಿಯಲ್ಲಿ ಅರಣ್ಯ ಪ್ರದೇಶದ ಒತ್ತುವರಿ ನಡೆದಿರುವುದನ್ನು ಸರ್ವೇ ಆಫ್ ಇಂಡಿಯಾವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಿಳಿಸಿದೆ.

ಗಣಿ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ ಗಡಿಗಳನ್ನು ಗುರುತಿಸಲು ಸರ್ವೇ ಆಫ್ ಇಂಡಿಯಾದ ಕೇಂದ್ರ ಕಚೇರಿ ನೇತೃತ್ವದಲ್ಲಿ ಆಂಧ್ರಪ್ರದೇಶ ಗಣಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಸರ್ವೇ ಆಫ್ ಇಂಡಿಯಾ ತಂಡವು, ತನ್ನ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಅದರ ಪ್ರಕಾರ ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಗಡಿ ವಿವಾದ ಬಗೆಹರಿಯಬೇಕಾದರೆ ಈ ಭಾಗದಲ್ಲಿನ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಸಲಹೆ ನೀಡಲಾಗಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಆಂಧ್ರಪ್ರದೇಶ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಸರ್ವೇ ಆಫ್ ಇಂಡಿಯಾ ನಡೆಸಿದ್ದ ಸಮೀಕ್ಷೆಯ ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು.

ಸಮೀಕ್ಷೆಯ ವರದಿಗಳನ್ನು ಗಣಿಗಳ ಮಾಲಕರಾದ ರೆಡ್ಡಿ ಸಹೋದರರು ಮತ್ತು ಆಂಧ್ರಪ್ರದೇಶ ಸರಕಾರ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ನೀಡಬೇಕು ಎಂದು ಆದೇಶ ನೀಡಿದ ಪೀಠವು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಓಬಳಾಪುರಂ ಮೈನಿಂಗ್ ಕಂಪನಿಗೆ ಸೇರಿದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಣಿಗಳಲ್ಲಿ ಒಂದನ್ನು ಮಾತ್ರ ಇದೀಗ ಸಮೀಕ್ಷೆ ನಡೆಸಲಾಗಿದೆ. ಈ ಗಣಿಗಾಗಿ ಪಡೆದಿರುವ 68.50 ಹೆಕ್ಟೇರ್ ಗುತ್ತಿಗೆ ಪ್ರದೇಶವನ್ನು ಪರಿಶೀಲನೆ ನಡೆಸಿದಾಗ 100ರಿಂದ 150 ಮೀಟರ್ ವ್ಯತ್ಯಾಸ ಇರುವುದು ಕಂಡು ಬಂದಿದೆ. ಇದರ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ಇನ್ನಷ್ಟು ಸಮೀಕ್ಷೆ ನಡೆಸಬೇಕಾದ ಅಗತ್ಯವಿದೆ ಎಂದು ಸಮೀಕ್ಷೆಯ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ